
ಬೆಂಗಳೂರು (ಜ.22): ಕರ್ನಾಟಕ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವು ಇಂದು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಸಂವಿಧಾನದ ನಿಯಮಾವಳಿಯಂತೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು, ಸುದೀರ್ಘ ಭಾಷಣವನ್ನು ಓದದೇ ಕೇವಲ ಒಂದೇ ಸಾಲಿನಲ್ಲಿ ಮುಕ್ತಾಯಗೊಳಿಸಿ ಸದನದಿಂದ ಹೊರನಡೆದ ಘಟನೆ ನಡೆದಿದೆ.
ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಪಾಲರು ಸರ್ಕಾರದ ಸಾಧನೆಗಳನ್ನೊಳಗೊಂಡ ಸುದೀರ್ಘ ಭಾಷಣ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, "ನನ್ನ ಸರ್ಕಾರದ ಸಾಮಾಜಿಕ ಕಾರ್ಯಗಳು ಮುಂದುವರೆಯುತ್ತವೆ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು" ಎಂದು ಕೇವಲ ಒಂದೇ ಸಾಲಿನಲ್ಲಿ ತಮ್ಮ ಭಾಷಣಕ್ಕೆ ಇತಿಶ್ರೀ ಹಾಡಿದರು. ಸರ್ಕಾರದ ಸಾಧನೆಗಳ ಪಟ್ಟಿಯನ್ನು ಓದದೆ ಅಧಿವೇಶನದಿಂದ ಹೊರಬಂದ ರಾಜ್ಯಪಾಲರ ನಡೆ ಆಡಳಿತ ಪಕ್ಷದ ನಾಯಕರನ್ನು ಅಚ್ಚರಿಗೀಡು ಮಾಡಿತು.
ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿ ಹೊರನಡೆಯುತ್ತಿದ್ದಂತೆ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಅವರಿಗೆ ಘೇರಾವ್ ಹಾಕಲು ಯತ್ನಿಸಿದರು. ಸರ್ಕಾರದ ಕಾರ್ಯಕ್ರಮಗಳನ್ನು ಪ್ರಸ್ತಾಪಿಸದೆ ತೆರಳುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವೇ ಸ್ವತಃ ರಾಜ್ಯಪಾಲರ ಬೆಂಗಾವಲಾಗಿ ತೆರಳಿದರು. ವಿಧಾನಸೌಧದ ಪೋರ್ಟಿಕೋವರೆಗೂ ರಾಜ್ಯಪಾಲರ ಜೊತೆಗೇ ನಡೆದ ಮುಖ್ಯಮಂತ್ರಿಗಳು, ಅವರನ್ನು ಮನವೊಲಿಸಲು ಪ್ರಯತ್ನ ನಡೆಸಿದರು. ರಾಜ್ಯಪಾಲರ ಕಾರಿನವರೆಗೂ ಹೋದ ಸಿದ್ದರಾಮಯ್ಯ ಅವರು ಕೆಲ ಕಾಲ ಚರ್ಚೆ ನಡೆಸಿದರಾದರೂ, ಗೆಹಲೋತ್ ಅವರು ಅಲ್ಲಿಂದ ನಿರ್ಗಮಿಸಿದರು.
ಸಾಮಾನ್ಯವಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ರಾಜ್ಯಪಾಲರು ಓದುವುದು ಸಂಪ್ರದಾಯ. ಆದರೆ ಇಂದು ರಾಜ್ಯಪಾಲರು ಭಾಷಣವನ್ನು ಓದದೆ ಕೇವಲ ಶುಭಾಶಯ ಕೋರಿ ತೆರಳಿರುವುದು ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲ ಸಮರಕ್ಕೆ ಸಾಕ್ಷಿಯಾಗಿದೆ. ಈ ಘಟನೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ