
ಬೆಂಗಳೂರು(ಆ.13): ಸಚಿವ ಸ್ಥಾನದ ವಂಚಿತರ ಆಕ್ರೋಶ, ಖಾತೆ ಹಂಚಿಕೆಗೆ ಸಂಬಂಧಿಸಿದ ಅಪಸ್ವರ ಸೇರಿದಂತೆ ಪಕ್ಷದಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸುವ ಸಂಬಂಧ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಮುಂದಿನ ವಾರ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಭೇಟಿಯ ಅಧಿಕೃತ ದಿನಾಂಕ ನಿಗದಿಯಾಗಿಲ್ಲ. ಆದರೆ, ಈ ತಿಂಗಳ 15ರ ಬಳಿಕ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸುವುದು ಬಹುತೇಕ ಖಚಿತವಾಗಿದೆ. ಎರಡು ಅಥವಾ ಮೂರು ದಿನಗಳ ಕಾಲ ರಾಜ್ಯದಲ್ಲೇ ಇರಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಮಾಹಿತಿ ನೀಡಿವೆ.
ಕೇವಲ ಪಕ್ಷದಲ್ಲಿನ ಅಪಸ್ವರ ಸಂಬಂಧವಷ್ಟೇ ಸಿಂಗ್ ಅವರು ರಾಜ್ಯಕ್ಕೆ ಆಗಮಿಸುತ್ತಿಲ್ಲ. ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆ ಸೇರಿದಂತೆ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗಳಿಗೆ ಈಗಿನಿಂದಲೇ ತಯಾರಿ ಆರಂಭಿಸುವ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡು ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶವನ್ನೂ ಅವರು ಹೊಂದಿದ್ದಾರೆ. ಮೊದಲಿಗೆ ಮೈಸೂರು ಜಿಲ್ಲೆಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.
ಇಂದಿರಾ, ನೆಹರು ಹೆಸರಲ್ಲಿ ಬಾರ್ ತೆರೆಯಲಿ: ರವಿ
ಸಚಿವ ಸ್ಥಾನದ ಕಳೆದುಕೊಂಡವರು-ಆಕಾಂಕ್ಷಿಗಳು ಹಾಗೂ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಬೇಸರಗೊಂಡವರ ಪೈಕಿ ಹಲವರು ಪದೇ ಪದೇ ದೆಹಲಿಗೆ ಎಡತಾಕುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆಗೂ ಮುನ್ನ ಇದೇ ರೀತಿ ಹಲವರು ದೆಹಲಿ ಪ್ರದಕ್ಷಿಣೆ ಹಾಕುತ್ತಿದ್ದರು. ಈಗ ಬದಲಾವಣೆ ಬಳಿಕವೂ ಅದು ಮುಂದುವರೆದಿರುವ ಬಗ್ಗೆ ವರಿಷ್ಠರಿಗೂ ಸಮಾಧಾನವಿಲ್ಲ. ಹೀಗಾಗಿ, ಈ ಬಗ್ಗೆ ಕೂಡ ಅರುಣ್ ಸಿಂಗ್ ಅವರು ರಾಜ್ಯ ಭೇಟಿ ವೇಳೆ ಸೂಚನೆ ನೀಡಬಹುದು ಎನ್ನಲಾಗುತ್ತಿದೆ.
ಯಡಿಯೂರಪ್ಪ ರಾಜೀನಾಮೆ ಬಳಿಕ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಆಯ್ಕೆ ವೇಳೆ ಆಗಮಿಸಿದ್ದ ಅರುಣ್ ಸಿಂಗ್ ಅವರು ಇದೀಗ ಮುಂದಿನ ಹಂತದ ಪಕ್ಷದ ಸಂಘಟನೆ ಬಲಗೊಳಿಸುವತ್ತ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ತಂತ್ರ ರೂಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ