ಸಿಗದ ಬೆಸ್ಕಾಂ ಒಪ್ಪಿಗೆ: ಬಿಐಇಸಿ ಕೇಂದ್ರ ಮತ್ತಷ್ಟು ವಿಳಂಬ?

By Kannadaprabha NewsFirst Published Jul 26, 2020, 7:26 AM IST
Highlights

ಅಗ್ನಿಶಾಮಕ ದಳ ಹಸಿರು ನಿಶಾನೆ| ಇನ್ನೂ ಪರಿಶೀಲನೆ ನಡೆಸದ ಬೆಸ್ಕಾಂ ಅಧಿಕಾರಿಗಳು| ನಾಳೆ ಆರೈಕೆ ಕೇಂದ್ರ ಉದ್ಘಾಟನೆ ಅನುಮಾನ|ಬೆಸ್ಕಾಂನಿಂದ ಸುರಕ್ಷತೆ ದೃಢೀಕರಣ ಪಡೆಯಬೇಕಾಗಿದೆ|

ಬೆಂಗಳೂರು(ಜು.26): ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಕೊರೋನಾ ಆರೈಕೆ ಕೇಂದ್ರಕ್ಕೆ ಅಗ್ನಿ ಶಾಮಕ ದಳ ಇಲಾಖೆಯ ಅಧಿಕಾರಿಗಳು ಶನಿವಾರ ಪರಿಶೀಲಿಸಿ ಕೆಲವು ಮಾರ್ಪಾಡು ಮಾಡುವಂತೆ ಸೂಚಿಸಿ, ಅನುಮತಿ ನೀಡಿದ್ದಾರೆ. ಆದರೆ, ಬೆಸ್ಕಾಂ ಇಲಾಖೆಯಿಂದ ಅನುಮತಿ ದೊರೆಯದ ಕಾರಣ ನಿಗದಿಯಂತೆ ಸೋಮವಾರದಿಂದ ಕೇಂದ್ರ ಆರಂಭವಾಗುವುದೇ ಎಂಬ ಅನುಮಾನ ಕಾಡುತ್ತಿದೆ.

ಫ್ಯಾನ್‌, ಮೊಬೈಲ್‌ ಚಾರ್ಜಿಂಗ್‌ ವ್ಯವಸ್ಥೆ, ಟಿವಿ, ಎಲ್‌ಇಡಿ ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯಿಂದ ಅನುಮತಿ ದೊರೆಯಬೇಕಾಗಿದೆ. ಸೋಮವಾರದೊಳಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ, ಅನುಮತಿ ನೀಡಲಿದ್ದಾರೆ. ಹಾಗಾಗಿ, ನಿಗದಿಯಂತೆ ಆರೈಕೆ ಕೇಂದ್ರ ಆರಂಭಗೊಳ್ಳಲಿದೆ ಎಂದು ಬಿಐಇಸಿ ಆರೈಕೆ ಕೇಂದ್ರದ ಉಸ್ತುವಾರಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಬಿಐಇಸಿ ಕೇರ್‌ ಸೆಂಟರಲ್ಲಿ 10,100 ರಿಂದ 6,500ಕ್ಕೆ ಬೆಡ್ ಸಂಖ್ಯೆ ಇಳಿಕೆ

ಸ್ಪಿಂಕ್ಲರ್‌ ಹೆಚ್ಚಳಕ್ಕೆ ಸೂಚನೆ:

ಶನಿವಾರ ಅಗ್ನಿಶಾಮಕ ದಳದ ಅಧಿಕಾರಿಗಳು ಬಿಐಇಸಿಗೆ ಭೇಟಿ ನೀಡಿ ಅಗ್ನಿ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಪಿಂಕ್ಲರ್‌ ಸಂಖ್ಯೆ ಹೆಚ್ಚಳಕ್ಕೆ ಸೂಚನೆ ನೀಡಿ, ಅನುಮತಿ ನೀಡಿದ್ದಾರೆ. ಆರೈಕೆ ಕೇಂದ್ರದಲ್ಲಿ ಈಗಾಗಲೇ ಸ್ಪಿಂಕ್ಲರ್‌ ವ್ಯವಸ್ಥೆ ಇದೆ. ಅದರ ಈಗ ಸಂಖ್ಯೆ ಹೆಚ್ಚಳ ಮಾಡುವುದಕ್ಕೆ ಕಾಲಾವಕಾಶ ಇಲ್ಲ, ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿಗಳು ಅಗ್ನಿಶಾಮಕ ಇಲಾಖೆಗೆ ಪತ್ರ ಬರೆದಿದ್ದಾರೆ.

ತಾತ್ಕಾಲಿಕ ಅಗ್ನಿಶಾಮಕ ಠಾಣೆ ಸ್ಥಾಪನೆ:

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಸಾವಿರಾರು ಮಂದಿ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು, ಚಿಕಿತ್ಸೆ ನೀಡಲು 250 ಮಂದಿ ವೈದ್ಯರು, 500 ಸ್ಟಾಫ್‌ ನರ್ಸ್‌, 700 ಸಹಾಯಕರು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಯಾವುದೇ ಅವಘಡ ಸಂಭವಿಸಿದರೂ ಎದುರಿಸಲು ಆರೈಕೆ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ದಳದ ಠಾಣೆ ಆರಂಭಿಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಮುಖ್ಯ ಅಗ್ನಿ ಶಾಮಕ ಅಧಿಕಾರಿ ತಿಳಿಸಿದ್ದಾರೆ.

ಸುರಕ್ಷತೆ ದೃಢೀಕರಣ ಕಡ್ಡಾಯ:

ಬಿಐಇಸಿಯ ಐದು ಸಭಾಂಗಣದಲ್ಲಿ ಬರೋಬ್ಬರಿ 6,500 ಹಾಸಿಗೆ ಸಾಮರ್ಥ್ಯದ ಕೊರೋನಾ ಆರೈಕೆ ಕೇಂದ್ರ ನಿರ್ಮಿಸಲಾಗುತ್ತಿದೆ. ಈಗಾಗಲೇ 5 ಸಾವಿರ ಹಾಸಿಗೆ ಸಿದ್ಧವಾಗಿವೆ. ಸಾವಿರಾರು ಜನರಿಗೆ ಚಿಕಿತ್ಸೆ ಆರೈಕೆಗೆ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ಇಲಾಖೆ ಮತ್ತು ಬೆಸ್ಕಾಂನಿಂದ ಸುರಕ್ಷತೆ ದೃಢೀಕರಣ ಪಡೆಯಬೇಕಾಗಿದೆ.
 

click me!