'ಕರ್ನಾಟಕದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿ'

By Kannadaprabha News  |  First Published Jun 23, 2023, 2:30 AM IST

ರಾಜ್ಯದ ನಾನಾ ವಿಶ್ವವಿದ್ಯಾನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅನೇಕ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ವಿಶ್ವವಿದ್ಯಾಲಯ ನೀಡುವ ಕಡಿಮೆ ಸಂಬಳವೂ ಅವರ ಜೀವನ ನಿರ್ವಹಣೆಗೂ ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ವಿವಿಗಳಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುವುದರಿಂದ ಬಹಳ ಅನುಕೂಲವಾಗಲಿದೆ


ಅಭಿಷೇಕ್‌ ಪಾಳೇಗಾರ್‌

ಮೈಸೂರು(ಜೂ.23): ರಾಜ್ಯದ ನಾನಾ ವಿಶ್ವವಿದ್ಯಾನಿಲಯಗಳಲ್ಲಿ ಹಳ್ಳಿಗಳಿಂದ ಹಿಡಿದು ದೇಶ ವಿದೇಶದಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಪ್ರತಿನಿತ್ಯ ಬರುತ್ತಿದ್ದು, ಇದರಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಹಾಗೂ ಕಡಿಮೆ ಸಂಬಳಕ್ಕೆ ದುಡಿಯುವ ಹೊರಗುತ್ತಿಗೆ ಆಧಾರದ ನೌಕರರೇ ಹೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಹಸಿವು ತಣಿಸುವ ಇಂದಿರಾ ಕ್ಯಾಂಟೀನ್‌ಗಳು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸ್ಥಾಪಿಸುವ ಅನಿವಾರ್ಯತೆ ಇದೆ.

Tap to resize

Latest Videos

ಕ್ಯಾಂಪಸ್‌ನಲ್ಲಿ ಪೈಪೋಟಿಗಿಳಿದ ಕ್ಯಾಂಟೀನ್‌ಗಳು:

ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸ್ನೇಹಿ ಕ್ಯಾಂಟಿನ್‌ ಅಳವಡಿಸಿಕೊಳ್ಳಲಾಗಿದೆ. ಆದರೆ ಹಲವು ವರ್ಷಗಳ ಇತಿಹಾಸವಿರುವ ರಾಜ್ಯದ ವಿವಿಯಲ್ಲಿರುವ ಕ್ಯಾಂಟಿನ್‌ಗಳು ವಾಣಿಜ್ಯ ಪೈಪೋಟಿಗಿಳಿದಿದ್ದು ದುಬಾರಿ ಬೆಲೆಯಲ್ಲಿ ಉಪಹಾರ ಮತ್ತು ಊಟವನ್ನು ನೀಡುತ್ತಿವೆ. ಪ್ರತಿನಿತ್ಯ ದೂರದ ಗ್ರಾಮೀಣ ಪ್ರದೇಶದಿಂದ ಆಗಮಿಸುವ ಬಡ ವಿದ್ಯಾರ್ಥಿಗಳು ಇಂತಹ ಕ್ಯಾಂಟೀನ್‌ಗಳಲ್ಲಿ ಒಂದು ಕಪ್‌ ಚಹಾ ಸೇವಿಸಲು ಕೂಡ ಹಿಂದೇಟು ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ವಿವಿಯ ಹೊರಗಡೆ ಕಳಪೆ ಗುಣಮಟ್ಟದ ಆಹಾರ ಅರಸಿ ಹೋಗಬೇಕಿದೆ. ಇದರಿಂದ ಆರೋಗ್ಯದಲ್ಲಿ ಏರುಪೇರಾಗಿ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ನಿದರ್ಶನಗಳಿವೆ.

ಹೋಟೆಲ್‌ ಊಟ ಮೀರಿಸಿದ ಇಂದಿರಾ ಕ್ಯಾಂಟೀನ್‌: ತರಹೇವಾರಿ ಊಟದ ಮೆನು ಬಿಡುಗಡೆ

ವಿವಿ ನೌಕರರಿಗೂ ಅನುಕೂಲ:

ರಾಜ್ಯದ ನಾನಾ ವಿಶ್ವವಿದ್ಯಾನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅನೇಕ ನೌಕರರು ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ವಿಶ್ವವಿದ್ಯಾಲಯ ನೀಡುವ ಕಡಿಮೆ ಸಂಬಳವೂ ಅವರ ಜೀವನ ನಿರ್ವಹಣೆಗೂ ಸಾಕಾಗುತ್ತಿಲ್ಲ. ಈ ನಿಟ್ಟಿನಲ್ಲಿ ವಿವಿಗಳಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುವುದರಿಂದ ಬಹಳ ಅನುಕೂಲವಾಗಲಿದೆ.

ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲೂ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಿ:

ರಾಜ್ಯ ಸರ್ಕಾರ ಸಾರ್ವಜನಿಕ ಹಾಗೂ ಅಸಹಾಯಕರ ಹಿತದೃಷ್ಟಿಯಿಂದ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್‌ ಯೋಜನೆಯೂ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿಯೂ ಸ್ಥಾಪಿಸುವ ಮೂಲಕ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಕಡಿಮೆ ಸಂಬಳಕ್ಕೆ ದುಡಿಯುವ ವಿವಿಯ ಹೊರಗುತ್ತಿಗೆ ನೌಕರರಿಗೆ ನೆರವಾಗಬೇಕಿದೆ.

ಇಂದಿರಾ ಕ್ಯಾಂಟೀನ್‌ ಊಟದ ಮೆನು ಬದಲಾವಣೆ: ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ

ವಿಶ್ವವಿದ್ಯಾನಿಲಯಗಳಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುವುದರಿಂದ ಪ್ರತಿನಿತ್ಯ ದೂರದ ಊರುಗಳಿಂದ ವಿದ್ಯಾಭ್ಯಾಸಕ್ಕೆ ಬರುವ ಬಡ ಹಾಗೂ ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ. ಎಷ್ಟೋ ಬಾರಿ ಹಸಿದುಕೊಂಡು ಮಧ್ಯಾಹ್ನದ ತರಗತಿಗೆ ಹೋಗುವ ವಿದ್ಯಾರ್ಥಿಗಳ ಹಸಿವು ನೀಗಿಸಿದಂತಾಗುತ್ತದೆ ಅಂತ ಮೈಸೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಬಿ.ಎಸ್‌. ಭೂಮಿಕಾ ತಿಳಿಸಿದ್ದಾರೆ. 

ನಾವು ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ನಮ್ಮ ಸಂಬಳವೂ ಬಹಳ ಕಡಿಮೆ ಇದೆ. ಈ ಸಂಬಳಕ್ಕೆ ಜೀವನ ನಿರ್ವಹಣೆಯೇ ಕಷ್ಟ. ಈ ನಿಟ್ಟಿನಲ್ಲಿ ವಿವಿಯಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುವುದರಿಂದ ನಮಗೆ ಬಹಳ ಅನುಕೂಲವಾಗಲಿದೆ ಅಂತ ಮೈಸೂರು ವಿವಿ ಹೊರಗುತ್ತಿಗೆ ನೌಕರ ಜಗದೀಶ್‌ ತಿಳಿಸಿದ್ದಾರೆ.

click me!