ಹೊಸೂರಿಗೆ ಮೆಟ್ರೋ ಯೋಜನೆ: ಕನ್ನಡ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ!

Published : Aug 04, 2023, 11:48 AM IST
ಹೊಸೂರಿಗೆ ಮೆಟ್ರೋ ಯೋಜನೆ: ಕನ್ನಡ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ!

ಸಾರಾಂಶ

ಬೆಂಗಳೂರು ಹಾಗೂ ಹೊಸೂರು ಸಂಪರ್ಕಿಸುವ ಅಂತಾರಾಜ್ಯ ಮೆಟ್ರೋ ಯೋಜನೆ ಕಾರ್ಯಸಾಧ್ಯತಾ ವರದಿ ಅಧ್ಯಯನ ವಿಚಾರ ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ. ಮೆಟ್ರೋ ವಿಸ್ತರಿಸಿ ತಮಿಳುನಾಡು ಸಂಪರ್ಕಿಸುವ ಯೋಜನೆಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. 

ಬೆಂಗಳೂರು (ಆ.4) :  ಬೆಂಗಳೂರು ಹಾಗೂ ಹೊಸೂರು ಸಂಪರ್ಕಿಸುವ ಅಂತಾರಾಜ್ಯ ಮೆಟ್ರೋ ಯೋಜನೆ ಕಾರ್ಯಸಾಧ್ಯತಾ ವರದಿ ಅಧ್ಯಯನ ವಿಚಾರ ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ. ಮೆಟ್ರೋ ವಿಸ್ತರಿಸಿ ತಮಿಳುನಾಡು ಸಂಪರ್ಕಿಸುವ ಯೋಜನೆಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ಈ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದಿರುವ ಮುಖಂಡರು ಒಗ್ಗಟ್ಟಿನ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಐದು ತಿಂಗಳ ಹಿಂದೆ ಕರ್ನಾಟಕ-ತಮಿಳುನಾಡು ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ಪ್ರಸ್ತಾವ ಬಂದಾಗಲೇ ವಿರೋಧ ವ್ಯಕ್ತವಾಗಿತ್ತು. ಆದರೆ, ಕನ್ನಡಿಗರ ಭಾವನೆ ಲೆಕ್ಕಿಸದೇ ಚೆನ್ನೈ ಮೆಟ್ರೋ ರೈಲ್ವೇ ಲಿಮಿಟೆಡ್‌ ಕಾರ್ಯಸಾಧ್ಯತೆ ವರದಿ ಪಡೆಯಲು ಮುಂದಾಗಿದೆ. ದಕ್ಷಿಣ ಭಾರತದ ಮೊಟ್ಟಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ಇದಾದರೂ ಕನ್ನಡಿಗರಿಗೆ ಎಳ್ಳಷ್ಟೂಪ್ರಯೋಜನವಿಲ್ಲ. ಬದಲಾಗಿ ಈ ಯೋಜನೆ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರಲಿದೆ ಎಂದು ಕನ್ನಡಪರ ಹೋರಾಟಗಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ-ತಮಿಳುನಾಡು ಸಂಪರ್ಕಿಸುವ ದಕ್ಷಿಣದ ಮೊದಲ ಅಂತರಾಜ್ಯ ಮೆಟ್ರೋ ಯೋಜನೆಗೆ ಟೆಂಡರ್‌!

ಒಗ್ಗಟ್ಟಿನ ಹೋರಾಟ:

ಬೇರೆ ಸಾರಿಗೆ ವ್ಯವಸ್ಥೆಗಳಿಗಿಂತಲೂ ಮೆಟ್ರೋ ಮಾಡುವುದರಿಂದ ಸಲೀಸಾಗಿ ತಮಿಳರಿಗೆ ಒಳ ಬರೋದಕ್ಕೆ ಅವಕಾಶ ಮಾಡಿ ಕೊಟ್ಟಂತಾಗಲಿದೆ. ಈ ಬಗ್ಗೆ ಯಾರೇ ಹೋರಾಟ ಮಾಡಿದರೂ ನಾವು ಬೆಂಬಲ ನೀಡಲಿದ್ದೇವೆ. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡಲಿದ್ದೇವೆ. ಚೆನ್ನೈನಿಂದ ಬರುವ ಐಟಿ ಬಿಟಿಯವರಿಂದ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಐಟಿಯವರು ಎಷ್ಟುಜನ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂಬ ಪ್ರಶ್ನೆ ಎತ್ತಿದ್ದಾರೆ.

ರಾಜ್ಯಕ್ಕೆ ಅನಿವಾರ್ಯವಲ್ಲ

ಮೆಟ್ರೋ ಮುಂದುವರಿಸುವುದು ಬೆಂಕಿಯ ಜ್ವಾಲೆ ಹರಿಸಿದಂತಾಗಲಿದೆ. ಈ ಯೋಜನೆ ಮೂಲಕ ಬೆಂಗಳೂರನ್ನು ತಮಿಳರ ಕೈಗೆ ಕೊಡುವ ಕೆಲಸ ಆಗಬಾರದು. ಅಲ್ಲಿಗೆ ಮೆಟ್ರೋ ಮುಂದುವರಿಸುವುದು ಕರ್ನಾಟಕಕ್ಕೆ ಅನಿವಾರ್ಯವಲ್ಲ. ಹೊಸೂರಲ್ಲಿ ಕನ್ನಡಿಗರಿಗೆ ಒಂದಿಷ್ಟುಕೆಲಸ ಸಿಕ್ಕಿದ್ದರೂ ಸಂಚಾರಕ್ಕೆ ಮೆಟ್ರೋ ಮುಂದುವರಿಸುವುದು ಒಂದೇ ಆಯ್ಕೆಯಾಗಿಲ್ಲ. ನಮ್ಮ ಬದಲಾಗಿ ತಮಿಳರೇ ಬೆಂಗಳೂರಿಗೆ ಬಂದು ಆರಾಮಾಗಿ ನೆಲೆಗೊಳ್ಳಲು ಕಾರಣವಾಗಲಿದೆ. ಒಂದು ವೇಳೆ ಮೆಟ್ರೋಗೆ ಅವಕಾಶ ಕೊಟ್ಟಲ್ಲಿ ದೊಡ್ಡ ಹೋರಾಟ ಆಗಲಿದೆ ಎಂಬ ಎಚ್ಚರಿಕೆ ನೀಡುತ್ತೇವೆ ಎಂದು ಹೋರಾಟಗಾರರು ಹೇಳಿದ್ದಾರೆ.

ಕಾವೇರಿ, ಮೇಕೆದಾಟು

ರೈತರಿಗಾಗಿ, ಕುಡಿವ ನೀರಿಗಾಗಿ ಕಾವೇರಿ ಹಾಗೂ ಮೇಕೆದಾಟು ವಿಚಾರ ಬಂದಾಗೆಲ್ಲ ತಮಿಳುನಾಡು ಯಾವ ಧೋರಣೆ ತಳೆಯುತ್ತಿದೆ ಎಂಬುದು ಕಣ್ಣಮುಂದಿದೆ. ಹೀಗಾಗಿ ಅವರು ನಮ್ಮ ಮೆಟ್ರೋ ಮುಂದುವರಿಸಿ ಎಂದು ಹೇರುತ್ತಿರುವ ಅಭಿಪ್ರಾಯಕ್ಕೆ ನಾವು ಓಗೊಡುವ ಅಗತ್ಯಕತೆ ಇಲ್ಲ ಎಂದು ಹೋರಾಟಗಾರರು ಹಿಂದಿನ ಹೋರಾಟಗಳನ್ನು ಕನ್ನಡ ಸಂಘಟನೆಗಳು ಈ ವೇಳೆ ಸ್ಮರಿಸಿವೆ.

ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್‌ ಮಾತನಾಡಿ, ನಮ್ಮ ಮೆಟ್ರೋ ಬೆಂಗಳೂರಿಗೆ ಸೀಮಿತವಾಗಿ ಸೇವೆ ಕಲ್ಪಿಸಿದರೆ ಉತ್ತಮ. ಬೆಂಗಳೂರಿನ ವಿಮಾನ ನಿಲ್ದಾಣ ಸೇರಿ ಮೂಲಸೌಲಭ್ಯವನ್ನು ಬಳಸಿಕೊಂಡೇ ಹೊಸೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕಂಡಿದೆ. ಅಲ್ಲದೇ ಇಲ್ಲಿ ಬರಬೇಕಿದ್ದ ಸಾಕಷ್ಟುಕೈಗಾರಿಕೆಗಳನ್ನು ಅವರು ತಮ್ಮೆಡೆಗೆ ಸೆಳೆದುಕೊಂಡಿದ್ದಾರೆ. ಸಬ್‌ಅರ್ಬನ್‌ ರೈಲು ಹೊಸೂರಿಗೆ ಡಬಲ್‌ ಲೈನ್‌ ಹೋಗುತ್ತಿದೆ. ಅದರ ಬಗ್ಗೆ ಯೋಚನೆ ಮಾಡಬೇಕು. ಅಸ್ತಿತ್ವದ ಪ್ರಶ್ನೆ ಆಗಿರುವುದರಿಂದ ಕನ್ನಡಿಗರು ಈ ಯೋಜನೆ ಮುಂದುವರಿಯುವುದು ಇಷ್ಟಪಡಲಾರರು ಎಂದರು.

ಬೆಂಗಳೂರು: ಬೈಯ್ಯಪ್ಪನಹಳ್ಳಿ-ಕೆ.ಆರ್‌.ಪುರ ಪ್ರಾಯೋಗಿಕ ಸಂಚಾರ ಶುರು

ಕಾವೇರಿ, ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಿರುವುದು, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವಾಗಿಸಬೇಕು ಎಂಬ ತಮಿಳರು ಮನವಿ ಸಲ್ಲಿಸಿದ್ದು ಕನ್ನಡಿಗರು ಮರೆತಿಲ್ಲ. ಅವರಿಗೆ ರೆಡ್‌ ಕಾರ್ಪೆಟ್‌ ಹಾಸುವುದು ಬೇಡ. ಈ ಯೋಜನೆ ವಿರುದ್ಧ ಹೋರಾಟ ನಿಶ್ಚಿತ.

-ಪ್ರವೀಣ್‌ಶೆಟ್ಟಿ, ಕರವೇ ರಾಜ್ಯಾಧ್ಯಕ್ಷ

---

ಈ ಯೋಜನೆ ಕನ್ನಡಿಗರ ಬದಲಾಗಿ ಅನ್ಯ ರಾಜ್ಯದವರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದ್ದು, ಅವರ ವಲಸೆ ಹೆಚ್ಚಾಗುವ ಅಪಾಯವಿದೆ. ಹೀಗಾಗಿ ಬೆಂಗಳೂರು-ಹೊಸೂರು ಮೆಟ್ರೋ ಒಪ್ಪಲು ಸಾಧ್ಯವಿಲ್ಲ.

-ಶಿವರಾಮೇಗೌಡ, ಕರವೇ ರಾಜ್ಯ ಅಧ್ಯಕ್ಷ

ಹಾಗೆ ನೋಡಿದರೆ, ಹೊಸೂರು ಕರ್ನಾಟಕದ ಭಾಗ. ಹೊಸೂರು ಕರ್ನಾಟಕಕ್ಕೆ ಸೇರಬೇಕೆಂದು ಹೊಸೂರು ಪುರಸಭೆಯ ಎದುರು ಹೋರಾಟ ಮಾಡಿದ್ದೆವು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಯಾವುದೇ ಕಾರಣಕ್ಕೂ ಹೊಸೂರಿಗೆ ಮೆಟ್ರೋ ಮುಂದುವರಿಸದಂತೆ ಕೇಳಿಕೊಳ್ಳುತ್ತೇವೆ.

-ವಾಟಾಳ್‌ ನಾಗರಾಜ್‌, ಕನ್ನಡಪರ ಹಿರಿಯ ಹೋರಾಟಗಾ

ತಮಿಳಿಗರು ಯಾವಾಗಲೂ ಕನ್ನಡದ ಮೇಲೆ ತಮ್ಮ ಅಭಿಪ್ರಾಯ ಹೇರುವ ಪ್ರಯತ್ನ ಮಾಡುತ್ತಾರೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ತಲೆದೂಗಿಸಿ ಯೋಜನೆಗೆ ಒಪ್ಪಿಗೆ ನೀಡುವ ಅಗತ್ಯವಿಲ್ಲ.

-ಮಲ್ಲಿಕಾರ್ಜುನ ಮಹಾಮನೆ, ರಂಗಭೂಮಿ ನಿರ್ದೇಶಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ