
ಮೈಸೂರು (ಜ.18): ಮುಡಾದಲ್ಲಿ ತಪ್ಪುಗಳು ಆಗಿವೆ ಎಂಬುದು ಇಡಿ ವರದಿಯಲ್ಲಿ ಗೊತ್ತಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.
ಇಡಿಯಿಂದ ಮುಡಾ ಆಸ್ತಿ ಜಪ್ತಿ ಮಾಡಿದ ವಿಚಾರವಾಗಿ ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಮುಡಾ ಆರೋಪ ಕೇಳಿ ಬಂದ ದಿನವೇ ನಾವು ಸಿಎಂ ರಾಜೀನಾಮೆ ಕೇಳಿದ್ದೇವು. ಆದರೆ ಸಿಎಂ ತನಿಖೆಯಾಗಲಿ ಎಂದು ಹೇಳುತ್ತಿದ್ದರು. ಇದೀಗ ಇಡಿಯೇ ತನಿಖೆ ಮಾಡಿ ಅಕ್ರಮ ಆಗಿರುವುದು ಬಯಲಿಗೆಳೆದಿದೆ. ಆ ಕುರಿತು ವರದಿ ಸಹ ಬಿಡುಗಡೆ ಮಾಡಿದೆ. ಈಗಲಾಗದ್ರೂ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು, ರಾಜೀನಾಮೆ ಕೊಟ್ಟು ನಿಷ್ಪಕ್ಷಪಾತ ತನಿಖೆಗೆ ಸಿದ್ದರಾಮಯ್ಯ ಸಹಕರಿಸಬೇಕು ಎಂದರು.
ಮುಡಾ ಪ್ರಕರಣದಲ್ಲಿ ಸಂಪೂರ್ಣ ತನಿಖೆ ಮುಗಿದ ಮೇಲೆ ತಪ್ಪಿತಸ್ಥರಲ್ಲ ಎಂದು ಸಾಬೀತಾದರೆ ಮತ್ತೆ ಅಧಿಕಾರ ಪಡೆದುಕೊಳ್ಳಲಿ. ಆದರೆ ತನಿಖೆ ಬಳಿಕ ನೋಡೋಣ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಇಡಿ ವರದಿ ಬಳಿಕವೂ ರಾಜೀನಾಮೆ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರಲ್ಲದೆ ರಾಜೀನಾಮೆಗೆ ಒತ್ತಾಯಿಸಿ ಮತ್ತೆ ಹೋರಾಟ ಮಾಡುತ್ತೇವೆ. ಇದು ಮುಡಾ ಕ್ಲೀನ್ ಆಗುವ ಮೊದಲ ಹೆಜ್ಜೆಯಾಗಿದೆ. ಮುಡಾ ಸಂಪೂರ್ಣವಾಗಿ ಕ್ಲೀನ್ ಆಗಲು ಇನ್ನೂ ಎರಡು ವರ್ಷ ಬೇಕಿದೆ ಎಂದರು.
ಇದನ್ನೂ ಓದಿ: ಅಂದು ಹಿಂದೂ ಧರ್ಮ ಹುಟ್ಟಿಸಿದ್ದು ಯಾರು ಎಂದಿದ್ದ ಗೃಹ ಸಚಿವರ ಬಾಯಲ್ಲಿಂದು ಗಣಪತಿ ಶ್ಲೋಕ!
ಪ್ರತಾಪ್ ಸಿಂಹ ಬಗ್ಗೆ ಕಾರ್ಯಕರ್ತರು ಬೇಸರ:
ಇನ್ನು ಮಾಜಿ ಸಂಸದ ಪ್ರತಾಪ ಸಿಂಹ ಉಚ್ಚಾಟನೆಗೆ ಕಾರ್ಯಕರ್ತರು ಮನವಿ ಕೊಟ್ಟ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಂಸದರು, ಮಾಜಿ ಸಂಸದರ ನಡವಳಿಕೆಗಳು ಕಾರ್ಯಕರ್ತರಿಗೆ ಬೇಸರ ತರಿಸಿರಬಹುದು. ಕಳೆದ ಮೂರು ತಿಂಗಳಿನಲ್ಲಿ ಪ್ರತಾಪ ಸಿಂಹ ನೀಡಿರುವ ಹೇಳಿಕೆಗಳು ಮತ್ತು ನಡೆದಿರುವ ಘಟನೆಗಳಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಹೀಗಾಗಿ ಉಚ್ಚಾಟನೆಗೆ ಮನವಿ ಕೊಟ್ಟಿದ್ದಾರೆ. ಪತ್ರದ ಬಗ್ಗೆ ಪಕ್ಷರ ವರಿಷ್ಟರು ತೀರ್ಮಾನ ಮಾಡಲಿದ್ದಾರೆ. ವೈಯಕ್ತಿಕವಾಗಿ ನನಗೆ ಯಾರೂ ಪಕ್ಷ ಬಿಟ್ಟು ಹೋಗುವುದು ಇಷ್ಟ ಇಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿರುವ ನಾವು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ನಮ್ಮನಮ್ಮಲೇ ಗೊಂದಲಗಳು ವಿರೋಧ ಅಬಾಸಗಳು ನಡೆಯಬಾರದು. ಎಲ್ಲವನ್ನೂ ತಿದ್ದಿಕೊಂಡು ಒಟ್ಟಾಗಿ ಸಾಗುವ ಕಾಲ ಇದು ಎಂದರು.
ಮುಡಾ ಹಗರಣ: ₹300 ಕೋಟಿ ಆಸ್ತಿ ಇ.ಡಿ ವಶ, ಸಿದ್ದುಗೆ ಸಂಬಂಧಿಸಿದ್ದು ಎಷ್ಟಿದೆ?
ಅರಮನೆ-ಸರ್ಕಾರದ ನಡುವೆ ಸಂಘರ್ಷ:
ಅರಮನೆ ಮತ್ತು ಸರ್ಕಾರ ನಡುವಿನ ಕಾನೂನು ಸಂಘರ್ಷ ಹಳೆಯದು. ಬಹಳ ವರ್ಷದಿಂದ ನಡೆಯುತ್ತಲೇ ಇದೆ. ನಾನು ರಾಜಕಾರಣಕ್ಕೆ ಬಂದ ಕಾರಣಕ್ಕೆ ಅದು ಹೆಚ್ಚಾಗಿಲ್ಲ. ಸಿದ್ದರಾಮಯ್ಯ ಮೊದಲ ಬಾರಿ ಉಪಮುಖ್ಯಮಂತ್ರಿಯಾದ ದಿನದಿಂದ ಈ ಹೋರಾಟ ಶುರುವಾಗಿದೆ. ಸರ್ಕಾರಕ್ಕೆ ಅರಮನೆ ಟಾರ್ಗೆಟ್ ಎಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ನಾವು ಸದಾ ಕಾಲ ಟಾರ್ಗೆಟ್ ಅಗುತ್ತಲೇ ಬಂದಿದ್ದೇವೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ