* ನಾನು ರಾಜ್ಯ ಸಚಿವ ಸಂಪುಟದ ಆಕಾಂಕ್ಷಿಯಲ್ಲ
* ಪಕ್ಷ ಬಯಸಿ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ
* ನನಗೆ ಇನ್ನೂ ವಯಸ್ಸಿದೆ. ಸದ್ಯ ಪಕ್ಷ ಸಂಘಟನೆ ಮಾಡುತ್ತೇನೆ.
ಕಲಬುರಗಿ(ಆ.13): ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ, ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿರಲಿಲ್ಲ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ಹುದ್ದೆಯನ್ನು ಹುಡುಕಿಕೊಂಡು ಹೋಗೋದಿಲ್ಲ. ಬೊಮ್ಮಾಯಿ ಸರ್ಕಾರದಲ್ಲೂ ಸಚಿವ ಸ್ಥಾನ, ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿರಲಿಲ್ಲ, ಆದರೆ ಪಕ್ಷ ಬಯಸಿ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಾಗ ಯಾವುದೇ ಷರತ್ತುಗಳನ್ನು ಇಟ್ಟವರಲ್ಲ. ನನಗೆ ಇನ್ನೂ ವಯಸ್ಸಿದೆ. ಸದ್ಯ ಪಕ್ಷ ಸಂಘಟನೆ ಮಾಡುತ್ತೇನೆ. ವರಿಷ್ಠರು ಯಾವುದೇ ಸ್ಥಾನಮಾನ ಕೊಟ್ಟರೂ ಅದನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುವ ವಿಶ್ವಾಸ ಇದೆ ಎಂದರು.
'ನನ್ನ ತಂದೆ ಡಿಸಿಎಂ, ಮಂತ್ರಿ ಸ್ಥಾನಕ್ಕೆ ಒತ್ತಡ ಹೇರಿಲ್ಲ : ನನಗಿನ್ನೂ ಸಾಕಷ್ಟು ಜವಾಬ್ದಾರಿ ಇದೆ'
ನಾನು ಕಲಬುರಗಿ ಅಳಿಯ: ನಾನು ಕಲಬುರಗಿ ಜಿಲ್ಲೆಯ ಅಳಿಯ, ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬೇಕಿತ್ತು, ಇದು ನನಗೂ ಸೇರಿ ಎಲ್ಲರಿಗೂ ನೋವು ತಂದಿದ್ದು ನಿಜ. ಇನ್ನೂ ನಾಲ್ಕು ಸಚಿವ ಸ್ಥಾನ ಖಾಲಿ ಇವೆ, ಜಿಲ್ಲೆಗೆ ಸೂಕ್ತ ಸ್ಥಾನಮಾನ ಸಿಗುವ ವಿಶ್ವಾಸವಿದೆ ಎಂದರು.