
ಮುಂಬೈ(ನ.29): ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದ ತಾರಕಕ್ಕೆ ಏರಿರುವ ನಡುವೆಯೇ ಗಡಿ ವಿವಾದ ಕುರಿತ ಮಹಾರಾಷ್ಟ್ರದ ನೋಡಲ್ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭುರಾಜ ದೇಸಾಯಿ ಅವರು ಡಿ.3ರಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಭೇಟಿಯ ವೇಳೆ ಅವರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಆಗ್ರಹಿಸುತ್ತಿರುವ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚಂದ್ರಕಾಂತ ಪಾಟೀಲ, ‘ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ನಮಗೆ ಬೆಳಗಾವಿಗೆ ಭೇಟಿ ನೀಡುವಂತೆ ಪತ್ರ ಬರೆದಿದ್ದರು. ಅದಕ್ಕೆಂದೇ ನಾನು ಹಾಗೂ ಶಂಭುರಾಜ ದೇಸಾಯಿ ಅವರು ಡಿ.3ರಂದು ಬೆಳಗಾವಿಗೆ ಭೇಟಿ ನೀಡಿ ಅವರ ಜತೆ ಇಡೀ ದಿನ ಮಾತುಕತೆ ನಡೆಸುತ್ತೇವೆ. ಅಂದು ಚರ್ಚೆ ನಡೆಸೋಣ. ಮುಂದಿನ ಹೋರಾಟದ ದಾರಿ ಆಗ ಸ್ಪಷ್ಟವಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
BORDER DISPUTE: ಗಡಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ : ಪ್ರಹ್ಲಾದ್ ಜೋಶಿ
ಮಧ್ಯವರ್ತಿ ಎಂಇಎಸ್ನವರು ಸೋಮವಾರ ಬೆಳಗ್ಗೆಯಷ್ಟೇ ಸಚಿವದ್ವಯರಿಗೆ ಬೆಳಗಾವಿಗೆ ಆಹ್ವಾನಿಸಿ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಸಚಿವರು ಭೇಟಿಗೆ ಒಪ್ಪಿಗೆ ಸೂಚಿಸಿದ್ದಾರೆ.
ಗಡಿ ವಿವಾದದ ವಿಚಾರಣೆ ಸುಪ್ರೀಂ ಕೋರ್ಟಲ್ಲಿ ನ.30ರಂದು ನಡೆಯಲಿದೆ. ಕರ್ನಾಟಕದ 865 ಹಳ್ಳಿಗಳು ತನಗೆ ಸೇರಿಬೇಕು ಎಂಬುದು ಮಹಾರಾಷ್ಟ್ರದ ಬೇಡಿಕೆ ಆಗಿದೆ. ಈ ಹೋರಾಟದಲ್ಲಿ ಕಾನೂನು ತಂಡದೊಂದಿಗೆ ಸಮನ್ವಯ ಸಾಧಿಸಲು ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಇಬ್ಬರೂ ಸಚಿವರನ್ನು ನೋಡಲ್ ಮಂತ್ರಿಗಳಾಗಿ ನೇಮಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ