ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕದ್ದ ಮೊಬೈಲ್‌ಗಳೊಂದಿಗೆ ಇಬ್ಬರು ಯುವಕರನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಜಾರ್ಖಂಡ್ ಮೂಲದವರಾಗಿದ್ದಾರೆ.
ಬೆಂಗಳೂರು (ಏ.03): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಲೀಗ್ ಪಂದ್ಯದ ಜನಸಂದಣಿ ನಿರ್ವಹಣೆಗಾಗಿ ನಿಯೋಜಿಸಲಾದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (KSISF) ಸಿಬ್ಬಂದಿ ನಿನ್ನೆ ತಡರಾತ್ರಿ ಕದ್ದ ಮೊಬೈಲ್ ಫೋನ್‌ಗಳೊಂದಿಗೆ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಕದ್ದ ಮೊಬೈಲ್ ಫೋನ್‌ಗಳೊಂದಿಗೆ ಇಬ್ಬರ ಬಂಧನ ಮಾಡಲಾಗಿದೆ. ಈ ವೇಳೆ ಇಬ್ಬರು ಯುವಕರ ಬಳಿ ಬರೋಬ್ಬರಿ 7 ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಇನ್ನು ಆ ಮೊಬೈಲ್‌ಗಳು ತಮ್ಮವೇ ಎಂದು ವಾದ ಮಾಡಿದ್ದಾರೆ. ಇದಾದ ನಂತರ ಮೊಬೈಲ್‌ನ ಲಾಕ್ ಓಪನ್ ಮಾಡುವಂತೆ ಹೇಳಿದರೂ ಅದನ್ನು ತೆಗೆಯಲು ಬಾರದೇ ಸಿಕ್ಕಿಬಿದ್ದಿದ್ದಾರೆ. ಆಗ, ಆರ್‌ಸಿಬಿ ಕ್ರಿಕೆಟ್ ನೋಡಲು ಬಂದು ವಾಪಸ್ ಮೆಟ್ರೋಗೆ ಹೋಗುವ ಅಭಿಮಾನಿಗಳ ಜೇಬಿನಿಂದ ಕದ್ದಿರುವ ಮೊಬೈಲ್ ಎಂದು ಬಾಯಿ ಬಿಟ್ಟಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದು ಸರ್, ಡಿಸಿಎಂ ಡಿಕೆಶಿ ಸರ್, ರಸ್ತೆಯಲ್ಲಿ ನಿಲ್ಲೋ ಈ ನೀರಿಗೆ ಟ್ಯಾಕ್ಸ್ ಕಟ್ಟಂಗಿಲ್ವಾ?
ಇವರು ಕಳ್ಳರು ಎಂದು ಖಚಿತವಾದ ಕೂಡಲೇ ಇಬ್ಬರನ್ನೂ ಹಿಡಿದು ವಿಚಾರಣೆ ಮಾಡಿದಾಗ ಹಾಗೂ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಹೊರ ರಾಜ್ಯದಿಂದ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದರು ಎಂಬುದು ತಿಳಿದಿಬಂದಿದೆ. ಜಾರ್ಖಂಡ್ ಮೂಲದ ಆಯುಷ್ (12) ಹಾಗೂ ಸಂಜಿತ್ (23) ಎನ್ನುವ ಇಬ್ಬರನ್ನೂ ಮೆಟ್ರೋ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ನಂತರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.