ಸಚಿವ ಶರಣಪ್ರಕಾಶ್ ಹೆಸರೇಳಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಈ ಪ್ರಕರಣ ಇಲ್ಲಿಗೆ ಬಿಡಲ್ಲ ಎಂದ ಬಿಜೆಪಿ

Published : Oct 20, 2023, 04:36 AM IST
 ಸಚಿವ ಶರಣಪ್ರಕಾಶ್ ಹೆಸರೇಳಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಈ ಪ್ರಕರಣ ಇಲ್ಲಿಗೆ ಬಿಡಲ್ಲ ಎಂದ ಬಿಜೆಪಿ

ಸಾರಾಂಶ

ತನ್ನ ಸಾವಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಕಾರಣ ಎಂದು ಆರೋಪಿಸಿ ಚಿಂಚೋಳಿ ತಾಲೂಕಿನ ಶಿರೋಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಕಲಬುರಗಿ (ಅ.20): ತನ್ನ ಸಾವಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಕಾರಣ ಎಂದು ಆರೋಪಿಸಿ ಚಿಂಚೋಳಿ ತಾಲೂಕಿನ ಶಿರೋಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಶಿವಕುಮಾರ್‌ ಪೂಜಾರಿ (38) ಆತ್ಮಹತ್ಯೆಗೆ ಶರಣಾದವರು. ಈ ಸಂಬಂಧ ಮೃತನ ಪತ್ನಿ ನೀಡಿದ ಹೇಳಿಕೆ ಹಾಗೂ ದೂರಿನ ಆಧಾರದ ಮೇಲೆ ಸಾಲಬಾಧೆಯಿಂದ ಬೇಸತ್ತು ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಸುಲೇಪೇಟ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆಡಿಯೋದಲ್ಲಿ ಶಿವಕುಮಾರ್‌ ಸ್ಪಷ್ಟವಾಗಿ ಡಾ.ಶರಣಪ್ರಕಾಶರ ಹೆಸರು ನಮೂದಿಸಿದ್ದರಿಂದ ನಾವು ಈ ಪ್ರಕರಣ ಇಲ್ಲಿಗೇ ಬಿಡಲ್ಲ ಎಂದು ಬಿಜೆಪಿ ಆರೋಪಿಸಿದೆ.

ಕಲಬುರಗಿ: ಸಚಿವ ಸ್ಥಾನದಿಂದ ಡಾ. ಶರಣಪ್ರಕಾಶ ವಜಾಕ್ಕೆ ತೇಲ್ಕೂರ್‌ ಆಗ್ರಹ

ಆತ್ಮಹತ್ಯೆಗೂ ಮುನ್ನ ಶಿವಕುಮಾರ್‌ ತನ್ನ ಬಂಧು ನರಸಪ್ಪ ಎಂಬುವರ ಹೊಲಕ್ಕೆ ಹೋಗಿದ್ದು, ಕಾಂಗ್ರೆಸ್‌ ಕಾರ್ಯಕರ್ತರು ಅಲ್ಲಿ ತೀವ್ರವಾಗಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಶಿವಕುಮಾರ್‌ ಮೂರು ಆಡಿಯೋ ಮಾಡಿದ್ದು, ಅದೀಗ ಚರ್ಚೆಗೆ ಕಾರಣವಾಗಿದೆ.

‘ನನ್ನ ಆತ್ಮಹತ್ಯೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರೇ ಕಾರಣ. ನಾನು ಹಿಂದು ಹುಲಿ. ಹಿಂದು ಹುಲಿಯಾಗಿಯೇ ಸಾಯುವೆ. ಇವರಿಗೆ ಹಿಂದು ಧರ್ಮದ ಬಗ್ಗೆ ಮಾತನಾಡಿದರೆ ಸಿಟ್ಟು. ಹಿಂದುತ್ವದ ಬಗ್ಗೆ ಮಾತನಾಡಿದರೆ ಕಿರುಕುಳ ಕೊಡುತ್ತಾರೆ. ಇದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವೆ’ ಎಂದಿರುವ ಶಿವಕುಮಾರ್‌ ಪೂಜಾರಿ, ಸೇಡಂ ಮಾಜಿ ಶಾಸಕ ರಾಜಕುಮಾರ್‌ ತೇಲ್ಕೂರ್‌ ಈ ಕುರಿತು ಹೋರಾಟ ಮಾಡಬೇಕು ಎಂದೂ ಆಡಿಯೋದಲ್ಲಿ ಆಗ್ರಹಿಸಿದ್ದಾರೆ.

10ರಿಂದ 12 ಲಕ್ಷ ರು. ಸಾಲ:

ಶಿವಕುಮಾರ್‌ ಕೆಜಿಬಿ ನಿಡಗುಂದಾ ಶಾಖೆಯಲ್ಲಿ 70 ಸಾವಿರ, ಖಾಸಗಿಯಾಗಿ 10ರಿಂದ 12 ಲಕ್ಷ ರು. ಸಾಲ ಮಾಡಿದ್ದರು. ಬೆಳೆ ನಷ್ಟ ಆಗಿದ್ದರಿಂದ ಸಮಸ್ಯೆಗೆ ಸಿಲುಕಿದ್ದರು. ಸಾಲ ತೀರಿಸುವ ಚಿಂತೆಯಲ್ಲಿ ಮದ್ಯ ವ್ಯಸನಿಯಾಗಿಬಿಟ್ಟಿದ್ದರು. ತನ್ನ ಪಾಲಿನ 2 ಎಕರೆ ಜಮೀನು ಮಾರಾಟ ಮಾಡಿದರೂ ಸಾಲ ಸಂಪೂರ್ಣವಾಗಿ ತೀರಿಸಲು ಆಗಿರಲಿಲ್ಲ. ಇವೆಲ್ಲ ಕಾರಣದಿಂದಾಗಿ ಮನನೊಂದು ಆತ್ಮಹತ್ಯೆ ದಾರಿ ತುಳಿದಿದ್ದಾರೆಂದು ಪತ್ನಿ ಮಲ್ಲಮ್ಮ ನೀಡಿರುವ ಲಿಖಿತ ದೂರು ಹಾಗೂ ಹೇಳಿಕೆ ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಶಿವಕುಮಾರ್‌ ಸಾವಿನ ಕುರಿತಾಗಲಿ. 3 ಆಡಿಯೋ ಲಭ್ಯವಾಗಿರುವ ವಿಚಾರವಾಗಲಿ, ಅವುಗಳಲ್ಲಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್‌, ಕಾಂಗ್ರೆಸ್ಸಿಗರ ಮೇಲೆ ಮಾಡಲಾದ ಆರೋಪಗಳ ವಿಷಯವಾಗಲಿ ಯಾವುದೂ ಪೊಲೀಸರ ಎಫ್‌ಐಆರ್‌ನಲ್ಲಿ ನಮೂದಾಗಿಲ್ಲ.

ಗುಲ್ಬರ್ಗ ವಿವಿ 8 ವಿಭಾಗಗಳಲ್ಲಿ ಸಂಶೋಧನೆ ಬಂದ್‌..!

ಪೊಲೀಸರ ವಿರುದ್ಧವೂ ಹೋರಾಟ: ತೇಲ್ಕೂರ್‌

ಎಫ್‌ಐಆರ್‌ನಲ್ಲಿ ಶಿವಕುಮಾರ್‌ ಆತ್ಮಹತ್ಯೆಗೆ ಕಾಂಗ್ರೆಸ್ಸಿಗರ ಕಿರುಕುಳ ಹಾಗೂ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಭಯದ ವಿಚಾರಗಳೇ ಪ್ರಸ್ತಾಪವಾಗಿಲ್ಲ. ಇದು ಸೋಜಿಗದ ಸಂಗತಿ ಹಾಗೂ ಹೀಗೇ ಆಗುತ್ತದೆಂದು ನಿರೀಕ್ಷಿಸಿದ್ದೆವು. ನಾವೀಗ ಎಫ್‌ಐಆರ್‌ ವಿರುದ್ಧವೂ ಹೋರಾಟ ಮಾಡುತ್ತೇವೆ. ನ್ಯಾಯಾಲಯದ ಮೊರೆ ಹೋಗುತ್ತೇವೆ. ಆಡಿಯೋದಲ್ಲಿ ಶಿವಕುಮಾರ್‌ ಸ್ಪಷ್ಟವಾಗಿ ಡಾ.ಶರಣಪ್ರಕಾಶರ ಹೆಸರು ನಮೂದಿಸಿದ್ದರಿಂದ ಈ ಪ್ರಕರಣ ಇಲ್ಲಿಗೇ ಬಿಡಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ