
ಬೆಂಗಳೂರು (ಫೆ.6) : ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇ.50ರಷ್ಟುರಿಯಾಯಿತಿಗೆ ರಾಜಧಾನಿಯಲ್ಲಿ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಉತ್ತಮ ಪ್ರತಿಕ್ರಿಯೆ ಮುಂದುವರೆದಿದ್ದು, ಭಾನುವಾರ 2.06 ಲಕ್ಷ ಪ್ರಕರಣಗಳಿಂದ ಬರೋಬ್ಬರಿ 6.31 ಕೋಟಿ ರು. ಬಾಕಿ ದಂಡದ ಮೊತ್ತ ಸಂಗ್ರಹವಾಗಿದೆ. ಕಳೆದ ಮೂರು ದಿನಗಳಿಂದ ಒಟ್ಟು 7.41 ಲಕ್ಷ ಪ್ರಕರಣಗಳಿಂದ 22.32 ಕೋಟಿ ರು. ದಂಡ ಸಂಗ್ರಹ ವಾಗಿದೆ.
ಭಾನುವಾರ ರಜೆ ದಿನವಾದ್ದರಿಂದ ನಗರ ಸಂಚಾರ ಪೊಲೀಸ್ ಠಾಣೆಗಳ ಎದುರು ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಬಾಕಿ ದಂಡ ಪಾವತಿಸಿದರು. ಬೆಳಗ್ಗೆಯಿಂದಲೇ ಸಂಚಾರ ಪೊಲೀಸ್ ಠಾಣೆ ಗಳ ಬಳಿ ಜನದಟ್ಟಣೆ ಕಂಡು ಬಂದಿತು. ಕಳೆದೆರಡು ದಿನಗಳಿಗೆ ಹೋಲಿಕೆ ಮಾಡಿದರೆ ಜನದಟ್ಟಣೆ ತುಸು ಹೆಚ್ಚಾಗಿಯೇ ಇತ್ತು. ಹೀಗಾಗಿ ಸಂಚಾರ ಠಾಣೆಗಳಲ್ಲಿ ದಂಡ ಪಡೆದು ರಶೀದಿ ನೀಡಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಶೇ.50ರಷ್ಟು ರಿಯಾಯಿತಿ: ಬೆಂಗಳೂರಿನಲ್ಲಿ 2ನೇ ದಿನ 6.8 ಕೋಟಿ ಟ್ರಾಫಿಕ್ ದಂಡ ಸಂಗ್ರಹ
ರಾಜ್ಯಾದ್ಯಂತ ಪೊಲೀಸ್ ಇಲಾಖೆಯಿಂದ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಈ ಹಿಂದೆ ದಾಖಲಾದ ಪ್ರಕರಣಗಳ ದಂಡದ ಮೊತ್ತ ಪಾವತಿಗೆ ಒಮ್ಮೆಗೆ ಮಾತ್ರ ಅನ್ವಯವಾಗುವಂತೆ ಶೇ.50ರಷ್ಟುರಿಯಾಯಿತಿ ಕಲ್ಪಿಸುವ ಸಂಬಂಧ ಸಾರಿಗೆ ಇಲಾಖೆ ಆಯುಕ್ತರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇತ್ತೀಚೆಗೆ ನಡೆದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಭೆಯಲ್ಲಿ ಈ ಪ್ರಸ್ತಾವನೆ ಬಗ್ಗೆ ಚರ್ಚಿಸಿ ಶೇ.50ರಷ್ಟುರಿಯಾಯಿತಿ ನೀಡುವ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಫೆ.11ರ ಒಳಗೆ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇ.50ರಷ್ಟುರಿಯಾಯಿತಿ ನೀಡಿ ಸಾರಿಗೆ ಇಲಾಖೆ ಗುರುವಾರ ಆದೇಶಿಸಿತ್ತು.
3 ದಿನದಲ್ಲಿ 22,32,47,491 ರು. ಬಾಕಿ ದಂಡ ವಸೂಲಿ !
ಸಂಚಾರ ಪೊಲೀಸ್ ಠಾಣೆ(Traffic Police Station)ಗಳಲ್ಲಿ 70,716 ಪ್ರಕರಣಗಳಿಂದ 1,97,56,950 ರು., ಆನ್‌ಲೈನ್ ಪಾವತಿ, ಪೇಟಿಎಂ(Paytm) ಮುಖಾಂತರ 1,14,617 ಪ್ರಕರಣಗಳಿಂದ 3,79,95,900 ರು., ಬೆಂಗಳೂರು ಒನ್ ವೆಬ್‌ಸೈಟ್‌ನಲ್ಲಿ 19,940 ಪ್ರಕರಣಗಳಿಂದ 51,60,550 ರು. ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಕೌಂಟರ್‌ನಲ್ಲಿ 1,053 ಪ್ರಕರಣಗಳಿಂದ 2,64,350 ರು. ಸೇರಿದಂತೆ ಒಟ್ಟು 2,06,326 ಪ್ರಕರಣಗಳಿಂದ 6,31,77,750 ರು. ಬಾಕಿ ದಂಡ ಸಂಗ್ರಹವಾಗಿದೆ. ಕಳೆದ ಮೂರು ದಿನಗಳಿಂದ 7,41,048 ಪ್ರಕರಣಗಳಿಂದ 22,32,47,491 ರು. ಬಾಕಿ ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಫಿಕ್ ದಂಡ ಪಾವತಿಗೆ ಮುಗಿಬಿದ್ದ ಜನ: ಒಂದೇ ದಿನ 5.6 ಕೋಟಿ ಸಂಗ್ರಹ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ