Bike Ambulance: ಟ್ರಾಫಿಕ್ ನಡುವೆ ಜೀವ ರಕ್ಷಕ; ಬೈಕ್ ಆಂಬುಲೆನ್ಸ್‌ಗೆ ಮರುಜೀವ ನೀಡಿದ ಸರ್ಕಾರ!

Published : Jul 04, 2026, 10:33 AM IST
Bike Ambulance

ಸಾರಾಂಶ

ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ನೀಡಲು ಕರ್ನಾಟಕ ಆರೋಗ್ಯ ಇಲಾಖೆಯು 'ಬೈಕ್ ಆಂಬುಲೆನ್ಸ್' ಸೇವೆಯನ್ನು ಮರುಪ್ರಾರಂಭಿಸುತ್ತಿದೆ. ಮೊದಲ ಹಂತದಲ್ಲಿ 100 ಹೈಟೆಕ್ ಬೈಕ್‌ಗಳು ರಸ್ತೆಗಿಳಿಯಲಿವೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

ಬೆಂಗಳೂರು: ಮಹಾನಗರದ ತೀವ್ರ ಸಂಚಾರ ದಟ್ಟಣೆ ಹಾಗೂ ಕಿರಿದಾದ ರಸ್ತೆಗಳ ಮಧ್ಯೆ ಸಿಲುಕಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಜೀವ ಕಳೆದುಕೊಳ್ಳುವ ರೋಗಿಗಳಿಗೆ ನೆರವಾಗಲು ಕರ್ನಾಟಕ ಆರೋಗ್ಯ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ 'ಬೈಕ್ ಆಂಬುಲೆನ್ಸ್' ಸೇವೆಗೆ ರಾಜ್ಯ ಸರ್ಕಾರ ಮತ್ತೆ ಮರುಜೀವ ನೀಡುತ್ತಿದ್ದು, ಮೊದಲ ಹಂತದಲ್ಲಿ 100 ಹೈಟೆಕ್ ಬೈಕ್‌ಗಳನ್ನು ರಸ್ತೆಗಿಳಿಸಲು ಸಿದ್ಧತೆ ನಡೆಸಿದೆ. ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಮೊದಲ ಒಂದು ಗಂಟೆಯ ಸಮಯವನ್ನು 'ಗೋಲ್ಡನ್ ಅವರ್' ಎನ್ನಲಾಗುತ್ತದೆ. ಈ ಅವಧಿಯಲ್ಲಿ ರೋಗಿಗೆ ಸಿಗುವ ಪ್ರಾಥಮಿಕ ಚಿಕಿತ್ಸೆ ಆತನ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಯೋಜನೆಯ ಹಿನ್ನೆಲೆ ಮತ್ತು ಸ್ಥಗಿತಕ್ಕೆ ಕಾರಣ!

ರಾಜ್ಯ ಸರ್ಕಾರವು ಈ ವಿನೂತನ ಯೋಜನೆಯನ್ನು ಮೊದಲು 2015 ರಲ್ಲಿಯೇ 30 ಬೈಕ್ ಆಂಬುಲೆನ್ಸ್‌ಗಳೊಂದಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಆರಂಭದಲ್ಲಿ ಉತ್ತಮ ಸ್ಪಂದನೆ ಸಿಕ್ಕಿತ್ತಾದರೂ, ನಂತರದ ದಿನಗಳಲ್ಲಿ ಸೂಕ್ತ ವಾಹನ ನಿರ್ವಹಣೆಯ ಕೊರತೆ, ತಾಂತ್ರಿಕ ಅಡಚಣೆಗಳು ಹಾಗೂ ಸಾರ್ವಜನಿಕರಲ್ಲಿ ಈ ಬಗ್ಗೆ ಸರಿಯಾದ ಜಾಗೃತಿ ಇಲ್ಲದ ಕಾರಣ ಯೋಜನೆ ನೀರಸವಾಯಿತು. ಪರಿಣಾಮವಾಗಿ ಇಲಾಖೆಯು ಇದರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಪ್ರಸ್ತುತ ಬೆಂಗಳೂರಿನ ಸಂಚಾರ ದಟ್ಟಣೆ ಮಿತಿಮೀರಿರುವುದರಿಂದ ಈ ಸೇವೆಯ ಅನಿವಾರ್ಯತೆ ಮತ್ತೆ ಎದುರಾಗಿದೆ.

ಬೈಕ್ ಆಂಬುಲೆನ್ಸ್ ಹೇಗೆ ಕೆಲಸ ಮಾಡುತ್ತದೆ?

ಈ ಬೈಕ್ ಆಂಬುಲೆನ್ಸ್‌ಗಳು ಕಿರಿದಾದ ಗಲ್ಲಿಗಳು, ಫ್ಲೈಓವರ್‌ಗಳು ಹಾಗೂ ಭಾರಿ ಟ್ರಾಫಿಕ್ ಇರುವ ರಸ್ತೆಗಳಲ್ಲೂ ಸುಲಭವಾಗಿ ನುಸುಳಿಕೊಂಡು ಸಾಗಬಲ್ಲವು. ಸಾಮಾನ್ಯ ಆಂಬುಲೆನ್ಸ್‌ಗಳಿಗಿಂತ ಇವು ಸುಮಾರು ಶೇ. 40 ರಷ್ಟು ವೇಗವಾಗಿ ನಿಗದಿತ ಸ್ಥಳವನ್ನು ತಲುಪುತ್ತವೆ. ತರಬೇತಿ ಪಡೆದ ಪ್ಯಾರಾಮೆಡಿಕಲ್ ಸಿಬ್ಬಂದಿ ಅಥವಾ ನರ್ಸ್‌ಗಳು ಈ ಬೈಕ್‌ಗಳನ್ನು ಚಲಾಯಿಸಲಿದ್ದಾರೆ. ಅಪಘಾತ ಅಥವಾ ಹೃದಯಾಘಾತ ಸಂಭವಿಸಿದ ಜಾಗಕ್ಕೆ ತಕ್ಷಣವೇ ತಲುಪುವ ಈ ಸಿಬ್ಬಂದಿ, ದೊಡ್ಡ ಆಂಬುಲೆನ್ಸ್ ಬರುವವರೆಗೂ ರೋಗಿಯ ಸ್ಥಿತಿ ಗಂಭೀರವಾಗದಂತೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಜೀವ ರಕ್ಷಿಸಲಿದ್ದಾರೆ.

ಜೀವರಕ್ಷಕ ಉಪಕರಣಗಳ ಸೌಲಭ್ಯ!

ಇವು ಕೇವಲ ಸಾಮಾನ್ಯ ಬೈಕ್‌ಗಳಾಗಿರದೆ, ಮಿನಿ ತುರ್ತು ಚಿಕಿತ್ಸಾ ಘಟಕದಂತೆ ಕಾರ್ಯನಿರ್ವಹಿಸಲಿವೆ. ಪ್ರತಿ ಬೈಕ್ ಆಂಬುಲೆನ್ಸ್‌ನಲ್ಲಿ ಪೋರ್ಟಬಲ್ ಆಮ್ಲಜನಕ ಸಿಲಿಂಡರ್ ಪ್ರಥಮ ಚಿಕಿತ್ಸಾ ಕಿಟ್ ಮತ್ತು ಜೀವರಕ್ಷಕ ತುರ್ತು ಔಷಧಗಳುಬಿಪಿ ಮಾನಿಟರ್ ಮತ್ತು ಗ್ಲುಕೋಮೀಟರ್ ಉಪಕರಣಗಳು ಹೃದಯದ ಲಯ ಪರಿಶೀಲಿಸುವ ಯಂತ್ರ ಡಿಜಿಟಲ್ ಕಮ್ಯುನಿಕೇಶನ್ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಸೇರಿ ಇತರ ಸೌಲಭ್ಯಗಳು ಇಲ್ಲಿವೆ. ಭಾರತದ ಪ್ರಮುಖ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಬೈಕ್ ಆಂಬುಲೆನ್ಸ್ ಸೇವೆಗಳು ಅತ್ಯಂತ ಯಶಸ್ವಿಯಾಗಿ ರೋಗಿಗಳ ಪ್ರಾಣ ಉಳಿಸುತ್ತಿವೆ. ಅದೇ ಮಾದರಿಯನ್ನು ಇದೀಗ ಕರ್ನಾಟಕದಲ್ಲಿ ಹೆಚ್ಚು ವ್ಯವಸ್ಥಿತವಾಗಿ ಜಾರಿಗೆ ತರಲಾಗುತ್ತಿದೆ. ಈ ಬಾರಿ ಕೇವಲ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಇತರೆ ಪ್ರಮುಖ ನಗರಗಳು ಹಾಗೂ ಗ್ರಾಮೀಣ ಭಾಗಗಳಿಗೂ ಹಂತ ಹಂತವಾಗಿ ಈ ಸೇವೆಯನ್ನು ವಿಸ್ತರಿಸಲು ಆರೋಗ್ಯ ಇಲಾಖೆ ನೀಲನಕ್ಷೆ ಸಿದ್ಧಪಡಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Rain Alert: ಮನೆಯಿಂದ ಹೊರಡುವ ಮುನ್ನ ಎಚ್ಚರ; ರಾಜ್ಯದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಮುಂದಿನ ಕೆಲ ಗಂಟೆಗಳಲ್ಲಿ ಭಾರೀ ಮಳೆ!
ಕರ್ನಾಟಕ ಹೈಕೋರ್ಟ್ ನೇಮಕಾತಿ: ಡೇಟಾ ಎಂಟ್ರಿ ಹುದ್ದೆಗಳು, 80 ಸಾವಿರದವರೆಗೆ ವೇತನ