National Youth Festival: ಕೋವಿಡ್‌ ಆತಂಕ: ಆರೋಗ್ಯ ಪರೀಕ್ಷೆಗೆ 300 ವೈದ್ಯಕೀಯ ಸಿಬ್ಬಂದಿ ನಿಯೋಜನೆ

By Sathish Kumar KH  |  First Published Jan 9, 2023, 8:19 PM IST

26ನೇ ರಾಷ್ಟ್ರೀಯ ಯುವಜನೋತ್ಸವ ವಿಶೇಷತೆ
ಅತಿಥಿಗಳ ಆರೋಗ್ಯ ಸೇವೆಗೆ 300 ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ, 
ಆಸ್ಪತ್ರೆ ಹಾಗೂ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜ.09): ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವದಂದು ಆಗಮಿಸುತ್ತಿರುವ ಗಣ್ಯರ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಸ್ಪರ್ಧಾಗಳುಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಎಲ್ಲ ಸಿದ್ಧತೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಡಿಕೊಳ್ಳಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ರಾಷ್ಟ್ರದ ವಿವಿಧ ರಾಜ್ಯಗಳಿಂದ ಧಾರವಾಡಕ್ಕೆ ಆಗಮಿಸುತ್ತಿರುವ ಅತಿಥಿಗಳ, ಗಣ್ಯರ ಆರೋಗ್ಯ ರಕ್ಷಣೆ ಮತ್ತು ಅಗತ್ಯ ಸೇವೆಗೆ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. 

ಈಗಾಗಲೇ 300 ಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. 21 ವೈದ್ಯಕೀಯ ತಂಡ, ಅಂದಾಜು 300 ಕ್ಕೂ ಹೆಚ್ಚು ವೈದ್ಯರು ಮತ್ತು ನರ್ಸ್, ವಿವಿಧ ಆಸ್ಪತ್ರೆಗಳಲ್ಲಿ 30 ಕ್ಕೂ ಹೆಚ್ಚು ಹಾಸಿಗೆ, 11 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಸಿದ್ಧಗೊಳಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಆರೋಗ್ಯ ಇಲಾಖೆಯಿಂದ ಕ್ರಮ ವಹಿಸಲಾಗಿದೆ.

Tap to resize

Latest Videos

Hubli: ರಾಷ್ಟ್ರೀಯ ಯುವ ಜನೋತ್ಸವದಲ್ಲಿ 5 ದಿನ ಸಿರಿಧಾನ್ಯ ವೈಭವ

ಕೋವಿಡ್ ಮುಂಜಾಗೃತೆ :  ಕೇಂದ್ರ ಹಾಗೂ ರಾಜ್ಯಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ವಯ ರಾಷ್ಟ್ರೀಯ ಯುವಜನೋತ್ಸವದಲ್ಲಿ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತಿಥಿಗಳು, ಸ್ಪರ್ಧಾಳುಗಳು ಉಳಿದುಕೊಳ್ಳುವ ವಸತಿ ನಿಲಯಗಳಲ್ಲಿ ಮತ್ತು ಕಾರ್ಯಕ್ರಮ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಕೆ ಮತ್ತು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆಗೆ ಇಲಾಖೆಯಿಂದ ಕ್ರಮ ವಹಿಸಲಾಗಿದೆ. ಸ್ವ್ಯಾಬ್ ಸಂಗ್ರಹಕ್ಕೂ ವಸತಿ ನಿಲಯಗಳಲ್ಲಿ ಸೌಲಭ್ಯ ನೀಡಲಾಗುವುದು. ಮತ್ತು ಕೋವಿಡ್ ಲಕ್ಷಣಗಳು ಕಂಡು ಬಂದಲ್ಲಿ ಅಗತ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರೂ   ಮಾಸ್ಕ್ ಧರಿಸುವಂತೆ ಸಾರ್ವಜನಿಕ ಸೂಚನೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಕೋವಿಡ್‌ ಪಾಸಿಟಿವಿಟಿ ಶೂನ್ಯ: ಜಿಲ್ಲೆಯಲ್ಲಿ ಈಗ ಕೋವಿಡ್ ಪಾಸಿಟಿವಿಟಿ ದರ '0' (ಶೂನ್ಯ) ಆಗಿದ್ದು, ನಿನ್ನೆಯವರೆಗೆ ಒಂದೇ ಕೋವಿಡ್ ಸಕ್ರಿಯ ಪ್ರಕರಣವಿತ್ತು. ಅದು ಕೂಡಾ ಗುಣಮುಖವಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗಿರುವುದಿಲ್ಲ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ತಿಳಿಸಿದ್ದಾರೆ. ಆಸ್ಪತ್ರೆ, ಆ್ಯಂಬುಲೆನ್ಸ್, ಔಷಧಿ  ಯುವಜನೋತ್ಸವದಲ್ಲಿ ಭಾಗವಹಿಸುತ್ತಿರುವ ಸ್ಪರ್ಧಾಳು ಮತ್ತು ಅತಿಥಿಗಳಿಗೆ ಆರೋಗ್ಯ ಚಿಕಿತ್ಸೆಯ ಅಗತ್ಯವಿದ್ದಲ್ಲಿ ತಕ್ಷಣಕ್ಕೆ ಸ್ಪಂಧಿಸಲು ಅನುಕೂಲವಾಗುವಂತೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ 10, ಎಸ್‍ಡಿಎಂ ಆಸ್ಪತ್ರೆಯಲ್ಲಿ 5, ಯುನಿಟಿ ಆಸ್ಪತ್ರೆಯಲ್ಲಿ, 5 ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 10 ಸೇರಿ ಒಟ್ಟು 30 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಗಣ್ಯ ವ್ಯಕ್ತಿಗಳ ಆರೋಗ್ಯ ತಪಾಸಣೆಗಾಗಿ ಸುಚಿರಾಯು, ವಿವೇಕಾನಂದ ಜನರಲ್ ಆಸ್ಪತ್ರೆ ಮತ್ತು ಕಿಮ್ಸ್ ಆಸ್ಪತ್ರೆಯಲ್ಲಿ ಅಗತ್ಯ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ತುರ್ತು ಆರೋಗ್ಯ ಚಿಕಿತ್ಸೆಗೆ ವ್ಯವಸ್ಥೆ: 
ಆರೋಗ್ಯ ತಪಾಸಣಾ ತಂಡಗಳಲ್ಲಿ ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಹಾಗೂ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಆರೋಗ್ಯ ಸಲಕರಣೆಗಳನ್ನು ಸುಸ್ಥಿತಿಯಲ್ಲಿಡಲಾಗಿದೆ. ಅತಿಥಿಗಳು ಉಳಿದುಕೊಂಡಿರುವ ವಸತಿ ನಿಲಯ ಹಾಗೂ ಕಾರ್ಯಕ್ರಮ ಸ್ಥಳಗಳಲ್ಲಿ ತುರ್ತು ಆರೋಗ್ಯ ಚಿಕಿತ್ಸೆ ಹಾಗೂ ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲು ಅನುಕೂಲವಾಗುವಂತೆ 9 ಆ್ಯಂಬುಲೆನ್ಸ್ ಹಾಗೂ 2 ವಿವಿಐಪಿ ಆ್ಯಂಬುಲೆನ್ಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.

National Youth Festival 2023: ಯವಜನೋತ್ಸವ ವೆಬ್‌ ಪೋರ್ಟಲ್‌ಗೆ ಚಾಲನೆ

ಆರೋಗ್ಯ ಸಹಾಯವಾಣಿ 8310842742 ಆರಂಭ:
ಸಾಮಾನ್ಯ ಖಾಯಿಲೆಗಳಿಗೂ ಸೇರಿದಂತೆ ವಿವಿಧ ರೀತಿಯ ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಯುವಜನೋತ್ಸವ ಸಂದರ್ಭದಲ್ಲಿ ಸಾರ್ವಜನಿಕರು ಕೋವಿಡ ಮಾರ್ಗಸೂಚಿಗಳನ್ನು ಮತ್ತು ಆರೋಗ್ಯ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ ಅವರು ತಿಳಿಸಿದ್ದಾರೆ. ನಿರಂತರ ಸೇವೆ ನೀಡುವ 8310842742 ಆರೋಗ್ಯ ಸಹಾಯವಾಣಿ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸುವ ಅತಿಥಿಗಳಿಗೆ ಮತ್ತು ಯುವಜನೋತ್ಸವದಲ್ಲಿ ಭಾಗವಹಿಸಿರುವ ಎಲ್ಲ ಜನರ ಅನುಕೂಲಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದಿನದ 24 ಗಂಟೆ ಸೇವೆ ನೀಡುವ ಆರೋಗ್ಯ ಸಹಾಯವಾಣಿಯನ್ನು ಆರಂಭಿಸಿದೆ. 

ಮೂರು ಭಾಷೆಗಳ ಸಿಬ್ಬಂದಿ ನಿಯೋಜನೆ:
ಡಿಹೆಚ್‍ಓ ಕಚೇರಿಯಲ್ಲಿ ಈಗಾಗಲೇ ಆರಂಭವಾಗಿರುವ ಆರೋಗ್ಯ ಸಹಾಯವಾಣಿಗೆ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ವ್ಯವಹರಿಸುವ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಹಗಲು ಮತ್ತು ರಾತ್ರಿ ಸಮಯದಲ್ಲಿ ಸಹಾಯವಾಣಿ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಕರೆ ಸ್ವೀಕರಿಸಿದ ನಂತರ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಮಾಹಿತಿ ನೀಡಿ ತಕ್ಷಣದ ಚಿಕಿತ್ಸೆಗೆ ನೆರವಾಗಲಿದ್ದಾರೆ.

click me!