Karnataka SIR: ಮುರಾ ಗ್ರಾಮ ಮರ, ಟ್ರೀ ಬರೆದು ಎಡವಟ್ಟು, ಎಸ್‌ಐಆರ್ ಕನ್ನಡಲ್ಲೇ ನಡೆಸಲು ಕರವೇ ಆಗ್ರಹ

Kannadaprabha News   | Kannada Prabha
Published : Jul 04, 2026, 08:19 AM IST
TA Narayana Gowda demands that SIR process in Kannada to avoid spelling errors

ಸಾರಾಂಶ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌) ಅಕ್ಷರ ದೋಷದಿಂದ ನಾಗರಿಕರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಕನ್ನಡದಲ್ಲೇ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಆಗ್ರಹಿಸಿದೆ.

  • ಕನ್ನಡದ ಗ್ರಾಮಗಳ ಹೆಸರು ತಪ್ಪಾಗಿ ಅನುವಾದ
  • ಇದರಿಂದ ಗಂಭೀರ ಅವಾಂತರ: ನಾರಾಯಣಗೌಡ

ಬೆಂಗಳೂರು (ಜು.4): ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (SIR) ಅಕ್ಷರ ದೋಷದಿಂದ ನಾಗರಿಕರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣ ಕನ್ನಡದಲ್ಲೇ ನಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಆಗ್ರಹಿಸಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕನ್ನಡದ ಗ್ರಾಮಗಳ ಹೆಸರುಗಳು, ಮತಗಟ್ಟೆಗಳ ಹೆಸರುಗಳು ಹಾಗೂ ಇತರ ವಿವರಗಳನ್ನು ಇಂಗ್ಲಿಷ್‌ಗೆ ತಪ್ಪಾಗಿ ಅನುವಾದಿಸುವ ಮೂಲಕ ಗಂಭೀರ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದು ಮತದಾರರ ಗುರುತು, ಸ್ಥಳದ ಗುರುತು ಹಾಗೂ ಸರ್ಕಾರಿ ದಾಖಲೆಗಳ ವಿಶ್ವಾಸಾರ್ಹತೆ ಮೇಲೆಯೇ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇಂಥ ನೂರಾರು ಉದಾಹರಣೆಗಳೂ ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರಗಳಲ್ಲಿ ನಡೆದಿವೆ. ಆದ್ದರಿಂದ ಕನ್ನಡದಲ್ಲೇ ಮಾಹಿತಿ ದಾಖಲು, ಸಂಗ್ರಹಣೆ ನಡೆಯಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದ್ದಾರೆ.

ಮುರ ಗ್ರಾಮ ಟ್ರೀ ಆಗಿ ಬದಲು:

ಶುಕ್ರವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ‘ಮುರ’ ಎಂಬ ಗ್ರಾಮ(Mura village)ದ ಮತಗಟ್ಟೆಯ ಹೆಸರು ಮತದಾರರ ಪಟ್ಟಿಯಲ್ಲಿ ಇಂಗ್ಲಿಷ್‌ನಲ್ಲಿ ‘ಟ್ರೀ’ ಎಂದು ಬದಲಾಗಿರುವ ಘಟನೆ ಬೆಳಕಿಗೆ ಬಂದಿದೆ. ‘ಮುರ’ ಎಂಬ ಗ್ರಾಮದ ಹೆಸರನ್ನು ಮೊದಲು ‘ಮರ’ ಎಂದು ತಪ್ಪಾಗಿ ದಾಖಲಿಸಿ, ನಂತರ ‘ಮರ’ಕ್ಕೆ ಇಂಗ್ಲಿಷ್ ಪದವಾದ ‘ಟ್ರೀ’ ಎಂದು ಅನುವಾದಿಸಿರುವುದು ಅತ್ಯಂತ ಬೇಜವಾಬ್ದಾರಿ ಕೆಲಸ. ಇದೊಂದು ಸಣ್ಣ ಉದಾಹರಣೆಯಷ್ಟೇ. ರಾಜ್ಯದಾದ್ಯಂತ ಇಂಥ ಅನೇಕ ದೋಷಗಳು ನಡೆದಿರುವ ಮತ್ತು ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡ ನಾಡಿನ ಗ್ರಾಮಗಳ ಹೆಸರುಗಳು, ವ್ಯಕ್ತಿಗಳ ಹೆಸರುಗಳು, ಕೆರೆ, ಹಳ್ಳಿ, ಕೋಟೆ, ಪಾಳ್ಯ, ಪೇಟೆ, ಬೀದಿ, ರಸ್ತೆ, ವಾರ್ಡ್ ಸೇರಿ ಸ್ಥಳನಾಮಗಳು ಯಾವುದೂ ಅನುವಾದಕ್ಕೆ ಒಳಪಡಬಾರದು. ಅವುಗಳಿಗೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ಮಹತ್ವವಿದೆ. ಅಂಥ ಹೆಸರುಗಳನ್ನು ಅರ್ಥ ಬದಲಿಸಿ ಇಂಗ್ಲಿಷ್‌ಗೆ ಅನುವಾದಿಸುವುದು ಅಧಿಕೃತ ದಾಖಲೆಗಳ ಮೂಲಸ್ವರೂಪವನ್ನೇ ವಿಕೃತಗೊಳಿಸುತ್ತದೆ. ಆದ್ದರಿಂದ ಮತದಾರರ ಪಟ್ಟಿ ಪರಿಷ್ಕರಣೆ, ದತ್ತಾಂಶ ನಮೂದು, ಪರಿಶೀಲನೆ, ತಿದ್ದುಪಡಿ ಸೇರಿ ಸಂಪೂರ್ಣ ಪ್ರಕ್ರಿಯೆಯ ಮೂಲ ದಾಖಲೆಗಳು ಕನ್ನಡದಲ್ಲೇ ನಿರ್ವಹಣೆಯಾಗಬೇಕು. ಇಂಗ್ಲಿಷ್ ಅಗತ್ಯವಿದ್ದರೆ ಕನ್ನಡ ಪದಗಳ ಲಿಪ್ಯಂತರ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಅರ್ಥಾನುವಾದ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿಯ ದತ್ತಾಂಶ ಸಿದ್ಧಪಡಿಸುವ ಸಿಬ್ಬಂದಿಗೆ ಕನ್ನಡ ಭಾಷೆ ಮತ್ತು ಸ್ಥಳನಾಮಗಳ ಕುರಿತು ಸೂಕ್ತ ತರಬೇತಿ ನೀಡಬೇಕು. ಸಾರ್ವಜನಿಕರು ತಪ್ಪುಗಳನ್ನು ಸುಲಭವಾಗಿ ವರದಿ ಮಾಡಲು ವಿಶೇಷ ಸಹಾಯವಾಣಿ ಹಾಗೂ ತ್ವರಿತ ತಿದ್ದುಪಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರು ಚಲಾಯಿಸುವಾಗ ದಿಢೀರ್ ಉಸಿರಾಟ ಸಮಸ್ಯೆ, ಮಹಿಳೆಯ ಜೀವ ಉಳಿಸಿದ ಮಡಿವಾಳ ಸಂಚಾರಿ ಪೊಲೀಸ್ ಪೇದೆ
ಶಿವರಾಮ ಕಾರಂತ ಬಡಾವಣೆ ಫಲಾನುಭವಿಗಳಿಗೆ ಗುಡ್‌ನ್ಯೂಸ್! ನಿವೇಶನ ಹಂಚಿಕೆಗೆ ಹೈಕೋರ್ಟ್‌ ಗ್ರೀನ್ ಸಿಗ್ನಲ್