ಮಹದಾಯಿ ಯೋಜನೆಗೆ ಭಾರಿ ಹಿನ್ನಡೆ: ಮತ್ತೆ ತಗಾದೆ ತೆಗೆದ ಕೇಂದ್ರ ಪರಿಸರ ಅರಣ್ಯ ಇಲಾಖೆ

By Sathish Kumar KHFirst Published Jan 9, 2023, 8:42 PM IST
Highlights

ಕೇಂದ್ರ ಪರಿಸರ ಅರಣ್ಯ ಇಲಾಖೆಯಿಂದ ಮಹದಾಯಿ ಯೋಜನೆಯ ಬಗ್ಗೆ ವಿವಿಧ ಆಯಾಮಗಳಿಂದ ಸ್ಪಷ್ಟೀಕರಣ ಮಾಹಿತಿ ಕೇಳಿದೆ. ಈ ಮೂಲಕ ಮಹದಾಯಿ ಯೋಜನೆಯ ಕನಸು ಕಾಣುತ್ತಿದ್ದ ಕರ್ನಾಟಕಕ್ಕೆ ಶಾಕ್‌ ನೀಡಿದೆ.

ನವದೆಹಲಿ (ಜ.09): ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಹಾಗೂ 40 ವರ್ಷಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆಯ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಆದರೆ, ಇಂದು ಕೇಂದ್ರ ಪರಿಸರ ಅರಣ್ಯ ಇಲಾಖೆಯಿಂದ ಮಹದಾಯಿ ಯೋಜನೆಯ ಬಗ್ಗೆ ಸ್ಪಷ್ಟೀಕರಣ ಮಾಹಿತಿ ಕೇಳಿದೆ. ಈ ಮೂಲಕ ಮಹದಾಯಿ ಯೋಜನೆಯ ಕನಸು ಕಾಣುತ್ತಿದ್ದ ಕರ್ನಾಟಕಕ್ಕೆ ಶಾಕ್‌ ನೀಡಿದೆ.

ಈಗಾಗಲೇ ಕೇಂದ್ರ ಸರ್ಕಾರದಿಂದ ಮಹದಾಯಿ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ನೀಡಲು ಸೂಚಿಸಿದ್ದರೂ ಮತ್ತೊಮ್ಮೆ ಮಹತ್ವಾಕಾಂಕ್ಷಿ ಯೋಜನೆಗೆ ಕಂಟಕ ಎದುರಾಗಿದೆ. ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಬಳಕೆ ಬೇಡ ಎಂದು ಹೇಳಲಾಗುತ್ತಿದೆ. ಬದಲಿಗೆ ಭೂಮಿಯೊಳಗೆ ವಿದ್ಯುತ್‌ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದೆ. ಜೊತೆಗೆ, ಯೋಜನೆಗೆ ಬಳಕೆಯಾಗುವ ಅರಣ್ಯ ಪ್ರದೇಶ ನಾಶ ಮಾಡುವುದು ಬೇಡ. ಯಾವುದೇ ಮರಗಳನ್ನು ಕಡಿಯಲು ಅರಣ್ಯ ಸಚಿವಾಲಯ ಅನುಮತಿಸುವುದಿಲ್ಲ ಎಂದು ಖಡಕ್‌ ವಾರ್ನಿಂಗ್‌ ನೀಡಿದೆ.

ಮಹದಾಯಿ: ಗೋವಾ ಮೂಲದ ಕೇಂದ್ರ ಸಚಿವ ರಾಜೀನಾಮೆ ಬೆದರಿಕೆ

60 ಹೆಕ್ಟೇರ್ ಅರಣ್ಯೀಕರಣದ ಭೂಮಿ ಎಲ್ಲಿದೆ?
ಈಗಾಗಲೇ ಕಡ್ಡಾಯ ಅರಣ್ಯೀಕರಣಕ್ಕೆ ಗುರುತಿಸಿರುವ 60 ಹೆಕ್ಟೇರ್ ಅರಣ್ಯ ಭೂಮಿ ಎಲ್ಲಿದೆ ಮಾಹಿತಿ ಕೊಡಿ. ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ, ನಿಗದಿಪಡಿಸಿರುವ ಅರಣ್ಯೇತರ ಭೂಮಿ ಋಣ ಭಾರದ ಪಟ್ಟಿಯಲ್ಲಿದೆ. ಆದ್ದರಿಂದ, ಇದಕ್ಕೆ ಸಮಾನವಾದ ಅರಣ್ಯೇತರ ಭೂಮಿಯನ್ನು ಸರ್ಕಾರ ಸೂಚಿಸಬೇಕು. ಜೊತೆಗೆ ಸರ್ಕಾರ ಸೂಚಿಸುವ ಅರಣ್ಯೇತರ ಭೂಮಿ ಮತ್ತು ಅದರ ವಿವರಗಳನ್ನು ಒದಗಿಸಬೇಕು. ಪ್ರಮಾಣ ಪತ್ರ, ಯೋಜನೆ, ನಕ್ಷೆ ಸಹಿತ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದೆ.

ಪ್ರಾಣಿ ಸಂರಕ್ಷಣೆಗೆ ಪ್ರಮಾಣ ಪತ್ರ ಕೊಡಿ:
ಇನ್ನು ಮಹದಾಯಿ (ಕಳಸಾ-ಬಂಡೂರಿ) ಯೋಜನೆಗೆ ಓವರ್‌ ಹೆಡ್‌ ಟ್ರಾನ್ಸ್‌ಮಿಷನ್ ಲೈನ್‌ಗಳನ್ನು ಅಳವಡಿಸಬೇಕಾಗುತ್ತದೆ. ಇದು ಹಾಲಿ ಯೋಜನಾ ಸ್ಥಳ, ವನ್ಯಜೀವಿ ಸಂರಕ್ಷಣಾ ಪ್ರದೇಶಕ್ಕೆ ಹತ್ತಿರವಾಗಿದೆ. ಹಾಗಾಗಿ, ಇದನ್ನು ಅತೀ ಸೂಕ್ಷ್ಮ ಪ್ರದೇಶವಾಗಿರುವುದು ಎಂದೂ ಗುರುತಿಸಲಾಗಿದೆ. ಈ ಯೋಜನೆಯಿಂದ ಪ್ರಾಣಿ ಸಂರಕ್ಷಣೆಗೆ ಯಾವುದೇ ಹಾನಿಯಾಗಿವುದಿಲ್ಲವೆಂದು ಪ್ರಮಾಣ ಪತ್ರ ಒದಗಿಸಬೇಕು. ಮೇಲಿನ ಎಲ್ಲಾ ದಾಖಲೆಗಳು ಅರಣ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಒಳಗೊಂಡಿರಬೇಕು ಎಂದು ಸೂಚಿಸಿದೆ.

ಮಹದಾಯಿ ಅನುಮತಿ ರದ್ದತಿಗಾಗಿ ಮೋದಿಗೆ ಮನವಿ: ಗೋವಾ ಸಿಎಂ ಸಾವಂತ್‌

ಹಿಂದಿನ ಪ್ರಸ್ತಾವನೆ- ಈಗಿನ ಪ್ರಸ್ತಾವನೆಗೆ ಹೋಲಿಕೆ ಏನು?
ಮಹಾದಾಯಿ ಯೋಜನೆಗೆ ಈ ಹಿಂದೆ 450 ಹೆಕ್ಟೇರ್ ಅರಣ್ಯ ಬಳಕೆಗೆ ಅರಣ್ಯ ಇಲಾಖೆ ಅನುಮೋದನೆ ಕೋರಿತ್ತು. ಈಗಿನ ಪ್ರಸ್ತಾವನೆ ಹಾಗೂ ಹಿಂದಿನ ಪ್ರಸ್ತಾವನೆಗೆ ಹೆಚ್ಚುವರಿಯಾ ಅಥವಾ ಪ್ರತ್ಯೇಕವೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಕೇಂದ್ರ ಅರಣ್ಯ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಈ ಎಲ್ಲ ಮಾನದಂಡಗಳನ್ನು ಪೂರ್ಣಗೊಳಿಸಿದ ನಂತರವೇ ಯೋಜನೆಗೆ ಹಸಿರು ನಿಶಾನೆ ಸಿಗಲಿದೆ. ಆದರೆ, ಪ್ರಮಾಣಪತ್ರ, ಯೋಜನಾ ನಕ್ಷೆ, ಅರಣ್ಯೀಕರಣ ಜಾಗ ಇತ್ಯಾದಿ ಬೇಡಿಕೆಗಳನ್ನು ಪೂರೈಸುವುದು ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸವಾಗಲಿದೆ.

click me!