CovidVaccine| 2ನೇ ಡೋಸ್ ಲಸಿಕೆ ಕಡ್ಡಾಯ ಮಾಡಿ: ತಜ್ಞರು

By Kannadaprabha News  |  First Published Nov 12, 2021, 11:43 AM IST

*  88% ಜನರಿಂದ ಮೊದಲ ಡೋಸ್ ಕೋವಿಡ್ ಲಸಿಕೆ ಸ್ವೀಕಾರ  
*  2ನೇ ಡೋಸ್ ಪಡೆದವರ ಸಂಖ್ಯೆ ಈವರೆಗೆ 50% ಕೂಡ ದಾಟಿಲ್ಲ
*  ಎರಡೂ ಡೋಸ್ ಪಡೆದವರಿಗಷ್ಟೇ ಸಾಮಾಜಿಕ,ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕೊಡಿ 
 


ರಾಕೇಶ್ ಎನ್.ಎಸ್.

ಬೆಂಗಳೂರು(ನ.12): ರಾಜ್ಯದಲ್ಲಿ(Karnataka) ಕೋವಿಡ್-19(Covid19) ಲಸಿಕೆಯ ಎರಡನೇ ಡೋಸ್ ಪಡೆಯಲು ಜನರು ನಿರುತ್ಸಾಹ ತೋರುತ್ತಿರುವುದು ಮತ್ತು ಕೆಲ ದೇಶಗಳಲ್ಲಿ ಕೋವಿಡ್ ಮತ್ತೆ ರಣಕೇಕೆ ಹಾಕುತ್ತಿರುವುದನ್ನು ಗಮನಿಸಿ ಎರಡನೇ ಡೋಸ್ ಪಡೆಯುವುದನ್ನು ಕಡ್ಡಾಯ ಮಾಡಬೇಕು ಎಂದು ಆರೋಗ್ಯ ತಜ್ಞರು(Health Experts) ರಾಜ್ಯ ಸರ್ಕಾರಕ್ಕೆ(Government of Karnataka) ಒತ್ತಾಯ ಮಾಡಿದ್ದಾರೆ.

Latest Videos

undefined

ಕೋವಿಡ್ ಲಸಿಕೆ(Vaccine) ಪಡೆಯಲು ಅರ್ಹರಾಗಿರುವ ವಯಸ್ಕರಲ್ಲಿ ಶೇ.88ರಷ್ಟು ಮಂದಿ ಈಗಾಗಲೇ ಮೊದಲ ಡೋಸ್ ಪಡೆದಿದ್ದಾರೆ. ಆದರೆ ಎರಡನೇ ಡೋಸ್ ಪಡೆದವರ ಸಂಖ್ಯೆ ಶೇ.50 ಮುಟ್ಟಿಲ್ಲ. ಈ ಮಧ್ಯೆ ಲಸಿಕೆಯ ಎರಡನೇ ಡೋಸ್ ಪಡೆಯುವ ಅವಧಿ ಮುಕ್ತಾಯಗೊಂಡಿದ್ದರೂ ಎಷ್ಟೋ ಮಂದಿ ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಕೆಲ ರಾಷ್ಟ್ರಗಳಲ್ಲಿ ಲಸಿಕಾಕರಣದ ಬಗ್ಗೆ ತೋರಿದ್ದ ಅಸಡ್ಡೆಗೆ ಬೆಲೆ ತೆರುವ ಸ್ಥಿತಿ ಬಂದಿದೆ. ಹೀಗಾಗಿ ಕೊರೋನಾ(Coronavirus) ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಮಾತ್ರ ಸಾಮಾಜಿಕ- ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡಬೇಕು. ತನ್ಮೂಲಕ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Vaccine: ಲಸಿಕೆ ಪಡೆಯದಿದ್ರೂ ಮೊಬೈಲ್‌ಗೆ ಮೆಸೇಜ್‌, ಖಾಸಗಿ ಉದ್ಯೋಗಿ ಮನೆಯಲ್ಲಿ 3000 ಡೋಸ್

ಸರ್ಕಾರ ಅನ್‌ಲಾಕ್(Unlock) ಪ್ರಕ್ರಿಯೆ ಆರಂಭಿಸಿ ಒಂದೊಂದೇ ಚಟುವಟಿಕೆಗೆ ಅವಕಾಶ ನೀಡುವ ಸಂದರ್ಭದಲ್ಲಿ ಲಸಿಕೆಯ ಮೊದಲ ಡೋಸ್ ಅನ್ನು ಕಡ್ಡಾಯ ಮಾಡಿತ್ತು. ಆದರೆ ಇದೀಗ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದರೂ ಎರಡನೇ ಡೋಸ್ ಪಡೆದು ಪೂರ್ಣ ಲಸಿಕಾಕರಣಕ್ಕೆ ಒಳಗಾದವರು ಮಾತ್ರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂಬ ಆದೇಶ ಹೊರಡಿಸಿಲ್ಲ. ಆದ್ದರಿಂದ ಜನರು ಎರಡನೇ ಡೋಸ್ ಪಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ತಜ್ಞರು ಹೇಳುತ್ತಾರೆ.

ಮುನ್ನೆಚ್ಚರಿಕೆ ಕ್ರಮ ಪಾಲಿಸಲಿ: 

ಕೊರೋನಾ ವೈರಾಣು ಪ್ರತಿದಿನ ರೂಪಾಂತರಗೊಳ್ಳುತ್ತಿರುತ್ತದೆ. ಜಗತ್ತಿನಲ್ಲಿ ಈವರೆಗೆ ಕೊರೋನಾ ವೈರಾಣುವಿನಲ್ಲಿ 8,572 ರೂಪಾಂತರ ಪತ್ತೆಯಾಗಿದೆ. ಇದೀಗ ಲಸಿಕೆ ಬಂದಿದ್ದರೂ ವೈರಾಣು ಮತ್ತು ಲಸಿಕೆಯ ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ಪೈಪೋಟಿಯಲ್ಲಿ ಲಸಿಕೆ ಗೆದ್ದರೆ ಮಾತ್ರ ಕೊರೋನಾದ ರೂಪಾಂತರವನ್ನು ತಡೆದು ದೊಡ್ಡ ಗಂಡಾಂತರದಿಂದ ಪಾರಾಗಬಹುದು. ಲಸಿಕೆ ಗೆಲ್ಲಬೇಕು ಎಂದಾದರೆ ಜನರು ಪೂರ್ಣ ಪ್ರಮಾಣದಲ್ಲಿ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ರಾಜ್ಯದ ಜಿನೋಮಿಕ್ ಸರ್ವೇಕ್ಷಣೆ ಸಮಿತಿಯ ಸದಸ್ಯ, ಎಚ್‌ಸಿಜಿ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ವಿಶಾಲ್ ರಾವ್ ಹೇಳುತ್ತಾರೆ.

ಈವರೆಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಾದ ಸಾಮಾಜಿಕ ಅಂತರ(Social Distance), ಮಾಸ್ಕ್‌(Mask) ಧಾರಣೆ ಮತ್ತು ಹ್ಯಾಂಡ್ ಸ್ಯಾನಿಟೈಸೇಷನ್(Hand sanitization) ಪಾಲಿಸಿ ಎಂದು ಹೇಳುತ್ತಿದ್ದೆವು. ಆದರೆ ಇನ್ನು ಮುಂದೆ ಕೊರೋನಾ ವೈರಾಣು ರೂಪಾಂತರದ ಪ್ರಭಾವ ತಡೆಯುವ ವರ್ತನೆಗಳಾದ ಎರಡು ಡೋಸ್ ಲಸಿಕೆ, ಸಾಮಾಜಿಕ ಅಂತರದಂತಹ ಕೋವಿಡ್ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು. ಇಲ್ಲದೆ ಹೋದಲ್ಲಿ ನಾವೇ ಹೊಸ ತಳಿ ನಿರ್ಮಾಣಕ್ಕೆ ಕಾರಣಕರ್ತರಾಗುತ್ತೇವೆ ಎಂದು ಎಚ್ಚರಿಸುತ್ತಾರೆ.

Covid 19: ಎಚ್ಚರ! ಕೊರೋನಾ ಇನ್ನೂ ಮುಗಿದಿಲ್ಲ: ಕೇಂದ್ರ

ರಾಜ್ಯದಲ್ಲಿ ಇಂದಿಗೂ 250 ರಿಂದ 350 ಪ್ರಕರಣ ಪ್ರತಿದಿನ ವರದಿಯಾಗುತ್ತಿದೆ. ಪ್ರತಿದಿನ ನೂರು ಮಂದಿ ಕೋವಿಡ್ ಪೀಡಿತರಲ್ಲಿ ನಾಲ್ಕು ಮಂದಿ ಸಾವನ್ನಪ್ಪುತ್ತಿದ್ದಾರೆ(Death). ಇನ್ನೂ ಆರು ತಿಂಗಳ ಕಾಲ ಗರಿಷ್ಠ ಮುನ್ನೆಚ್ಚರಿಕೆ ಇರಲೇಬೇಕು ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಕೋವಿಡ್ ಎರಡನೇ ಅಲೆಯಿಂದ ಆದ ಅನಾಹುತಗಳಿಂದ ಜನರು ಇನ್ನೂ ಪಾಠ ಕಲಿತಂತಿಲ್ಲ. ಲಸಿಕೆ ಪಡೆಯಲು ನಿರ್ಲಕ್ಷ್ಯ ಮಾಡಿದ್ದ ರಷ್ಯಾದಲ್ಲಿಂದು(Russia) ಪ್ರತಿದಿನ ಸಾವಿರಾರು ಮಂದಿ ಕೋವಿಡ್‌ನಿಂದ ಮೃತರಾಗುತ್ತಿದ್ದಾರೆ. ಕೋವಿಶೀಲ್ಡ್‌(Covishield) ಎರಡನೇ ಡೋಸ್ ಪಡೆಯುವ ಅವಧಿಯನ್ನು 12 ವಾರದಿಂದ 6-8 ವಾರಕ್ಕೆ ಇಳಿಸಿದರೆ ಉತ್ತಮ. ಅದೇ ರೀತಿ ಜನ ಸಂಪರ್ಕದಲ್ಲಿ ಕೆಲಸ ಮಾಡುವವರು ಎರಡನೇ ಡೋಸ್ ಪಡೆದಿರಬೇಕು ಎಂಬುದನ್ನು ಕಡ್ಡಾಯ ಮಾಡಿದರೆ ಒಳ್ಳೆಯದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್(Dr CN Manjunath) ಹೇಳುತ್ತಾರೆ.
 

click me!