
ಬೆಂಗಳೂರು (ಜ.22): ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇಂದು ಕೇವಲ ರಾಜಕೀಯ ಭಾಷಣಗಳಿಗಷ್ಟೇ ಅಲ್ಲ, ದೈಹಿಕ ನೂಕುನುಗ್ಗಲಿಗೂ ಸಾಕ್ಷಿಯಾಯಿತು. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ ಹೊರನಡೆದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರನ್ನು ತಡೆಯಲು ಹೋದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹಾಗೂ ಮಾರ್ಷಲ್‌ಗಳ ನಡುವೆ ತೀವ್ರ ಘರ್ಷಣೆ ನಡೆದಿದ್ದು, ಈ ವೇಳೆ ಹರಿಪ್ರಸಾದ್ ಅವರ ಜುಬ್ಬಾ ಹರಿದುಹೋಗಿರುವ ಘಟನೆ ಸಂಭವಿಸಿದೆ.
ರಾಜ್ಯಪಾಲರು ಕೇವಲ ಎರಡು ಸಾಲುಗಳ ಭಾಷಣ ಮಾಡಿ ಸದನದಿಂದ ಹೊರನಡೆಯುತ್ತಿದ್ದಂತೆ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ಅವರನ್ನು ತಡೆಯಲು ಮುಂದಾದರು. ಈ ವೇಳೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ರಾಜ್ಯಪಾಲರ ಹಾದಿಗೆ ಅಡ್ಡಲಾಗಿ ನಿಂತು ಪ್ರತಿಭಟಿಸಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ವಿಧಾನಸಭೆಯ ಮಾರ್ಷಲ್‌ಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ರಾಜ್ಯಪಾಲರಿಗೆ ದಾರಿ ಮಾಡಿಕೊಡಲು ಯತ್ನಿಸಿದರು.
ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಲು ಬಿಡದ ಮಾರ್ಷಲ್‌ಗಳು, ಅವರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಲು ಮುಂದಾದರು. ಈ ವೇಳೆ ನಡೆದ ತಳ್ಳಾಟದಲ್ಲಿ ಮಾರ್ಷಲ್‌ಗಳು ಹರಿಪ್ರಸಾದ್ ಅವರನ್ನು ಎತ್ತಿಕೊಂಡು ಹೋಗಿ ಪಕ್ಕಕ್ಕೆ ತಳ್ಳಿದರು. ಈ ಸಂಘರ್ಷದ ನಡುವೆ ಹರಿಪ್ರಸಾದ್ ಅವರು ಧರಿಸಿದ್ದ ಬಿಳಿ ಬಣ್ಣದ ಜುಬ್ಬಾ ಹರಿದುಹೋಯಿತು. ಇದರಿಂದ ಕೆಲಹೊತ್ತು ಯಾರೂ ಇಲ್ಲದ ಜಾಗದಲ್ಲಿ ನಿಂತುಕೊಂಡು ತಮ್ಮ ಆಪ್ತರಿಗೆ ಬೇರೊಂದು ಜುಬಬಾ ವ್ಯವಸ್ಥೆ ಮಾಡುವುದಕ್ಕೆ ಕರೆ ಮಾಡಿ ತಿಳಿಸಿದರು.
ಸದನದ ಒಳಗೆ ಮತ್ತು ಮೊಗಸಾಲೆಯಲ್ಲಿ ನಡೆದ ಈ ಗದ್ದಲದಿಂದಾಗಿ ಹರಿಪ್ರಸಾದ್ ಅವರು ಹರಿದ ಜುಬ್ಬಾದಲ್ಲೇ ಕೆಲ ಕಾಲ ಓಡಾಡುವಂತಾಯಿತು. ಹಿರಿಯ ನಾಯಕರೊಬ್ಬರ ಜುಬ್ಬಾ ಹರಿದಿರುವುದು ಮತ್ತು ಅವರನ್ನು ಮಾರ್ಷಲ್‌ಗಳು ಬಲವಂತವಾಗಿ ತೆರವುಗೊಳಿಸಿರುವುದು ಆಡಳಿತ ಪಕ್ಷದ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಿದ್ದ ಶಾಸಕರು, ಮಾರ್ಷಲ್‌ಗಳ ನಡೆಯನ್ನೂ ತೀವ್ರವಾಗಿ ಖಂಡಿಸಿದರು. ಈ ಘಟನೆಯು 2026ರ ಜಂಟಿ ಅಧಿವೇಶನದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ದಾಖಲಾಗಿದ್ದು, ಸದನದಲ್ಲಿ ಶಿಸ್ತು ಮತ್ತು ಸಾಂವಿಧಾನಿಕ ಗೌರವದ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಈ ಬಗ್ಗೆ ಬಿಜೆಪಿ ಕೂಡ ಆಕ್ರೋಶ ಹೊರಹಾಕಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯಪಾಲ ಎಂಬುದು ಒಂದು ಸಾಂವಿಧಾನಿಕ ಹುದ್ದೆ. ರಾಜ್ಯಪಾಲರಿಗೆ ಗೌರವ ನೀಡುವುದು ಸಂವಿಧಾನಕ್ಕೆ ಗೌರವ ನೀಡಿದಂತೆ. ಆದರೆ ಇದಾವುದನ್ನೂ ಪರಿಗಣಿಸದೆ ಲೋಕಲ್ ರೌಡಿಯ ರೀತಿ ಬಿ.ಕೆ. ಹರಿಪ್ರಸಾದ್ ಆವಾಜ್ ಹಾಕಿರುವುದು ಅತ್ಯಂತ ಖಂಡನೀಯ. ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಯದ ರೌಡಿ ಬಿ.ಕೆ. ಹರಿಪ್ರಸಾದ್‌ರನ್ನು ಸದನದಿಂದ ಕೂಡಲೇ ಅಮಾನತು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ