
ವಿಧಾನ ಪರಿಷತ್ತು: ಭದ್ರಾ ಮೇಲ್ದಂಡೆ ಯೋಜನೆಯ ಹಂತ 1ರ ಕಾಮಗಾರಿಯನ್ನು ನವೆಂಬರ್ ಅಥವಾ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಹರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯೆ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.04 ಟಿಎಂಸಿ ನೀರು ಲಿಫ್ಟ್ ಮಾಡಿ ಹರಿಸಬೇಕಿದೆ. ಈ ಯೋಜನೆ ಕಾಮಗಾರಿಗಾಗಿ 324 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಯೋಜನೆ ಅನುಷ್ಠಾನದ ವೇಳೆ ಭೂಸ್ವಾಧೀನ, ಅರಣ್ಯ ಹಾಗೂ ತೀರುವಳಿ, ವಿದ್ಯುತ್ ಪ್ರಸರಣ ಮಾರ್ಗಕ್ಕೆ ಸಂಬಂಧಿಸಿ ಅನುಮತಿಗಳು ಹಾಗೂ ಇತರೆ ಶಾಸನ ಬದ್ಧ ಅನುಮೋದನೆಗಳನ್ನು ಪಡೆಯುವಲ್ಲಿ ವಿಳಂಬ ಉಂಟಾಗಿತ್ತು. ಅದೆಲ್ಲವನ್ನೂ ಸರಿಪಡಿಸಿಕೊಳ್ಳಲಾಗಿದೆ
ಈ ಯೋಜನೆಯಲ್ಲಿ 9.53 ಕಿ.ಮೀ. ಕಾಲುವೆಯ ಪೈಕಿ 9.305 ಕಿ.ಮೀ. ಕಾಲುವೆ ಅಗೆತ ಪ್ರಗತಿಯಲ್ಲಿದೆ. 6.90 ಕಿ.ಮೀ. ಲೈನಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ಪ್ರಗತಿಯಲ್ಲಿದೆ. ಎರಡು ಪಂಪ್‌ಹೌಸ್ ಕಾಮಗಾರಿ ಮುಕ್ತಾಯ ಹಂತದಲ್ಲಿವೆ. 2,900ಮೀ ರೈಸಿಂಗ್ ಮೈನ್ ಅಳವಡಿಕೆ ಪೂರ್ಣಗೊಂಡಿದ್ದು, ಆ್ಯಂಕರ್‌ಬ್ಲಾಕ್ ಕೆಲಸಗಳು ನಡೆಯುತ್ತಿವೆ. ಎಲೆಕ್ಟ್ರಿಕಲ್ ಸಬ್‌ಸ್ಟೇಷನ್ 1 ಮತ್ತು 2 ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಈ ಎಲ್ಲ ಕಾಮಗಾರಿಗೂ ನವೆಂಬರ್ ಅಂತ್ಯಕ್ಕೆ ಮುಕ್ತಾಯವಾಗಲಿದೆ. ಡಿಸೆಂಬರ್ ಅಂತ್ಯದೊಳಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ