ಟ್ರಿನಿಡಾಡ್‌ನಲ್ಲಿದ್ದೇವೆ, ನಮ್ಮನ್ನು ನಿತ್ಯಾನಂದ ಸ್ವಾಮಿ ಅಪಹರಿಸಿಲ್ಲ| ತಂಗಿಯೂ ನನ್ನ ಜತೆ ಇದ್ದಾಳೆ| ಬೆಂಗಳೂರಿನ ಜನಾರ್ದನ ಶರ್ಮಾ ಪುತ್ರಿ ವಿಡಿಯೋ ಹೇಳಿಕೆ
ಅಹಮದಾಬಾದ್[ನ.22]: ಬೆಂಗಳೂರು ಹೊರವಲಯ ಬಿಡದಿಯಲ್ಲಿರುವ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ತಮ್ಮ ಇಬ್ಬರು ಪುತ್ರಿಯರನ್ನು ಅಪಹರಿಸಿ, ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದಾರೆ, ಕಿರುಕುಳ ನೀಡುತ್ತಿದ್ದಾರೆ ಎಂದು ಬೆಂಗಳೂರಿನ ಜನಾರ್ದನ ಶರ್ಮಾ ಎಂಬುವರು ಮಾಡಿರುವ ಆರೋಪವನ್ನು ಸ್ವತಃ ಅವರ ಪುತ್ರಿಯೇ ತಳ್ಳಿ ಹಾಕಿದ್ದಾಳೆ. ಇದರಿಂದಾಗಿ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
‘ನನ್ನ ತಂಗಿ ನಂದಿತಾ ಶರ್ಮಾ ಜತೆ ನಾನು ಟ್ರಿನಿಡಾಡ್‌ನಲ್ಲಿ ಇದ್ದೇನೆ’ ಎಂದು ಜನಾರ್ದನ ಅವರ ಹಿರಿಯ ಪುತ್ರಿ ಲೋಪಮುದ್ರಾ ಶರ್ಮಾ ಫೇಸ್‌ಬುಕ್ ಖಾತೆಯಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾಳೆ. ತನ್ನನ್ನು ತಾನು ‘ಮಾ ನಿತ್ಯಾ ತತ್ವಪ್ರಿಯ ಆನಂದ’ ಎಂದು ಕರೆದುಕೊಂಡಿರುವ ಆಕೆ, ನಿತ್ಯಾನಂದ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದಾಳೆ.
'ಯಾರನ್ನೂ ಬಂಧಿಸಿಟ್ಟಿಲ್ಲ, ಸನ್ಯಾಸಿಯರ ಭೇಟಿಗೆ ಕುಟುಂಬಗಳಿಗೆ ತಡೆ ಒಡ್ಡಿಲ್ಲ'
‘ನಾನು ಪ್ರಾಪ್ತ ವಯಸ್ಕಳಾಗಿದ್ದೇನೆ. ಭಾರತೀಯ ಕಾನೂನುಗಳ ಪ್ರಕಾರ ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದೇನೆ. ಆದರೆ ಮಾಧ್ಯಮಗಳು ನಮಗೆ ತೊಂದರೆ ಉಂಟು ಮಾಡುತ್ತಿವೆ. 40 ಪೊಲೀಸರು ಹಾಗೂ ವಕೀಲರು ಕೂಡ ನನಗೆ, ನನ್ನ ತಂಗಿಗೆ ಮತ್ತು ಆಶ್ರಮಕ್ಕೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಸೋದರಿ ಜತೆ ನಾನು ಟ್ರಿನಿಡಾಡ್‌ನಲ್ಲಿ ಇದ್ದೇನೆ. ನಮ್ಮನ್ನು ಅಪಹರಿಸಲಾಗಿಲ್ಲ ಎಂದು ಪೊಲೀಸರನ್ನು ಸಂಪರ್ಕಿಸಿ ಹೇಳಿದ್ದೇನೆ. ನಾನು ಅಪಹರಣಕ್ಕೆ ಒಳಗಾದವಳಂತೆ ಕಾಣುತ್ತೇನೆಯೇ? ನಿಮಗೇನಾದರೂ ನನ್ನ ಜತೆ ಮಾತನಾಡಬೇಕು ಎಂದು ಇದ್ದರೆ, ಟ್ರಿನಿಡಾಡ್ ಹಾಗೂ ಟೊಬ್ಯಾಗೋಗೆ ಬರಬಹುದು’ ಎಂದು ಹೇಳಿದ್ದಾಳೆ.
ನಿತ್ಯಾನಂದ ಪರಾರಿ!: ಗುಜರಾತ್ ಪೊಲೀಸರಿಂದ ಸ್ಫೋಟಕ ಮಾಹಿತಿ
ಈ ನಡುವೆ, ಗುಜರಾತ್ ಪೊಲೀಸರು ನಂದಿತಾ ಅವರನ್ನು ಸ್ಕೈಪ್ ವಿಡಿಯೋ ಕಾಲಿಂಗ್ ಸೇವೆ ಮೂಲಕ ಸಂಪರ್ಕಿಸಲು ಯತ್ನಿಸಿ ಸಫಲರಾದರು. ಆದರೆ ಆಕೆ ಇರುವ ಜಾಗ ಗೊತ್ತಾಗಲಿಲ್ಲ. ನಂದಿತಾ ಗುಜರಾತ್‌ನಲ್ಲೇ ಇದ್ದಾಳೋ ಅಥವಾ ಆಕೆಯ ಸೋದರಿ ಹೇಳಿದಂತೆ ಟ್ರಿನಿಡಾಡ್‌ನಲ್ಲಿದ್ದಾಳೋ ಎಂಬುದನ್ನು ಖಚಿತಪಡಿಸಲು ಆಗುತ್ತಿಲ್ಲ ಎಂದು ಅಹಮದಾಬಾದ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ. ಅಸಾರಿ ತಿಳಿಸಿದ್ದಾರೆ.
ತಮಗೆ ಓರ್ವ ಪುತ್ರ ಸೇರಿ ನಾಲ್ವರು ಮಕ್ಕಳಿದ್ದಾರೆ. ನಾಲ್ವರನ್ನೂ ನಿತ್ಯಾನಂದ ವಶದಲ್ಲಿಟ್ಟುಕೊಂಡಿದ್ದ. ಈ ನಡುವೆ 13 ವರ್ಷದ ಪುತ್ರ ಹಾಗೂ 15 ವರ್ಷದ ಪುತ್ರಿ ಮಾತ್ರ ತಮ್ಮ ಬಳಿಗೆ ಬಂದಿದ್ದಾರೆ. 19 ವರ್ಷದ ಪುತ್ರಿ ಹಾಗೂ ಹಿರಿಯ ಮಗಳು ನಮ್ಮ ಕೈಗೆ ಸಿಗುತ್ತಿಲ್ಲ ಎಂದು ಬೆಂಗಳೂರಿನ ಜನಾರ್ದನ ಶರ್ಮಾ ಅವರು ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ಮಕ್ಕಳನ್ನು ಅಹಮದಾಬಾದ್ ಆಶ್ರಮದಲ್ಲಿ ಇಡಲಾಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗುಜರಾತ್ ಪೊಲೀಸರ ವಿಶೇಷ ತನಿಖಾ ತಂಡ, ಅಹಮದಾಬಾದ್‌ನಿಂದ 50 ಕಿ.ಮೀ. ದೂರದಲ್ಲಿರುವ ಯೋಗಿನಿ ಸರ್ವಜ್ಞಪೀಠಂಗೆ ತೆರಳಿ ಪರಿಶೀಲನೆ ನಡೆಸಿತ್ತು. ಶರ್ಮಾ ಅವರ ಪುತ್ರಿಯರಿಗಾಗಿ ಶೋಧ ನಡೆಸಿತ್ತು.
ಮಕ್ಕಳಿಗೆ ನಿತ್ಯಾ ಏನ್ಮಾಡ್ತಾನೆ? ವಿಡಿಯೋದಲ್ಲಿ ಕರ್ಮಕಾಂಡ ಬಿಚ್ಚಿಟ್ಟ ಮಾಜಿ ಶಿಷ್ಯೆ