ಚಿತ್ಪಾವನ ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿ ನಿಂದನೆ ಸರಿಯಲ್ಲ: ಅಶೋಕ ಹಾರನಹಳ್ಳಿ

By Kannadaprabha NewsFirst Published Feb 7, 2023, 11:12 AM IST
Highlights

ಬ್ರಾಹ್ಮಣ ಸಮುದಾಯ ದೇವೇಗೌಡರ ಕುಟುಂಬದ ಬಗ್ಗೆ ಸದಾಶಯ ಹೊಂದಿದೆ. ಆದರೆ ಕುಮಾರಸ್ವಾಮಿ ಅವರು ಸಮುದಾಯದ ಬಗ್ಗೆ ಮಾಡಿದ ಟೀಕೆಗಳು ಬ್ರಾಹ್ಮಣರಲ್ಲಿ ಅಸಮಾಧಾನ ಉಂಟುಮಾಡಿದೆ. ರಾಜಕೀಯ ವಿರೋಧಿಗಳನ್ನು ಟೀಕೆ ಮಾಡುವ ಭರದಲ್ಲಿ ಸಮುದಾಯದ ಹೆಸರನ್ನು ಎಳೆದು ತಂದಿದ್ದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ. 

ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವರನ್ನು ಟೀಕೆ ಮಾಡುವ ಸಂದರ್ಭದಲ್ಲಿ ಅವರು ಗಾಂಧೀಜಿಯನ್ನು ಕೊಂದ ಸಮುದಾಯದವರೆಂದು ಹಾಗೂ ಮಹಾರಾಷ್ಟ್ರ ಮೂಲದ ಪೇಶ್ವೆಗಳಾಗಿ ಸೇವೆ ಸಲ್ಲಿಸಿದ ದೇಶಸ್ಥ ಬ್ರಾಹ್ಮಣರೆಂದು ಉಲ್ಲೇಖಿಸಿದ್ದಾರೆ. ಪ್ರಹ್ಲಾದ ಜೋಶಿ ಅವರು ಎಲ್ಲರಿಗೂ ತಿಳಿದಿರುವ ಹಾಗೆ ದೇಶಸ್ಥರಲ್ಲ, ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದ ಉತ್ತರಾದಿಮಠದ ಅನುಯಾಯಿಗಳು. ಇವರು ಉತ್ತರ ಕರ್ನಾಟಕದ ಮೂಲದವರೇ ಆಗಿದ್ದು, ಮಹಾರಾಷ್ಟ್ರಕ್ಕೆ ಸೇರಿದವರಲ್ಲ. ಜೋಶಿ ಅವರು ರಾಜಕೀಯದಲ್ಲಿ ತಮ್ಮದೇ ಆದ ಗೌರವವನ್ನು ಸಂಪಾದಿಸಿದ್ದಾರೆ. ಅರ್ಹತೆಯೇ ಮಾನದಂಡವಾದಲ್ಲಿ ಜೋಶಿ ಅವರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ. ಕೇವಲ ಜಾತಿಯ ಆಧಾರದ ಮೇಲೆ ವೈಯಕ್ತಿಕ ಟೀಕೆ ಸೂಕ್ತವಲ್ಲ. ಅವರ ಹಾಗೂ ಅವರ ಪಕ್ಷದ ರಾಜಕೀಯ ನಿಲುವುಗಳನ್ನು ಪ್ರಶ್ನಿಸಬಹುದು, ಆದರೆ ಜಾತಿ ಆಧಾರದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ.

ಹಿಂದೆ ನಡೆದು ಹೋದ ಗಾಂಧಿ ಹತ್ಯೆಯನ್ನೇ ಗುರಿಯಾಗಿಟ್ಟುಕೊಂಡು ಇಂದಿಗೂ ಚಿತ್ಪಾವನ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದು ಎಷ್ಟು ಸರಿ? ನೂರಾರು ವರುಷಗಳ ಹಿಂದೆಯೇ ಕರ್ನಾಟಕದ ನಾನಾ ಭಾಗಗಳಲ್ಲಿ ಬಂದು ನೆಲೆಸಿರುವ ಚಿತ್ಪಾವನ ಹಾಗೂ ದೇಶಸ್ಥ ಬ್ರಾಹ್ಮಣರು ನಮ್ಮ ನಾಡು ನುಡಿಯೊಂದಿಗೆ ಬೆರೆತು ಕನ್ನಡಿಗರೇ ಆಗಿ ಹೋಗಿದ್ದಾರೆ. ಉದಾಹರಣೆಗೆ ಚಿತ್ಪಾವನರಾದ ವರಕವಿ ಬೇಂದ್ರೆ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾರೆವು. ಅಷ್ಟೇ ಅಲ್ಲ ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣಕ್ಕೆ ಆಲೂರು ವೆಂಕಟರಾಯರು ಸಂಕಲ್ಪಿಸಿದಾಗ ಅವರಿಗೆ ಅಂದು ಸಂಸತ್ತಿನಲ್ಲೇ ಸಂಪೂರ್ಣ ಬೆಂಬಲ ಘೋಷಿಸಿದವರು ಚಿತ್ಪಾವನ ಮುಖಂಡರೇ. ಭೂದಾನದಂತಹ ಮಹಾ ಯಜ್ಞವನ್ನು ಕೈಗೊಂಡ ವಿನೋಬಾ ಭಾವೆ ಅವರು ಕೂಡ ಚಿತ್ಪಾವನರೇ. ನಾಥೂರಾಂ ಗೋಡ್ಸೆ ಎಂಬ ದಾರಿ ತಪ್ಪಿದ ದೇಶಭಕ್ತನೊಬ್ಬ ಗಾಂಧಿಯನ್ನು ಕೊಂದನೆಂದು ಆ ಸಮುದಾಯಕ್ಕೆ ಸೇರಿದ ಎಲ್ಲರನ್ನು ದೋಷಿಗಳಂತೆ ನೋಡುವುದು ಸಮಂಜಸವಲ್ಲ. ಹಾಗೆ ಮಾಡಿದರೆ ಚಿತ್ಪಾವನ ಬ್ರಾಹ್ಮಣ ಸಮಾಜದ ಸ್ವಾತಂತ್ರ್ಯ ಹೋರಾಟಗಾರರಾದ ಚಾಪೇಕರ ಸಹೋದರರು, ಬಲವಂತ ಫಡ್ಕೆ, ಸಾವರ್ಕರ್‌, ಜಸ್ಟಿಸ್‌ ರಾನಡೆ, ಅಚ್ಚುತ ಪಟವರ್ಧನ್‌, ಕಾಕಾಸಾಹೇಬ್‌ ಗಾಡ್ಗೀಳ್‌, ರಾವ್‌ ಸಾಹೇಬ್‌ ಪಟವರ್ಧನ್‌, ಲಿಮಯೆ, ಸೇನಾಪತಿ ಬಾಪಟ್‌, ಅನಂತ್‌ ಕಾನ್ಹೆರೆ, ತಾತ್ಯಾ ಟೋಪೆ, ಮಹದೇವ್‌ ರಾನಡೆ ಹಾಗೂ ಗಾಂಧೀಜಿಯವರ ಗುರುಗಳಾದ ಗೋಖಲೆ, ಸ್ವರಾಜ್ಯದ ಕಲ್ಪನೆಯನ್ನು ಬಿತ್ತಿದ ತಿಲಕರು ಇವರೆಲ್ಲರ ರಾಷ್ಟ್ರಭಕ್ತಿಯನ್ನೇ ಪ್ರಶ್ನಿಸಿದಂತಾಗುತ್ತದೆ.

ರಾಜ್ಯಕ್ಕೆ ಈ ಬಾರಿ ಬ್ರಾಹ್ಮಣರೇ ಮುಖ್ಯಮಂತ್ರಿ, 8 ಮಂದಿ ಉಪಮುಖ್ಯಮಂತ್ರಿ! ಎಚ್‌ಡಿಕೆ ಬಾಂಬ್

ಪ್ರಸ್ಥಾನತ್ರಯವನ್ನು ಅರ್ಥೈಸಿಕೊಳ್ಳುವ ಮಾರ್ಗದಲ್ಲಿ ಸ್ಮಾರ್ತರಲ್ಲಿ, ವೈಷ್ಣವರಲ್ಲಿ, ಶ್ರೀವೈಷ್ಣವರಲ್ಲಿ ಕೆಲವು ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆದರೂ ಎಲ್ಲಾ ತ್ರಿಮತಸ್ಥ ಆಚಾರ್ಯರು ಸನಾತನ ಧರ್ಮದ ರಕ್ಷಣೆ ಹಾಗೂ ಪೋಷಣೆಗೆ ಕಾರಣೀಭೂತರಾಗಿದ್ದಾರೆ. ಎಲ್ಲಾ ಆಚಾರ್ಯರು ಸಹ ಸಮಸ್ತ ಮನುಕುಲದ ಶ್ರೇಯಸ್ಸನ್ನೇ ಆಶಿಸಿದ್ದಾರೆ.

ಕುಮಾರಸ್ವಾಮಿ ಅವರು ಅದರಲ್ಲೂ ದೇವೇಗೌಡರ ಕುಟುಂಬದವರು ಸನಾತನ ಧರ್ಮವನ್ನು ಗೌರವಿಸುವವರಾಗಿದ್ದಾರೆ. ಶೃಂಗೇರಿ ಮಠದ ಪರಂಪರೆಯಲ್ಲಿ ಅತ್ಯಂತ ಭಕ್ತಿ ಹಾಗೂ ಶ್ರದ್ಧೆಯನ್ನು ಹೊಂದಿದವರಾಗಿದ್ದಾರೆ. ಈ ಹಿಂದೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ನಗರದ ಮಧ್ಯ ಭಾಗದಲ್ಲಿ ನಿವೇಶನ ಮಂಜೂರು ಮಾಡುವ ವಿಷಯದಲ್ಲಿ ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆಯಲ್ಲಿ ಕುಮಾರಸ್ವಾಮಿ ಅವರ ಪಾತ್ರ ಮಹತ್ವವಾದದ್ದು. ಆದ್ದರಿಂದ ವಿಪ್ರ ಸಮುದಾಯ ಇಂದಿಗೂ ದೇವೇಗೌಡರ ಕುಟುಂಬದ ಬಗ್ಗೆ ಸದಾಶಯವನ್ನು ಹೊಂದಿದೆ. ಆದರೆ ಕುಮಾರಸ್ವಾಮಿ ಅವರು ಸಮುದಾಯದ ಬಗ್ಗೆ ಮಾಡಿದ ಟೀಕೆಗಳು ವಿಪ್ರರ ಸಮುದಾಯದಲ್ಲಿ ಅಸಮಾಧಾನವನ್ನುಂಟು ಮಾಡಿದೆ. ರಾಜಕೀಯ ವಿರೋಧಿಗಳನ್ನು ಟೀಕೆ ಮಾಡುವ ಭರದಲ್ಲಿ ಸಮುದಾಯದ ಹೆಸರನ್ನು ಎಳೆದು ತಂದಿದ್ದು ಅವರ ವ್ಯಕ್ತಿತ್ವಕ್ಕೆ ಗೌರವ ತರುವ ವಿಷಯವಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಆಕಾಂಕ್ಷೆ ಹೊಂದಿರುವ ಕುಮಾರಸ್ವಾಮಿ ಅವರು ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದು ಮರೆಯಬಾರದು.

ಬ್ರಾಹ್ಮಣ ಸಮುದಾಯ ದೇವೇಗೌಡರ ಕುಟುಂಬದ ಬಗ್ಗೆ ಸದಾಶಯ ಹೊಂದಿದೆ. ಆದರೆ ಕುಮಾರಸ್ವಾಮಿ ಅವರು ಸಮುದಾಯದ ಬಗ್ಗೆ ಮಾಡಿದ ಟೀಕೆಗಳು ಬ್ರಾಹ್ಮಣರಲ್ಲಿ ಅಸಮಾಧಾನ ಉಂಟುಮಾಡಿದೆ. ರಾಜಕೀಯ ವಿರೋಧಿಗಳನ್ನು ಟೀಕೆ ಮಾಡುವ ಭರದಲ್ಲಿ ಸಮುದಾಯದ ಹೆಸರನ್ನು ಎಳೆದು ತಂದಿದ್ದು ಅವರ ವ್ಯಕ್ತಿತ್ವಕ್ಕೆ ಗೌರವ ತರುವುದಿಲ್ಲ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದ್ದಾರೆ. 

click me!