ಗುತ್ತಿಗೆದಾರರ ಬಿಲ್‌ ಪಾವತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ಜಾರಕಿಹೊಳಿ

By Kannadaprabha News  |  First Published Sep 16, 2023, 7:33 AM IST

ಲೋಕೋಪಯೋಗಿ ಇಲಾಖೆಯಲ್ಲಿ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ 1500 ಕೋಟಿ ರು. ಬಿಲ್‌ ಬಾಕಿ, ಅಕ್ಟೋಬರ್‌ ತಿಂಗಳಾಂತ್ಯದೊಳಗೆ ಬಿಲ್‌ ಪಾವತಿ: ಸಭೆಯಲ್ಲಿ ಸಚಿವ ಜಾರಕಿಹೊಳಿ ಭರವಸೆ


ಬೆಂಗಳೂರು(ಸೆ.16): ಪರಿಶಿಷ್ಟ ಜಾತಿ/ಪಂಗಡದ ಗುತ್ತಿಗೆದಾರರು ಅನುಷ್ಠಾನಗೊಳಿಸಿದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಬಾಕಿ ಬಿಲ್‌ ಅಕ್ಟೋಬರ್‌ ತಿಂಗಳ ಅಂತ್ಯದೊಳಗೆ ಪಾವತಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಭರವಸೆ ನೀಡಿದರು.

ರಾಜ್ಯ ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದೊಂದಿಗೆ ವಿಕಾಸಸೌಧದಲ್ಲಿ ಶುಕ್ರವಾರ ಸತೀಶ್‌ ಜಾರಕಿಹೊಳಿ ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಗುತ್ತಿಗೆದಾರರು ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಅನುಷ್ಠಾನಗೊಳಿಸಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ 1,500 ಕೋಟಿ ರು. ಬಿಲ್‌ ಬಾಕಿ ಉಳಿಸಿಕೊಳ್ಳಲಾಗಿದೆ. ಅದನ್ನು ಶೀಘ್ರದಲ್ಲಿ ಪಾವತಿಸಬೇಕು ಎಂದು ಒತ್ತಾಯಿಸಿದರು.

Tap to resize

Latest Videos

ಮುಖ್ಯಮಂತ್ರಿ ಹುದ್ದೆಗೆ ದೀನ-ದಲಿತರಿಗೂ ಅವಕಾಶ ಸಿಗಲಿದೆ: ಸತೀಶ್ ಜಾರಕಿಹೊಳಿ

ಅದಕ್ಕೆ ಪ್ರತಿಕ್ರಿಯಿಸಿದ ಸತೀಶ್‌ ಜಾರಕಿಹೊಳಿ, ಬಾಕಿ ಬಿಲ್‌ ಪಾವತಿ ಕಾರ್ಯ ಶೀಘ್ರದಲ್ಲಿ ಆರಂಭವಾಗಲಿದೆ. ಅದರಲ್ಲಿ ಆದ್ಯತೆ ಮೇರೆಗೆ ಎಸ್ಸಿ/ಎಸ್ಟಿ ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಸಲಾಗುವುದು. ಅಕ್ಟೋಬರ್‌ ತಿಂಗಳಾಂತ್ಯದಲ್ಲಿ ಎಸ್ಸಿ/ಎಸ್ಟಿ ಗುತ್ತಿಗೆದಾರರು ಸಲ್ಲಿಸಿದ ಎಲ್ಲ ಬಿಲ್‌ಗಳ ಮೊತ್ತವನ್ನೂ ಪಾವತಿಸಲಾಗುವುದು ಎಂದು ತಿಳಿಸಿದರು.

ಅದೇ ರೀತಿ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ಎಲ್‌ಒಸಿ ನೀಡುವಲ್ಲಿಯೂ ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡಬೇಕು. ಕೆಆರ್‌ಡಿಎಲ್‌, ನಿರ್ಮಿತಿ ಕೇಂದ್ರ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ ಸಂದರ್ಭದಲ್ಲಿಯೇ ಕಾಮಗಾರಿ ಮೊತ್ತದ ಶೇ. 30ರಷ್ಟು ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಆ ವ್ಯವಸ್ಥೆಯನ್ನು ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೂ ಅನ್ವಯವಾಗುವಂತೆ ಮಾಡಬೇಕು. ಲೋಕೋಪಯೋಗಿ ಇಲಾಖೆ ಸೇರಿದಂತೆ ಉಳಿದೆಲ್ಲ ಇಲಾಖೆಗಳ ಬಿಲ್‌ ಪಾವತಿ ವೇಳೆ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು.

ರಿಪಬ್ಲಿಕ್‌ ಆಫ್‌ ಭಾರತ್‌, ಬಿಜೆಪಿಯರಿಗೆ ಲಾಭ ಆಗುತ್ತದೆ ಅಂದ್ರೆ ಏನು ಬೇಕಾದರೂ ಮಾಡ್ತಾರೆ, ಜಾರಕಿಹೊಳಿ

ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್‌ ಮಾದರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಅದರಿಂದ ಸಣ್ಣ ಗುತ್ತಿಗೆದಾರರಿಗೆ ಕೆಲಸ ಸಿಗದಂತಾಗುತ್ತಿದೆ. ಅದನ್ನು ತಡೆಯುವ ಸಲುವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗುತ್ತಿಗೆದಾರರ ಮನವಿ ಆಲಿಸಿದ ಸತೀಶ್‌ ಜಾರಕಿಹೊಳಿ, ಬೇಡಿಕೆಗಳೆಲ್ಲವನ್ನೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈಡೇರಿಸಲು ಪ್ರಯತ್ನಿಸುತ್ತೇನೆ. ಅದರಲ್ಲೂ ಕಾಮಗಾರಿಗೂ ಮುನ್ನವೇ ಹಣ ಬಿಡುಗಡೆಯಂತಹ ಬೇಡಿಕೆಯನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

click me!