ಬೆಂಗಳೂರು-ಹುಬ್ಬಳ್ಳಿ ರೈಲು ಮಾರ್ಗ ವಿದ್ಯುದೀಕರಣ ಮಾರ್ಚ್‌ಗೆ ಪೂರ್ಣ

By Kannadaprabha NewsFirst Published Feb 8, 2023, 10:30 AM IST
Highlights

ಏಪ್ರಿಲ್‌ನಲ್ಲಿ ವಂದೇಭಾರತ್‌, ಇತರ ಎಲೆಕ್ಟ್ರಿಕ್‌ ರೈಲು ಸಂಚಾರ ಗುರಿ, 316 ಕಿ.ಮೀ. ವಿದ್ಯುದೀಕರಣ ಪೂರ್ಣ, 153 ಕಿ.ಮೀ. ಬಾಕಿ, ವಂದೇಭಾರತ್‌ ಶುರು ಆದರೆ 6 ತಾಸಲ್ಲಿ ಬೆಂಗಳೂರಿಂದ ಧಾರವಾಡಕ್ಕೆ.

ಬೆಂಗಳೂರು(ಫೆ.08): ನೈಋುತ್ಯ ರೈಲ್ವೆಯ ಬಹುನಿರೀಕ್ಷಿತ ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಏಪ್ರಿಲ್‌ನಲ್ಲಿ ‘ವಂದೇ ಭಾರತ್‌’ ಅಥವಾ ಇತರೆ ಎಲೆಕ್ಟ್ರಿಕ್‌ ರೈಲುಗಳ ಸಂಚಾರ ಆರಂಭಿಸಲು ವಲಯವು ಪ್ರಯತ್ನ ನಡೆಸಿದೆ.

ಬೆಂಗಳೂರು-ಹುಬ್ಬಳ್ಳಿಯ ಸುಮಾರು 469 ಕಿ.ಮೀ. ಉದ್ದದ ಈ ಮಾರ್ಗದ ಡಬ್ಲಿಂಗ್‌ (ಜೋಡಿ ಮಾರ್ಗ) ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸುಮಾರು 316 ಕಿಮೀನಷ್ಟು ತೋಳಹುಣಸೆವರೆಗೆ ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನು, 153 ಕಿ.ಮೀ. ಕಾಮಗಾರಿ ಬಾಕಿ ಇದೆ. ಪೋಲ್‌ ಹಾಗೂ ವೈರಿಂಗ್‌ ಅಳವಡಿಕೆ ಚುರುಕಿನಿಂದ ಸಾಗಿದ್ದು, ಕಾಮಗಾರಿ ನಡೆಯುತ್ತಿದೆ. ಮಾರ್ಚ್‌ ಅಂತ್ಯದೊಳಗೆ ಈ ಹಂತವನ್ನು ಪೂರ್ಣಗೊಳಿಸುವ ಗುರಿಯಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Tumakuru: ರೈಲ್ವೇ ಬಿಡ್ಜ್ ನಿರ್ಮಿಸುವಂತೆ ಒತ್ತಾಯಿಸಿ ಹಳಿ ಮೇಲೆ‌ ಕುಳಿತು ಗ್ರಾಮಸ್ಥರ ಪ್ರತಿಭಟನೆ

ಎಲೆಕ್ಟ್ರಿಫಿಕೇಶನ್‌ನ ಈ ಹಂತ ಪೂರ್ಣಗೊಂಡ ಬಳಿಕ ಮಾರ್ಗ ಮಧ್ಯೆ ಇರುವ ಟ್ರ್ಯಾಕ್ಷನ್‌ ಸಬ್‌ಸ್ಟೇಷನ್‌ಗಳಿಗೆ ಕೆಪಿಟಿಸಿಎಲ್‌ನಿಂದ ವಿದ್ಯುತ್‌ ಸಂಪರ್ಕ ನೀಡಬೇಕಾಗುತ್ತದೆ. ನಂತರ ಎಲೆಕ್ಟ್ರಿಕ್‌ ರೈಲು ಸಂಚರಿಸಲು ಸಾಧ್ಯವಾಗಲಿದೆ. ವಿದ್ಯುದೀಕರಣ ಪೂರ್ಣಗೊಂಡ ಬಳಿಕ ರೈಲ್ವೆ ಸಚಿವಾಲಯದಿಂದ ‘ವಂದೇ ಭಾರತ್‌’ ರೈಲು ಮಂಜೂರಾಗಬೇಕಾಗುತ್ತದೆ. ಬಳಿಕವಷ್ಟೇ ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವೆ ‘ವಂದೇ ಭಾರತ್‌’ ನಿರೀಕ್ಷಿಸಬಹುದು ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಈ ಮಾರ್ಗದ ರೈಲ್ವೆ ಜೋಡಿ ಮಾರ್ಗ ಕಾಮಗಾರಿಗೆ 2015-16ರಲ್ಲಿಯೇ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿತ್ತು. ಇದಕ್ಕಾಗಿ ಸಂಪೂರ್ಣ ಕೇಂದ್ರವೇ 1954.21 ಕೋಟಿ ರು. ಬಿಡುಗಡೆ ಮಾಡಿತ್ತು. ಚಿಕ್ಕಬಾಣಾವರ-ಹುಬ್ಬಳ್ಳಿ ನಡುವಣ ಎಲೆಕ್ಟ್ರಿಫಿಕೇಶನ್‌ ಕಾಮಗಾರಿಗೆ 850 ಕೋಟಿ ರು. ಬಿಡುಗಡೆ ಆಗಿತ್ತು.

6 ತಾಸಲ್ಲಿ ಬೆಂಗಳೂರಿಂದ ಧಾರವಾಡ:

ಅಲ್ಲದೆ, ಕಳೆದ ಡಿಸೆಂಬರ್‌ನಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದ ನಡುವೆ ವಂದೇ ಭಾರತ್‌ ರೈಲು ಸಂಚಾರಕ್ಕೆ ಪೂರಕವಾಗಿ ವೇಗದ ಪರೀಕ್ಷೆಯನ್ನೂ ನಡೆಸಲಾಗಿದ್ದು, ಧಾರವಾಡದವರೆಗೆ ವಂದೇ ಭಾರತ್‌ ಸಂಚರಿಸುವುದು ನಿಶ್ಚಿತವಾಗಿದೆ. ಮಿನಿ ವಂದೇ ಭಾರತ್‌ ಕಲ್ಪನೆಯಲ್ಲಿ ಈ ರೈಲು ಇರಲಿದೆ ಎನ್ನಲಾಗಿದ್ದು, 5-6 ಗಂಟೆಗಳಲ್ಲಿ ಬೆಂಗಳೂರು-ಧಾರವಾಡ ತಲುಪಲು ಸಾಧ್ಯವಾಗಬಹುದು ಎನ್ನುವುದು ನೈಋುತ್ಯ ರೈಲ್ವೆ ಲೆಕ್ಕಾಚಾರ.

ಜೋಡಿ ಮಾರ್ಗದಿಂದ ಸರಕು ಸಾಗಣೆ ಸೇರಿ ಆರ್ಥಿಕ ಚಟುವಟಿಕೆಗೆ ಹೆಚ್ಚು ವೇಗ ಸಿಗಲಿದೆ. ಜತೆಗೆ ಹೆಚ್ಚು ರೈಲುಗಳ ಸಂಚಾರವೂ ಸಾಧ್ಯವಾಗಲಿದೆ. ಎಲೆಕ್ಟ್ರಿಫಿಕೇಶನ್‌ನಿಂದ ಈ ಮಾರ್ಗದ ಡೀಸೆಲ್‌ ಉಳಿತಾಯವಾಗಲಿದೆ. ಜತೆಗೆ ವಂದೇ ಭಾರತ್‌ನಂತ ಐಷಾರಾಮಿ ರೈಲುಗಳ ಸೇವೆ ಪ್ರಯಾಣಿಕರಿಗೆ ದೊರಕಲಿದೆ.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ವನ್ಯಜೀವಿ ಮಂಡಳಿ ಅಸ್ತು

ಇನ್ನು, ಈಗಾಗಲೇ ಚೆನ್ನೈ ಬೆಂಗಳೂರು ಹಾಗೂ ಮೈಸೂರು ನಡುವೆ ವಂದೇ ಭಾರತ್‌ ರೈಲು ಸಂಚರಿಸುತ್ತಿದೆ. ಬೆಂಗಳೂರು- ಹುಬ್ಬಳ್ಳಿ ವಿದ್ಯುದಿಕರಣದ ಜೊತೆಗೆ ಮಾರ್ಚ್‌ ಲೋಂಡಾ-ಮಿರಜ್‌ ಮಾರ್ಗದಲ್ಲಿಯೂ ಮೊದಲ ಹಂತದ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿದ್ದು, ಇದು ಕೂಡ ಅಂತಿಮ ಹಂತದಲ್ಲಿದೆ.

ಮಾರ್ಚ್‌ ಅಂತ್ಯಕ್ಕೆ ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗದ ವಿದ್ಯುದೀಕರಣ ಪೂರ್ಣಗೊಳ್ಳಲಿದೆ. ಏಫ್ರಿಲ್‌ ವೇಳೆಗೆ ಇಲ್ಲಿ ಎಲೆಕ್ಟ್ರಿಕಲ್‌ ರೈಲಿನ ಸಂಚಾರಕ್ಕೆ ಅನುವು ಮಾಡಿಕೊಡಲು ನೈಋುತ್ಯ ರೈಲ್ವೆ ಪ್ರಯತ್ನಶೀಲವಾಗಿದೆ ಅಂತ ನೈಋುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗಡೆ ತಿಳಿಸಿದ್ದಾರೆ. 

click me!