ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸಿದೆ. ಇದು ಸ್ಥಳೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಸೇವೆಗಳನ್ನು ಕನ್ನಡದಲ್ಲಿ ಪಡೆಯಲು ಅನುವು ಮಾಡಿಕೊಡುತ್ತದೆ.
ಬೆಂಗಳೂರು (ಏ.01): ಕನ್ನಡ ಭಾಷೆಗೆ ಆದ್ಯತೆ ನೀಡುವ ಜೊತೆಗೆ ಪ್ರಾದೇಶಿಕ, ಸಾಂಸ್ಕೃತಿಕ ಮೌಲ್ಯ ಎತ್ತಿಹಿಡಿಯುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷೆಯ ಆಯ್ಕೆಯನ್ನು ಹೊಸದಾಗಿ ಪರಿಚಯಿಸಲಾಗಿದೆ.
ಈ ಆಯ್ಕೆಯನ್ನು ಬಳಸುವ ಮೂಲಕ, ಸ್ಥಳೀಯ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಸೇವೆಗಳನ್ನು ಸುಲಭವಾಗಿ ಸ್ಥಳೀಯ ಮಾತೃ ಭಾಷೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಆದ್ಯತೆ ನೀಡುವ ಪ್ರಯಾಣಿಕರಿಗೆ, ಕನ್ನಡದಲ್ಲಿಯೇ ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಹೊಂದಿದೆ. ಈ ಮೂಲಕ ಕನ್ನಡ ಭಾಷಿಕ ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಅನುಕೂಲಕರ ಮತ್ತು ಆನಂದದಾಯಕ ಮಾಡಲು ಮುಂದಾಗಿದೆ.
ಕನ್ನಡ ಭಾಷಾ ಸೇವೆಯ ವಿಶೇಷತೆ ಏನು?
* ಕನ್ನಡದಲ್ಲಿ ರಿಯಲ್-ಟೈಮ್ ವಿಮಾನಗಳ ಹಾರಾಟದ ಮಾಹಿತಿ, ನಿರ್ಗಮನ, ಆಗಮನ ಮತ್ತು ವಿಳಂಬಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
* ಪ್ರಯಾಣಿಕರು ವಿಮಾನಗಳನ್ನು ಕಾಯ್ದಿರಿಸಲು, ಸಾರಿಗೆ ಆಯ್ಕೆ ಮತ್ತು ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಅನ್ವೇಷಿಸಲು ಕನ್ನಡ ಭಾಷೆಯನ್ನು ಬಳಕೆ ಮಾಡಬಹುದು.
* ಭದ್ರತಾ ಕಾರ್ಯವಿಧಾನ, ಬ್ಯಾಗೇಜ್ ನಿಯಮಗಳು, ಪ್ರಯಾಣಕ್ಕೆ ಬೇಕಾದ ಅನುಕೂಲತೆಯ ಮಾಹಿತಿಗಳು ಸೇರಿದಂತೆ ಹಲವು ವಿಚಾರಗಳು ಸ್ಥಳೀಯ ಭಾಷೆಯಲ್ಲಿ ದೊರೆಯಲಿದೆ.
* ಸಾಮಾನ್ಯ ಪ್ರಶ್ನೆಗಳನ್ನು ಪರಿಹರಿಸುವ ಸಮಗ್ರ FAQ ಪಟ್ಟಿಯನ್ನು ಸಹ ಕೊಡಲಾಗಿದೆ.
ಇದನ್ನೂ ಓದಿ: Bengaluru: ಈಗ ಬೆಂಗಳೂರು ಏರ್‌ಪೋರ್ಟ್‌ನಲ್ಲೂ ಸಿಗಲಿದೆ ಸಿಟಿಆರ್‌ನ ಗರಿಗರಿ ಬೆಣ್ಣೆದೋಸೆ!
ಇನ್ನು ಈ ನೂತನ ವ್ಯವಸ್ಥೆಯ ಬಗ್ಗೆ ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (BIAL) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರಿ ಮಾರಾರ್ ಅವರು, 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕೇವಲ ಸಾರಿಗೆ ಕೇಂದ್ರವಾಗಿರದೇ, ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ಇದೀಗ ಸ್ಥಳೀಯ ಭಾಷೆಯಲ್ಲೇ ವಿಮಾನ ನಿಲ್ದಾಣದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಕನ್ನಡ ಭಾಷಾ ಆಯ್ಕೆಯನ್ನು ಪರಿಚಯಿಸುವ ಮೂಲಕ ನಮ್ಮ ಭಾಷಾ ಪರಂಪರೆಯ ಶ್ರೀಮಂತಿಗೆ ಆದ್ಯತೆ ನೀಡಲಾಗಿದೆ' ಎಂದರು.
ಅಧಿಕೃತ ಅಂತರ್ಜಾಲ ತಾಣದಲ್ಲಿ ಕನ್ನಡ ಭಾಷಾ ಆಯ್ಕೆಯ ಪರಿಚಯವು ವಿಮಾನ ನಿಲ್ದಾಣದಲ್ಲಿ ಕನ್ನಡದ ಮಾತನಾಡುವ ವಾತಾವರಣ ಹೆಚ್ಚಾಗಲಿದೆ. ವಿಮಾನ ನಿಲ್ದಾಣದ ದೀರ್ಘಕಾಲದ ಪ್ರಯತ್ನದೊಂದಿಗೆ ಭಾಷಾ ಆಯ್ಕೆಯನ್ನು ಅಳವಡಿಸಿಕೊಳ್ಳಲಾಗಿದೆ. ಈಗಾಗಲೇ ವಿಮಾನ ನಿಲ್ದಾಣದಾದ್ಯಂತ ವಿಮಾನ ಮಾಹಿತಿ ಪ್ರದರ್ಶನ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆ ವ್ಯವಸ್ಥೆ, ಅಂಗಡಿ ಮತ್ತು ಮಳಿಗೆಗಳ ನಾಮಫಲಕಗಳಿಂದ ಹಿಡಿದ ಸಿಬ್ಬಂದಿಗಳವರೆಗೆ ಎಲ್ಲೆಡೆ ಕನ್ನಡವನ್ನು ವಿಮಾನ ನಿಲ್ದಾಣ ಅಳವಡಿಸಿಕೊಂಡಿದೆ.
ಇದನ್ನೂ ಓದಿ: ಲುಫ್ತಾನ್ಸ ಫ್ಲೈಟ್‌ನಲ್ಲಿ ಕನ್ನಡದಲ್ಲಿ ಅನೌನ್ಸ್‌ಮೆಂಟ್, ಪ್ರಯಾಣಿಕರು, ನೆಟ್ಟಿಗರ ಮೆಚ್ಚುಗೆ!
ಕರ್ನಾಟಕದ ಸಂಸ್ಕೃತಿ ಮತ್ತು ನೀತಿಗಳನ್ನು ಪ್ರತಿಬಿಂಬಿಸುವಂತೆ ವಿಮಾನ ನಿಲ್ದಾಣವನ್ನು ವಿನ್ಯಾಸಗೊಳಿಸಲಾಗಿದೆ. ಈ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಉಪಕ್ರಮವು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸಲು ಹಾಗೂ ಭಾಷಾ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬದ್ಧತೆಯನ್ನು ಹೊಂದಿದೆ ಎಂದು ಬಿಐಎಎಲ್ ಸಿಇಒ ಹರಿ ಮಾರಾರ್ ತಿಳಿಸಿದರು.