ಗಡಿ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ್ ಜೊತೆಗೂ ಮಾತುಕತೆ ನಡೆಸುತ್ತೇನೆ. ಕೋರ್ಟ್‌ನಲ್ಲಿ ನಡೆಸಬೇಕಾದ ವಾದದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದ ಬಸವರಾಜು ಬೊಮ್ಮಾಯಿ
ಮೈಸೂರು(ನ.29): ಗಡಿ ವಿವಾದದ ಕುರಿತು ನ.30ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಈ ಸಂಬಂಧ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದದ ಬಗ್ಗೆ ದೆಹಲಿಯಲ್ಲಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಇಂದು(ಮಂಗಳವಾರ) ಭೇಟಿ ಮಾಡುತ್ತೇನೆ. ಗಡಿ ಆಯೋಗದ ಅಧ್ಯಕ್ಷ ಶಿವರಾಜ ಪಾಟೀಲ್ ಜೊತೆಗೂ ಮಾತುಕತೆ ನಡೆಸುತ್ತೇನೆ. ಕೋರ್ಟ್‌ನಲ್ಲಿ ನಡೆಸಬೇಕಾದ ವಾದದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಷ್ಟ್ರದ ಹಲವು ಹಳ್ಳಿಗಳ ಜನ ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಆದರೆ, ಗಡಿ ವಿವಾದ ವಿಚಾರಣೆಯ ಹಂತದಲ್ಲಿರುವುದರಿಂದ ನಾವು ಹೆಚ್ಚು ಮಾತನಾಡುವುದಿಲ್ಲ. ನ.30ರಂದು ಗಡಿ ವಿಚಾರದ ತೀರ್ಪು ಬರುತ್ತದೆ. ಆ ತೀರ್ಪಿನ ಸಾಧಕ-ಬಾಧಕಗಳ ಬಗ್ಗೆ ಪೂರ್ವಚರ್ಚೆ ನಡೆಸುತ್ತೇನೆ. ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲೇ ತೀರ್ಮಾನವಾಗಲಿದೆ ಎಂದರು.
ಗಡಿ ಸಂಘರ್ಷಕ್ಕೆ ಕಿಚ್ಚು: ಡಿ.3ಕ್ಕೆ 2 ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ, ಎಂಇಎಸ್ ಜತೆ ಚರ್ಚೆ
ಮಹಾರಾಷ್ಟ್ರ ಬಸ್‌ಗಳಿಗೆ ಕನ್ನಡ ಬಾವುಟ ಕಟ್ಟಿಕರವೇ ಗಾಂಧಿಗಿರಿ
ಅಥಣಿ: ಮಹಾರಾಷ್ಟ್ರದಲ್ಲಿ ಪುಂಡಾಟಿಕೆ ಮೆರೆದಿದ್ದ ಶಿವಸೇನಾ ಕಾರ್ಯಕರ್ತರ ನಡೆ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಕರವೇ ಕಾರ್ಯಕರ್ತರು ಗಾಂಧಿಗಿರಿ ಪ್ರದರ್ಶಿಸಿದ್ದಾರೆ. ಸೋಮವಾರ ಅಥಣಿಯ ಶಿವಯೋಗಿ ವೃತ್ತದಲ್ಲಿ ಜಮಾಯಿಸಿದ ಕರವೇ (ಪ್ರವೀಣ್ ಶೆಟ್ಟಿಬಣ) ಕಾರ್ಯಕರ್ತರು ಮಹಾರಾಷ್ಟ್ರ ಸಾರಿಗೆ ವಾಹನ ತಡೆದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್, ಎಂಇಎಸ್ ಹಾಗೂ ಶಿವಸೇನೆ ಪುಂಡರ ವಿರುದ್ಧ ಧಿಕ್ಕಾರ ಕೂಗಿದರು. ಜತ್, ಸೊಲ್ಲಾಪುರ, ಅಕ್ಕಲಕೋಟ,ಲಾತೂರ್‌ಗಳನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಿದರು. ಬಳಿಕ, ಚಾಲಕ ಮತ್ತು ನಿರ್ವಾಹಕರಿಗೆ ಕನ್ನಡ ಶಲ್ಯ ನೀಡಿ ಸನ್ಮಾನಿಸಿದರು. ಅಲ್ಲದೆ, ಮಹಾರಾಷ್ಟ್ರದ ವಾಹನಕ್ಕೆ ಕನ್ನಡ ಬಾವುಟ ಕಟ್ಟಿಕಳುಹಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಂತರ, ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ನಡೆಸಿದ ಕರವೇ ಕಾರ್ಯಕರ್ತರು, ಏಕನಾಥ್ ಶಿಂಧೆ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಬೆಳಗಾವಿ ಜಿಲ್ಲೆಯ ಕಾಗವಾಡದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು, ಶಿಂಧೆ ಹಾಗೂ ಫಡ್ನವೀಸ್, ಶಿವಸೇನಾ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿದರು. ಜತ್-ಜಾಂಬೋಟಿ ರಸ್ತೆಯನ್ನು ಬಂದ್ ಮಾಡಿದರು. ಇದರಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.