
ಬೆಂಗಳೂರು(ಜೂ.23): ‘ವಿದ್ಯುತ್ ದರ ಏರಿಕೆ ಖಂಡಿಸಿ ಕೈಗಾರಿಕೆಗಳ ಬಂದ್ ಮಾಡಿರುವುದು ಹಾಗೂ ಬೇರೆ ರಾಜ್ಯಗಳಿಗೆ ಹೋಗುವುದಾಗಿ ಬೆದರಿಕೆ ಹಾಕುವುದು ಸರಿಯಲ್ಲ. ದರ ಹೆಚ್ಚಳ ಮಾಡಿರುವುದು ಹಿಂದಿನ ಸರ್ಕಾರ. ವಿದ್ಯುತ್ ದರ ಏರಿಕೆ ಹಿಂದಕ್ಕೆ ಪಡೆಯುತ್ತೇನೆ ಎಂದು ನಾನು ಹೇಳಲು ಸಾಧ್ಯವಿಲ್ಲ. ಆ ಅಧಿಕಾರವೂ ನನಗೆ ಇಲ್ಲ.’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ‘ದರ ಹೆಚ್ಚಳ ಮಾಡಿರುವುದು ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಸರ್ಕಾರ. ಕೈಗಾರಿಕಾ ಸಂಘದವರು ಯಾರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಚರ್ಚೆಗೆ ಕರೆದರೂ ಬರದೇ ಬಂದ್ ಮಾಡಿದರೆ ಏನರ್ಥ?’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದೇ ಬಿಜೆಪಿ ಜಾಯಮಾನ: ಸಚಿವ ಜಾರ್ಜ್
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಕರೆ ನೀಡಿದ್ದ ಕೈಗಾರಿಕಾ ಬಂದ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಮಗೂ ವಿದ್ಯುತ್ ದರ ಏರಿಕೆಗೂ ಸಂಬಂಧವಿಲ್ಲ. ಸುಮ್ಮನೆ ರಾಜಕೀಯಕ್ಕಾಗಿ ಬಂದ್ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೈಗಾರಿಕಾ ಸಚಿವರು ಹಾಗೂ ಸಂಘಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದೆವು. ಆದರೂ ಬಂದ್ ಮಾಡಿದರೆ ನಾವು ಏನೂ ಮಾಡಲಾಗುವುದಿಲ್ಲ ಎಂದರು.
ಮಹಾರಾಷ್ಟ್ರದಲ್ಲಿ ದರ ಹೆಚ್ಚಿದೆ:
ಬೇರೆ ರಾಜ್ಯಗಳಿಗೆ ಹೋಗುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಬೆದರಿಕೆ ಹಾಕುವುದು ಸರಿಯಲ್ಲ. ಅವರು ಹೇಳಿದ ಮೇಲೆ ಬೇರೆ ರಾಜ್ಯಗಳಲ್ಲಿ ನಾವೂ ವಿಚಾರಿಸಿದ್ದೇವೆ. ಮಹಾರಾಷ್ಟ್ರದಲ್ಲಿ ವಿದ್ಯುತ್ ದರ ನಮಗಿಂತ ಹೆಚ್ಚಾಗಿದೆ ಎಂದು ತಿರುಗೇಟು ನೀಡಿದರು.
ಸಿ.ಟಿ.ರವಿ ಪಾರ್ಟಿ ಮ್ಯಾನ್, ಅವರಿಗೆ ಅಕ್ಕಿ ವಿತರಣೆ ಬಗ್ಗೆ ಹೇಗೆ ಗೊತ್ತಾಗುತ್ತೆ: ಸಚಿವ ಜಾರ್ಜ್
ಹಿಂದಿನ ಸರ್ಕಾರದ ಕೆಲಸ:
ದರ ಹೆಚ್ಚಳದಲ್ಲಿ ನಮ್ಮ ಸರ್ಕಾರದ ಪಾತ್ರವಿಲ್ಲ. 2022ರ ನವೆಂಬರ್‌ನಲ್ಲೇ ದರ ಹೆಚ್ಚಳದ ಪ್ರಕ್ರಿಯೆ ಶುರುವಾಗಿದೆ. ಕೇಂದ್ರ ಸರ್ಕಾರದ ಕಾಯ್ದೆ ಅಡಿ ಇರುವ ಕೆಇಆರ್‌ಸಿಗೆ ಪ್ರತಿ ಯುನಿಟ್‌ಗೆ 1.50 ರು. ಹೆಚ್ಚಳ ಮಾಡುವಂತೆ ಬಿಜೆಪಿ ಸರ್ಕಾರ ಮನವಿ ಮಾಡಿತ್ತು. ಅವರು ಮಾಚ್‌ರ್ ತಿಂಗಳಲ್ಲಿ ಪ್ರತಿ ಯುನಿಟ್‌ಗೆ 70 ಪೈಸೆ ಮಾತ್ರ ಹೆಚ್ಚಳ ಮಾಡಿದ್ದರು. ಆ ಆದೇಶ ಮೇ.12 ರಂದು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲು ಹೊರ ಬಿತ್ತು. ಇದರನ್ನು ಬದಲಿಸುವ ಅಧಿಕಾರ ನಮಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯುತ್ ದರ ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಇರುವುದಿಲ್ಲ. ಬದಲಿಗೆ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿದ್ದರೆ ಮೇಲ್ಮನವಿ ನ್ಯಾಯಾಧೀಕರಣದ ಬಳಿ ಮೇಲ್ಮನವಿ ಸಲ್ಲಿಸಬಹುದು. ಸರ್ಕಾರಕ್ಕೆ ಏನು ಮಾಡಬಹುದು ಎಂದು ಬಂದ್ ಮಾಡುತ್ತಿರುವವರು ಸಲಹೆ ನೀಡಿದರೆ ನಾವು ಸೂಕ್ತ ನಿರ್ಧಾರ ಮಾಡಬಹುದು. ಚರ್ಚೆಗೆ ಕರೆದರೂ ಬಾರದಿದ್ದರೆ ನಾವು ಏನೂ ಮಾಡಲಾಗಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ