ಬೀದರ್‌ನಲ್ಲಿ 5.5 ಡಿಗ್ರಿ ತಾಪಮಾನ, ಸ್ವೇಟರ್, ರಗ್ಗುಗಳಿಗೆ ಮೊರೆಯಿಟ್ಟ ಜನ, ಸ್ವೇಟರ್, ರಗ್ಗಿನ ದರ ದುಪ್ಪಟ್ಟು.
ಬೆಂಗಳೂರು(ಜ.10): ರಾಜ್ಯದ ಹಲವೆಡೆ, ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೊರೆಯುವ ಚಳಿಯಿದ್ದು, ಜನರಲ್ಲಿ ನಡುಕ ಹುಟ್ಟಿಸಿದೆ. ಜನ ಸ್ವೇಟರ್, ರಗ್ಗಿನ ಮೊರೆ ಹೋಗಿದ್ದಾರೆ. ಆದರೂ, ಚಳಿಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸೋಮವಾರ ಬೀದರ್‌ನಲ್ಲಿ ತಾಪಮಾನ ರಾಜ್ಯದಲ್ಲಿಯೇ ಅತಿ ಕನಿಷ್ಟ, 5.5 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.
ಉತ್ತರ ಒಳನಾಡು ಭಾಗದಲ್ಲಿ ವಿಪರೀತ ಚಳಿ ಮುಂದುವರಿದಿದೆ. ಬೀದರ್‌ನಲ್ಲಿ 5.5 ಡಿಗ್ರಿ, ಬಾಗಲಕೋಟೆಯಲ್ಲಿ 6, ವಿಜಯಪುರದಲ್ಲಿ 6.5, ಬಳ್ಳಾರಿಯಲ್ಲಿ 7.2, ಧಾರವಾಡದಲ್ಲಿ 9.8, ಬೆಳಗಾವಿಯಲ್ಲಿ 10, ಕಲಬುರಗಿಯಲ್ಲಿ 11.4 ಡಿಗ್ರಿ ಸೆಲ್ಸಿಯಸ್‌ನಷ್ಟುಕನಿಷ್ಟತಾಪಮಾನ ದಾಖಲಾಗಿದೆ. ಹೀಗಾಗಿ, ಬಿಸಿಲು ನಾಡು, ಬರಪೀಡಿತ ಜಿಲ್ಲೆಗಳು ಚಳಿಯಿಂದ ತರಗುಟ್ಟುತ್ತಿವೆ. ಮೋಡ, ಮಂಜು ಇಲ್ಲ. ಹೀಗಾಗಿ, ಭೂಮಿಯಿಂದ ತಂಪು ಆವಿಯಾಗಿ ಹೊರ ಹೋಗಿದೆ. ಇದು ವಿಪರೀತ ಚಳಿಯನ್ನು ಉಂಟು ಮಾಡಿದೆ ಎನ್ನುತ್ತಾರೆ ಹವಾಮಾನ ತಜ್ಞರು.
undefined
ಉತ್ತರ ಭಾರತದಲ್ಲಿ ಮುಂದುವರೆದ ಮೈಕೊರೆವ ಚಳಿ: ದಿಲ್ಲಿಯಲ್ಲಿ 1.8 ಡಿಗ್ರಿ ಉಷ್ಣಾಂಶ
ಗ್ರಾಮೀಣ ಭಾಗದಲ್ಲಿ ಜನರು ಊರ ಹೊರಗಡೆ ಬಯಲು ಜಾಗದಲ್ಲಿ ಬೆಂಕಿ ಹಾಕಿಕೊಂಡು ಕಾಯಿಸುವ ದೃಶ್ಯ ಸಾಮಾನ್ಯವಾಗಿದೆ. ನಗರ ಪ್ರದೇಶಗಳಲ್ಲಿ ಜನ ಸ್ವೇಟರ್, ರಗ್ಗು ಹೊದ್ದುಕೊಂಡು, ರಾತ್ರಿ ಹೊತ್ತಿನಲ್ಲಿ ಮನೆಯ ಕಿಡಕಿ, ಬಾಗಿಲು ಭದ್ರಪಡಿಸಿಕೊಂಡು ಚಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಯಾದರೂ ಮನೆಯಿಂದ ಹೊರ ಬರುತ್ತಿಲ್ಲ.
ಚಳಿಯಿಂದ ರಕ್ಷಿಸಿಕೊಳ್ಳಲು ಜನ ಸ್ವೇಟರ್, ರಗ್ಗುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ, ಕಳೆದೊಂದು ವಾರದ ಅವಧಿಯಲ್ಲಿ 300-350 ರು. ಇದ್ದ ಸ್ವೇಟರ್‌ವೊಂದರ ಬೆಲೆ ಕೆಲವೆಡೆ 800ರು.ವರೆಗೆ ಏರಿಕೆಯಾಗಿದೆ. ರಗ್ಗೊಂದರ ಬೆಲೆ 600ರು.ಗಳಿಂದ 1,200 ರು.ಗಳವರೆಗೆ ಏರಿಕೆಯಾಗಿದೆ.