
ಬೆಂಗಳೂರು/ತುಮಕೂರು : ಜಾಗತಿಕ ಸವಾಲುಗಳನ್ನು ಪರಿಹರಿಸುವ ಶಕ್ತಿ ಭಾರತೀಯ ನವೋದ್ಯಮಗಳಿಗೆ ಇದೆ. ಯುವ ಜನತೆ ಆವಿಷ್ಕಾರ, ತಂತ್ರಜ್ಞಾನ ಮತ್ತು ಹೊಸ ಉದ್ಯೋಗಗಳ ಸೃಷ್ಟಿ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.
ಬುಧವಾರ ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 25ನೇ ವರ್ಷದ ಬೆಳ್ಳಿ ಮಹೋತ್ಸವ ಮತ್ತು ಇನ್‌ಕ್ಯುಬೇಷನ್ ಸೆಂಟರ್ ಮತ್ತು ಆಧುನಿಕ ವ್ಯವಸ್ಥೆಯುಳ್ಳ ಸಿಲ್ವರ್ ಜ್ಯುಬಿಲಿ ಆಡಿಟೋರಿಯಂ ಉದ್ಘಾಟಿಸಿ ಮಾತನಾಡಿದರು.
ಹವಾಮಾನ ಬದಲಾವಣೆ ಮತ್ತು ಎಐ ನೈತಿಕ ಬಳಕೆಯಂಥ ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯ ನವೋದ್ಯಮಗಳು ವಿಶ್ವಕ್ಕೆ ಮಾದರಿಯಾಗಿ ಹೊರಹೊಮ್ಮುತ್ತಿವೆ. 2047ರ ವೇಳೆಗೆ ಭಾರತ ವಿಕಸಿತ ಭಾರತವಾಗುವ ಗುರಿ ಹೊಂದಿದೆ. ದೇಶದ ಯುವ ಶಕ್ತಿ ಈ ಕನಸು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣವಿಲ್ಲದ್ದಿದ್ದರೆ ಯಾರಿಗೂ ಭವಿಷ್ಯವಿಲ್ಲ. ಯುವಜನತೆ ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ, ಖಗೋಳ, ವೈದ್ಯಕೀಯ ಸೇರಿ ಆಸಕ್ತಿ ಹೊಂದಿರುವ ಎಲ್ಲ ಕ್ಷೇತ್ರಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು. ಹಾಗೆಯೇ ಕಾಲೇಜುಗಳು ಕೇವಲ ಕಲಿಕಾ ಕೇಂದ್ರಗಳಲ್ಲ, ನಾವೀನ್ಯತೆಗಳ ಪ್ರಯೋಗಾಲಯಗಳಾಗಬೇಕು. ವಿದ್ಯಾರ್ಥಿಗಳಲ್ಲಿ ರೂಪುಗೊಳ್ಳುವ ಜವಾಬ್ದಾರಿಯುತ ನಾಯಕತ್ವಕ್ಕೆ ಸಹಕಾರಿಯಾಗಬೇಕು. ಆಗ ಮಾತ್ರ ಮೇಕ್ ಇನ್ ಇಂಡಿಯಾ, ವಿಕಸಿತ ಭಾರತ್, ಮೇಡ್ ಇನ್ ಇಂಡಿಯಾ ಯೋಜನೆಗಳ ಯಶಸ್ವಿಯಾಗಲು ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಿಎಂಆರ್ ಸಂಸ್ಥೆಯಲ್ಲಿ ಉದ್ಘಾಟನೆಗೊಂಡ ಇನ್‌ಕ್ಯುಬೇಶನ್ ಸೆಂಟರ್ ‘ಸ್ಟಾರ್ಟ್‌ಅಪ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನ ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕೇಂದ್ರವು ನಾವೀನ್ಯತೆಯನ್ನು ಬೆಳೆಸುತ್ತದೆ, ಯುವಜನರ ಆಲೋಚನೆಗಳನ್ನು ಉದ್ಯಮಗಳಾಗಿ ಪರಿವರ್ತಿಸುತ್ತದೆ. ಇಲ್ಲಿಂದ ಹೊರಹೊಮ್ಮುವ ಸ್ಟಾರ್ಟ್‌ಅಪ್‌ಗಳು ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಬೆಳೆಯಲಿವೆ ಮತ್ತು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.
ತಂತ್ರಜ್ಞಾನದ ಬಳಕೆ ಮಾನವೀಯತೆಗೆ ಪ್ರಯೋಜನವಾದಾಗ ಮಾತ್ರ ಅದು ಅರ್ಥಪೂರ್ಣವಾಗಿರುತ್ತದೆ. ದೇಶವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಎಂಬ ಗುರಿಯತ್ತ ಸಾಗುತ್ತಿದೆ. ಈ ಗುರಿ ಸಾಧಿಸುವಲ್ಲಿ ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ನಾವೀನ್ಯಕಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ ಯುವಜನರ ಹೆಗಲ ಮೇಲೆ ನಿಂತಿದೆ. ಯುವಜನತೆಯ ಪ್ರತಿಭೆಯನ್ನು ವೈಯಕ್ತಿಕ ಯಶಸ್ಸು ಮತ್ತು ರಾಷ್ಟ್ರ ನಿರ್ಮಾಣ ಎರಡಕ್ಕೂ ಬಳಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಿಎಂಆರ್ ಸಂಸ್ಥೆಗಳ ಸಮೂಹದ ಅಧ್ಯಕ್ಷ ಕೆ.ಸಿ. ರಾಮಮೂರ್ತಿ, ಜ್ಞಾನಧಾರ ಟ್ರಸ್ಟ್ ಅಧ್ಯಕ್ಷೆ ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ। ಸವಿತಾ ರಾಮಮೂರ್ತಿ ಇದ್ದರು.
ಅನಿಶ್ಚಿತತೆ, ವಿಭಜನೆ ಮತ್ತು ಅಶಾಂತಿಯನ್ನು ಸೃಷ್ಟಿಸುತ್ತಿರುವ ಈ ಯುಗದಲ್ಲಿ ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಜೀವನ ನೈತಿಕ ದಿಕ್ಕನ್ನು ಸೂಚಿಸುವ ಪ್ರಜ್ವಲಿಸುವ ನಂದಾದೀಪವಾಗಿದೆ ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಬಣ್ಣಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ 7ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾಗಿ 7 ವರ್ಷ ತುಂಬಿದರೂ ಶ್ರೀಗಳ ಸಾನಿಧ್ಯ ಒಂದಿಷ್ಟೂ ಕುಂದಿಲ್ಲ. ಬದಲಾಗಿ ಇನ್ನೂ ಪ್ರಕಾರವಾಗಿದೆ. ಶಿವಕುಮಾರ ಸ್ವಾಮೀಜಿ ಶ್ರೀಮಠವನ್ನು ಕೇವಲ ಆಧ್ಯಾತ್ಮಿಕ ಕೇಂದ್ರವಾಗಿಸದೆ ಸಮಾಜಮುಖಿಯಾಗಿ ಮಾದರಿಯಾಗಿಸಿದ್ದಾರೆ. ಪ್ರಸ್ತುತ ಸ್ವಾಮೀಜಿಯವರು ತ್ರಿವಿಧ ದಾಸೋಹವನ್ನು ಮುಂದುವರಿಸುತ್ತಾ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.
ಶ್ರೀಗಳು ಅಸಾಮಾನ್ಯ ಸರಳತೆ, ಅಪೂರ್ವ ನೈತಿಕತೆಯಿಂದ ಇದ್ದರು. ಇಳಿ ವಯಸ್ಸಿನಲ್ಲಿ ವಿಶ್ರಾಂತಿ ಪಡೆಯದೆ ಬದ್ಧತೆಯಿಂದ ಸೇವೆ ಮಾಡಿದರು. ದೇಶದ ಸಮಗ್ರ ಅಭಿವೃದ್ಧಿಗೆ ಸಿದ್ಧಗಂಗಾ ಮಠದ ಪಾತ್ರವಿದೆ. ವಿಕಸಿತ ಭಾರತದತ್ತಕ್ಕೆ ಶ್ರೀಮಠವೂ ಕೈ ಜೋಡಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಜಾತಿ ಮತಗಳನ್ನು ಮೀರಿ ತ್ರಿವಿಧ ದಾಸೋಹದಲ್ಲಿ ಸೇವೆ ಮಾಡುತ್ತಿರುವ ಸಿದ್ಧಗಂಗಾ ಮಠವು ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿದೆ. ಶ್ರೀಮಠದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. 111 ವರ್ಷಗಳ ಕಾಲ ಸಮಾಜದ ಸೇವೆ ಮಾಡಿದ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಮಾಡಿದ್ದು ನನ್ನ ಭಾಗ್ಯ. ಸಂತ ಶ್ರೇಷ್ಠ ಶಿವಕುಮಾರ್ ಶ್ರೀಗಳು ಮಾಡಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇವೆ ಅನನ್ಯ. ಸಿದ್ಧಗಂಗಾ ಮಠ ಒಂದು ಪುಣ್ಯ ಭೂಮಿಯಾಗಿದ್ದು, ಸಮಾಜದ ಆಧ್ಯಾತ್ಮಿಕ ಹಾಗೂ ಮಾನಸಿಕ ಉನ್ನತಿಗೆ ಕಾರಣವಾಗಿದೆ ಎಂದು ಬಣ್ಣಿಸಿದರು.
ಗೃಹ ಸಚಿವ ಡಾ। ಜಿ.ಪರಮೇಶ್ವರ್ ಮಾತನಾಡಿ, ಅನ್ನ, ಅಕ್ಷರ, ಆಶ್ರಯ ಎಷ್ಟು ಮುಖ್ಯ ಎಂಬುದೇ ಇಂದಿನ ಕಾರ್ಯಕ್ರಮದ ಸಂದೇಶ. ಜಾತಿ ವರ್ಗಗಳನ್ನು ಮೀರಿ ಸಮಾಜದಲ್ಲಿ ಸೇವೆ ಮಾಡುವ ಶ್ರೀಮಠದ ತತ್ವ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆ ಭಾರತದ ಭವಿಷ್ಯದ ದೃಷ್ಟಿಯಿಂದ ಅಗತ್ಯವಿದೆ. ಶಿವಕುಮಾರ ಶ್ರೀಗಳು ನಮ್ಮೆಲ್ಲರ ಆರಾಧ್ಯ ಧೈವ. ಅವರು ಆಧುನಿಕ ಬಸವಣ್ಣರಾಗಿದ್ದರು. ಇವತ್ತು ಕೇವಲ ಶ್ರೀಗಳ ಪುಣ್ಯ ಸ್ಮರಣೆ ಮಾಡುತ್ತಿಲ್ಲ ಬದಲಿಗೆ ಒಂದು ಸಂದೇಶವನ್ನು ಕೊಡುತ್ತಿದ್ದೇವೆ. ಶ್ರೀಗಳು ಯಾವುದೇ ಭೇದ ಇಲ್ಲದೇ ಶಿಕ್ಷಣ ಮತ್ತು ಜ್ಞಾನ ಕೊಟ್ಟಿದ್ದಾರೆ ಎಂದು ನುಡಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ನಡೆದಾಡುವ ದೇವರನ್ನು ಕಂಡಂತಹ ಯಾವುದಾದರೂ ರಾಜ್ಯ ಇದ್ದರೆ ಅದು ಕರ್ನಾಟಕ. ಡಾ.ಶಿವಕುಮಾರ ಶ್ರೀಗಳು ಮಹಾತಪಸ್ವಿಗಳು, ಮಹಾಪುರುಷರು. ಸೂರ್ಯಾ ಚಂದ್ರ ಇರೋವರೆಗೂ ಶಿವಕುಮಾರ ಶ್ರೀಗಳು, ಸಿದ್ದಗಂಗಾ ಮಠ ನಮ್ಮೊಡನೆ ಇರುತ್ತದೆ ಎಂದರು.
ದಾಸೋಹ, ಶಿಕ್ಷಣ ನಿಲ್ಲದಂತೆ ವಚನ:
ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, 89 ವರ್ಷಗಳ ಕಾಲ ಶ್ರೀಮಠದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಹಿರಿಯ ಶ್ರೀಗಳು ಸದಾ ಕಾಯಕ ಭಾವನೆ ಜಾಗೃತವಾಗಿರಬೇಕು, ಶ್ರೀಮಠದಲ್ಲಿ ದಾಸೋಹ, ಮಕ್ಕಳ ಶಿಕ್ಷಣ ಎಂದೂ ನಿಲ್ಲಬಾರದು ಎಂದು ವಚನ ನೀಡಿದ್ದಾರೆ. ಇಂದಿಗೂ ಲಕ್ಷಾಂತರ ಮಕ್ಕಳಿಗೆ, ಭಕ್ತರಿಗೆ ದಾರಿದೀಪವಾಗಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ