ಮುಡಾ ಹಗರಣದ ವಿರುದ್ಧದ ಬಿಜೆಪಿ-ಜೆಡಿಎಸ್ ನ ‘ಮೈಸೂರು ಚಲೋ’ ಪಾದಯಾತ್ರೆ ಮುಕ್ತಾಯಗೊಂಡಿರುವ ಬೆನ್ನ ಹಿಂದೆಯೇ ಬಿಜೆಪಿಯ ಅತೃಪ್ತ ನಾಯಕರು ಬಳ್ಳಾರಿ ಯಾತ್ರೆಗೆ ಮುಂದಾಗಿದ್ದಾರೆ. ಸೆಪ್ಟೆಂಬರ್ 17 ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ಶ್ರೀಶೈಲ ಮಠದ
ಬೆಳಗಾವಿ (ಆ.12) : ಮುಡಾ ಹಗರಣದ ವಿರುದ್ಧದ ಬಿಜೆಪಿ-ಜೆಡಿಎಸ್ ನ ‘ಮೈಸೂರು ಚಲೋ’ ಪಾದಯಾತ್ರೆ ಮುಕ್ತಾಯಗೊಂಡಿರುವ ಬೆನ್ನ ಹಿಂದೆಯೇ ಬಿಜೆಪಿಯ ಅತೃಪ್ತ ನಾಯಕರು ಬಳ್ಳಾರಿ ಯಾತ್ರೆಗೆ ಮುಂದಾಗಿದ್ದಾರೆ. ಸೆಪ್ಟೆಂಬರ್ 17 ರಿಂದ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.
ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ವೊಂದರಲ್ಲಿ ಭಾನುವಾರ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಅರವಿಂದ ಲಿಂಬಾವಳಿ, ಪ್ರತಾಪ ಸಿಂಹ, ಕುಮಾರ ಬಂಗಾರಪ್ಪ ಸೇರಿ 12 ನಾಯಕರು ರಹಸ್ಯ ಸಭೆ ನಡೆಸಿದರು.
ಡ್ಯಾಂ ನ್ಯಾಗ್ ನೀರ್ ಇಲ್ಲಂದ್ರ ಮುಂದೆ ನಮ್ಮ ಗತಿ ಹೆಂಗ? ತುಂಗಭದ್ರಾ ಕ್ರಸ್ಟ್ ಗೇಟ್ ಕಳಚಿದ್ದಕ್ಕೆ ರೈತರು ಕಣ್ಣೀರು!
ಪಾದಯಾತ್ರೆ ವೇಳೆ ಕಾಂಗ್ರೆಸ್‌ನ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಎಸ್ಸಿ, ಎಸ್ಟಿ ಅನುದಾನ ದುರ್ಬಳಕೆ ವಿರುದ್ಧ ಹೋರಾಟ ನಡೆಸಲು ಚರ್ಚಿಸಲಾಗಿದೆ. ಮುಡಾ ಹಗರಣದಲ್ಲಿ ಬಿಜೆಪಿ ನಾಯಕರು ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಇವರೆಲ್ಲರೂ ಸೇರಿಕೊಂಡು ಡಿ.ಕೆ.ಶಿವಕುಮಾರ ಅವರನ್ನು ಸಿಎಂ ಮಾಡಲು ಹೊರಟಿದ್ದಾರೆ ಎಂಬ ಸಂದೇಶವನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಪ್ರತ್ಯೇಕ ಪಾದಯಾತ್ರೆಯ ಬಗ್ಗೆ ಕೇಂದ್ರ ನಾಯಕರ ಜೊತೆಗೆ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಕಾಂಗ್ರೆಸ್‌ನ ವಾಲ್ಮೀಕಿ ನಿಗಮದ ಹಗರಣದ ವಿರುದ್ಧದ ಹೋರಾಟದ ನೆಪದಲ್ಲಿ ತಮ್ಮದೇ ಪಕ್ಷದ ನಾಯಕರ ವಿರುದ್ಧ ಬಿಜೆಪಿಯ ಅತೃಪ್ತ ನಾಯಕರು ಈಗ ಬಂಡೆದಿದ್ದು, ತಮ್ಮ ಪಕ್ಷದ ನಾಯಕರಿಗೇ ಸಡ್ಡು ಹೊಡೆದಿದ್ದಾರೆ. ಪಾದಯಾತ್ರೆಗೂ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವದ ವಿರುದ್ಧ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಅವರು, ಬಳ್ಳಾರಿ ಪಾದಯಾತ್ರೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಬೆಳಗಾವಿಯಲ್ಲಿ ಸಭೆ ನಡೆದಿದೆ.
ವಾಲ್ಮೀಕಿ ನಿಗಮದ ಹಣ ದುರ್ಬಳಕೆ, ಎಸ್ಸಿ, ಎಸ್ಟಿ ಹಣದ ದುರುಪಯೋಗದ ವಿಚಾರವನ್ನು ಹೈಕಮಾಂಡ್‌ಗೆ ತಿಳಿಸಬೇಕು. ವಾಲ್ಮೀಕಿ ಹಗರಣದ ವಿಚಾರವಾಗಿ ಕೂಡಲಸಂಗಮದಿಂದ ಬಳ್ಳಾರಿಯವರೆಗೂ ಪಾದಯಾತ್ರೆ ಮಾಡಲಿದ್ದೇವೆ. ನಾವು 11 ಅಲ್ಲ, 12 ಜನ ನಾಯಕರಿದ್ದೇವೆ. ನಾನು ಪಕ್ಷದ ಹಿರಿಯ ನಾಯಕ, ಪಕ್ಷದ ಬದ್ಧತೆ ನಮಗೆ ಗೊತ್ತಿದೆ. ಮುಡಾದಂತೆ ವಾಲ್ಮೀಕಿ ಪಾದಯಾತ್ರೆಯ ಬಗ್ಗೆಯೂ ತೀರ್ಮಾನ ಮಾಡುತ್ತೇವೆ. ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ.
- ಅರವಿಂದ ಲಿಂಬಾವಳಿ, ಮಾಜಿ ಸಚಿವರು
ಬಿಜೆಪಿಯಲ್ಲಿ 20 ಬಣಗಳಿವೆ. ಆರ್.ಅಶೋಕ್ ಬಣ, ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ ಬಣ, ಅಶ್ವತ್ಥ ನಾರಾಯಣ ಬಣ, ಯತ್ನಾಳ-ಜಾರಕಿಹೊಳಿ ಬಣ, ಸಿ.ಟಿ.ರವಿ ಬಣ... ಹೀಗೆ ಸಾಕಷ್ಟು ಬಣಗಳಿವೆ. ಒಂದೊಂದು ಬಣವೂ ಪಾದಯಾತ್ರೆ ಮಾಡಲಿ.
- ಎಂ.ಬಿ.ಪಾಟೀಲ, ಸಚಿವ