ಮಾಧ್ಯಮ ಪ್ರತಿನಿಧಿಗಳ ಮೇಲೆ ದಿನೇಶ್‌, ಪ್ರಿಯಾಂಕ್‌ ಗರಂ

Published : Jan 25, 2019, 08:03 AM IST
ಮಾಧ್ಯಮ ಪ್ರತಿನಿಧಿಗಳ ಮೇಲೆ ದಿನೇಶ್‌, ಪ್ರಿಯಾಂಕ್‌ ಗರಂ

ಸಾರಾಂಶ

ಮಾಧ್ಯಮ ಪ್ರತಿನಿಧಿಗಳ ಮೇಲೆ ದಿನೇಶ್‌, ಪ್ರಿಯಾಂಕ್‌ ಗರಂ| ಆಕ್ಷೇಪಾರ್ಹ ಪದ ಬಳಕೆ, ಬಳಿಕ ಕ್ಷಮೆಯಾಚನೆ

ಬೆಂಗಳೂರು[ಜ.25]: ಪ್ರತ್ಯೇಕ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದ ಪ್ರಸಂಗ ಗುರುವಾರ ನಡೆಯಿತು. ಆದರೆ, ಮಾಧ್ಯಮಗಳ ಕುರಿತು ಇವರು ಮಾಡಿದ ಟೀಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಂತೆ ಇಬ್ಬರೂ ಕ್ಷಮೆಯಾಚಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು,

‘ಮಾನ ಮರ್ಯಾದೆ ಇಲ್ವಾ, ಹೊರಗೆ ಹೋಗಿ’:

ಲೋಕಸಭಾ ಚುನಾವಣಾ ಸಿದ್ಧತೆಗಾಗಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಜಿಲ್ಲಾ ಮುಖಂಡರ ಸಭೆ ನಡೆಸಲಾರಂಭಿಸಿದ್ದರು. ಸಭೆಯಲ್ಲಿ ದಿನೇಶ್‌ ಗುಂಡೂರಾವ್‌ ಕೂಡ ಉಪಸ್ಥಿತರಿದ್ದರು. ಈ ವೇಳೆ, ಶಾಸಕ ಕಂಪ್ಲಿ ಗಣೇಶ್‌ ಬೆಂಬಲಿಗರ ನಿಯೋಗ ಪಕ್ಷದ ಕಚೇರಿಗೆ ಭೇಟಿ ನೀಡಿ ತಮ್ಮ ನಾಯಕರ ವಿರುದ್ಧದ ಅಮಾನತು ಆದೇಶ ವಾಪಸ್‌ ಪಡೆಯುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಲು ಆಗಮಿಸಿದರು.

ಇದನ್ನು ಚಿತ್ರೀಕರಿಸಲು ಹೋದ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಗರಂ ಆದ ದಿನೇಶ್‌ ಗುಂಡೂರಾವ್‌, ಮಾನ ಮರ್ಯಾದೆ ಇಲ್ಲವಾ? ಹೊರಗೆ ಹೋಗಿ ಎಂದು ಹರಿಹಾಯ್ದರು. ಇದನ್ನು ಕಂಡ ವೇಣುಗೋಪಾಲ್‌ ಅವರು ದಿನೇಶ್‌ ಗುಂಡೂರಾವ್‌ ಅವರಿಗೆ ಸಭೆಯಿಂದ ಹೊರಗೆ ತೆರಳುವಂತೆ ತಿಳಿಸಿದರು.

ಬಳಿಕ ಕ್ಷಮೆಯಾಚಿಸಿದ ದಿನೇಶ್‌ ಗುಂಡೂರಾವ್‌, ತಮ್ಮ ಮಾತುಗಳಿಂದ ಮಾಧ್ಯಮದವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕೆಲವೊಮ್ಮೆ ಬಾಯಿ ತಪ್ಪಿ ಮಾತಾಡ್ತೇವೆ. ಮಾಧ್ಯಮದವರಿಗೆ ಪ್ರಶ್ನೆ ಕೇಳುವ ಹಕ್ಕಿದೆ. ಸಾರ್ವಜನಿಕ ವಲಯದಲ್ಲಿರುವ ನಾವು ಉತ್ತರಿಸಬೇಕು ಎಂದರು.

‘ಮಾಧ್ಯಮಗಳು ಟೆರರಿಸ್ಟ್‌ಗಿಂತ ಹೆಚ್ಚು ಡೇಂಜರ್‌’:

ಬೆಳಗ್ಗೆ ವಿಕಾಸಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ‘ಮಾಧ್ಯಮಗಳು ಟೆರರಿಸ್ಟ್‌ಗಳಿಗಿಂತ ಡೆಂಜರ್‌, ಟೆರರಿಸ್ಟ್‌ಗಳು ಒಂದೇ ಬಾರಿ ಭಾರಿ ಗುಂಡು ಹೊಡೆದು ಸಾಯಿಸ್ತಾರೆ, ಆದರೆ ಮಾಧ್ಯಮಗಳು ಪ್ರತಿದಿನ ಕೊಲ್ಲುತ್ತಾರೆ. ಬ್ರೇಕಿಂಗ್‌ ನ್ಯೂಸ್‌ ಕೊಡುವ ಭರದಲ್ಲಿ ತಮಗೆ ಬೇಕಾದಂತೆ ಎಡಿಟ್‌ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ತಮಗೂ ಈ ಅನುಭವ ಆಗಿದೆ. ಮಾಧ್ಯಮಗಳು ಖಚಿತ ಮಾಹಿತಿ ಮೇರೆಗೆ ಸುದ್ದಿ ಪ್ರಕಟಿಸಬೇಕು ಎಂದು ಹೇಳಿದರು.

ಸಚಿವರ ಹೇಳಿಕೆಗೆ ಸಾರ್ವಜನಿಕರು ಹಾಗೂ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ಆಕ್ಷೇಪ, ಟೀಕೆ ವ್ಯಕ್ತವಾಯಿತು. ಆಗ ಸರಣಿ ಟ್ವೀಟ್‌ಗಳಲ್ಲಿ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ‘ಪತ್ರಿಕೋದ್ಯಮ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದದಲ್ಲಿ ತಾವು ಮಾಧ್ಯಮ ಮಿತ್ರರನ್ನು ಉಗ್ರಗಾಮಿಗಳೆಂದು ಬಿಂಬಿಸಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳು ಸತ್ಯದ ಪರವಾಗಿರಬೇಕೆಂದು ಹೇಳುವುದಷ್ಟೆತಮ್ಮ ಉದ್ದೇಶವಾಗಿತ್ತು. ಮಾಧ್ಯಮದ ಸ್ವಾತಂತ್ರ್ಯ ಮತ್ತು ಅವರ ಘನತೆಯ ಬಗ್ಗೆ ತಮಗೆ ಅಪಾರವಾದ ಗೌರವವಿದೆ. ಪ್ರಜಾಪ್ರಭುತ್ವದ ಉಳಿಯುವಿಕೆಗೆ ಮುಖ್ಯಕಾರಣವಾಗಿರುವ ಪತ್ರಿಕೋದ್ಯಮ ನಾಲ್ಕನೆಯ ಅಂಗವಾಗಿದ್ದು, ಅದು ಸತ್ಯದ ಪರವಾಗಿರಬೇಕೆಂಬುದಷ್ಟೇ ನನ್ನ ಮನವಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಬಹಳ ಪ್ರಮುಖವಾದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಮಾಧ್ಯಮಗಳ ಮೂಲಕ ಸಾರ್ವಜನಿಕರು ಜನಪ್ರತಿನಿಧಿಗಳು ಬಗ್ಗೆ ಯೋಜನೆಗಳ ಬಗ್ಗೆ ನೀತಿಗಳ ಬಗ್ಗೆ ಅಭಿಪ್ರಾಯಗಳನ್ನು ರೂಪಿಸುವುದು ಸಹಜ. ಸತ್ಯದ ಪರವಾಗಿ ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವ ದೊಡ್ಡ ಹೊಣೆಗಾರಿಕೆ ಮಾಧ್ಯಮಗಳಿಗೆ ಇರುತ್ತದೆ. ಗುಂಡೇಟಿನಿಂದ ಮನುಷ್ಯ ಒಂದೇ ಬಾರಿಗೆ ಮನುಷ್ಯ ಸಾಯುತ್ತಾನೆ, ಆದರೆ ಮಾಧ್ಯಮಗಳಲ್ಲಿ ವ್ಯಕ್ತಿಗಳ ಬಗ್ಗೆ ಅಥವಾ ಘಟನೆಗಳ ಬಗ್ಗೆ ಅಪೂರ್ಣ ಮಾಹಿತಿ, ಅರ್ಧ ಸತ್ಯದ ಸುದ್ದಿಗಳು ಪ್ರಸಾರ/ಪ್ರಕಟವಾದಾಗ ವ್ಯಕ್ತಿಯ ತೇಜೋವಧೆ ಆಗುತ್ತದೆ ಅಲ್ಲದೇ ದಿನ ನಿತ್ಯ ಸಾರ್ವಜನಿಕರ ಕಣ್ಣಲ್ಲಿ ಅಪರಾಧಿಗಳಾಗಿ ಸಾಯುತ್ತಲೇ ಇರುತ್ತಾನೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಟ್ವೀಟರ್‌ನಲ್ಲಿ ಅಭಿಪ್ರಾಯಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!