
ಬೆಂಗಳೂರು: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಮಾರ್ಚ್ 3ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಚಂದ್ರು ಲಮಾಣಿ ಜೊತೆಯಲ್ಲಿ ಅವರ ಇಬ್ಬರು ಸಹಾಯಕರಾದ ಮಂಜು ಲಮಾಣಿ ಮತ್ತು ಗುರು ನಾಯ್ಕ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಯಲಹಂಕ ಜ್ಯುಡಿಷಿಯಲ್ ಲೇಔಟ್‌ನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್ ಮುಂದೆ ಶಾಸಕರನ್ನು ಹಾಜರುಪಡಿಸಲಾಗಿತ್ತು.
ಸರ್ಕಾರಿ ಕಾಮಗಾರಿಯೊಂದರ ಸಂಬಂಧ ತಮ್ಮದೇ ಮಾಲೀಕತ್ವದ ಆಸ್ಪತ್ರೆಯಲ್ಲಿ ಲಂಚ ಸ್ವೀಕರಿಸುವ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಡಾ। ಚಂದ್ರು ಲಮಾಣಿ ಅವರು ಶನಿವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜಿಲ್ಲೆಯ ಸಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿಗೆ ₹1 ಕೋಟಿ ರುಪಾಯಿ ಮಂಜೂರಾಗಿತ್ತು. ಈ ಕಾಮಗಾರಿ ವಿಜಯರಾಜ ಪೂಜಾರ ಎನ್ನುವವರು ಗುತ್ತಿಗೆ ಪಡೆದಿದ್ದರು. ಕಾಮಗಾರಿ ಮುಂದುವರಿಸಬೇಕಾದಲ್ಲಿ ಒಟ್ಟು ₹11 ಲಕ್ಷ ಕಮಿಷನ್ (ಶೇ.12ರಷ್ಟು) ಬೇಡಿಕೆಯನ್ನು ಶಾಸಕರು ಇಟ್ಟಿದ್ದರು ಎನ್ನಲಾಗಿದೆ.
ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ. ಗುತ್ತಿಗೆದಾರರಿಂದ ಕಮಿಷನ್ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು “ ಬಿಜೆಪಿಯ ಭ್ರಷ್ಟಾಚಾರದ ಬ್ರ್ಯಾಂಡ್ " ಅನ್ನು ಗಟ್ಟಿಗೊಳಿಸಿದ್ದಾರೆ. ಭ್ರಷ್ಟಾಚಾರದಲ್ಲಿ ಪಳಗಿದ ಬಿಜೆಪಿಯ ಹಿರಿತಲೆಗಳು ಹಿಂದಿನ “40% ಕಮಿಷನ್“ ಕಲೆಯನ್ನು ತಮ್ಮ ಯುವ ಶಾಸಕರಿಗೆ ಚೆನ್ನಾಗಿಯೇ ಕಲಿಸಿದ್ದಾರೆ!
ಇದು ಯಾರೋ ಮಾಡಿದ ಬಾಯಿ ಮಾತಿನ ಆರೋಪವಲ್ಲ, ಲೋಕಾಯುಕ್ತರು ಪ್ರತ್ಯಕ್ಷವಾಗಿ ಹಿಡಿದಿದ್ದು. ತಮ್ಮ ಶಾಸಕರ ಈ ಕೃತ್ಯಕ್ಕೆ ರಾಜ್ಯಾಧ್ಯಕ್ಷರು ಹೊಣೆ ಹೊರುತ್ತಾರಾ?
ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ತಿರುವು , ಕೇಂದ್ರ ಸಚಿವ ಕುಮಾರಸ್ವಾಮಿ ಗೃಹ ಸಚಿವ ಪರಮೇಶ್ವರ್ ರಹಸ್ಯ ಭೇಟಿ
ವಿರೋಧ ಪಕ್ಷದ ನಾಯಕರು ರಾಜೀನಾಮೆ ಕೊಡುತ್ತಾರಾ? ಅಥವಾ ಚಂದ್ರು ಲಮಾಣಿ ಅವರಿಂದ ರಾಜೀನಾಮೆ ಕೊಡಿಸುತ್ತಾರಾ? ರಾಜ್ಯ ಬಿಜೆಪಿ, ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಉತ್ತರಿಸಬೇಕು? ಹಾಗೆಯೇ, “ನಾ ಖಾವುಂಗಾ ನಾ ಖಾನೆದುಂಗಾ“ ಎಂಬ ಸ್ಲೋಗನ್ ಗೆ ಯಾವ ಅರ್ಥ ನೀಡಲಾಗಿದೆ ಎಂಬುದನ್ನೂ ಬಿಜೆಪಿ ಹೇಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ನಟೇಶ್ ಭ್ರಷ್ಟಾಚಾರ ಆರೋಪ: 6 ಸೆಕೆಂಡು ಆಡಿಯೋ ರಿಲೀಸ್ ಮಾಡಿದ ಸ್ನೇಹಮಯಿ ಮನೆಗೆ ಸಿಸಿಬಿ ರೈಡ್! ಏನೆಲ್ಲಾ ದಾಖಲೆ ಸಿಕ್ತು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ