
ಬೆಂಗಳೂರು(ಫೆ.08): ‘ಕಾಣೆ’ಯಾಗಿರುವ ವಯಸ್ಕ ಮಗನನ್ನು ಪತ್ತೆ ಹಚ್ಚಿಕೊಡಲು ಪೊಲೀಸರಿಗೆ ನಿದೇಶಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ತಂದೆಗೆ, ಮಗನು ಕಳೆದ 20 ತಿಂಗಳಿಂದ ತನ್ನ ಪತ್ನಿ (ಅರ್ಜಿದಾರರ ಸೊಸೆ) ಹಾಗೂ ಮಕ್ಕಳ ಜೊತೆ ಜೀವನ ನಡೆಸುತ್ತಿದ್ದ ವಿಷಯ ಗೊತ್ತಾಗಿ ಆಘಾತಕ್ಕೆ ಒಳಗಾದ ಪ್ರಸಂಗ ನಡೆದಿದೆ.
ಪೊಲೀಸರು ಕಾಣೆಯಾದ ಮಗನನ್ನು ಪತ್ತೆ ಹೆಚ್ಚಿ ಹೈಕೋರ್ಟ್‌ಗೆ ಹಾಜರುಪಡಿಸಿದಾಗ, ಆತ ಕಳೆದ 20 ತಿಂಗಳಿಂದ ಪತ್ನಿ ಮತ್ತು ಪತ್ನಿಗೆ ಈ ಹಿಂದೆ ಇದ್ದ ಇಬ್ಬರು ಪತಿಯರಿಂದ ಪಡೆದಿದ್ದ ತಲಾ ಒಬ್ಬರು ಮಕ್ಕಳ ಜೊತೆ ಜೀವನ ನಡೆಸುತ್ತಿರುವ ವಿಷಯ ತಿಳಿಯಿತು. ಆಗ ಆತ ಪತ್ನಿ ಮತ್ತು ಮಕ್ಕಳ ಜೊತೆಗೆ ಬದುಕುವುದಾಗಿ ತಿಳಿಸಿದ್ದರಿಂದ ಅರ್ಜಿದಾರ ತಂದೆಗೆ ಯಾವುದೇ ಪರಿಹಾರ ಕಲ್ಪಿಸಲು ಅವಕಾಶವಿಲ್ಲದೆ ಹೈಕೋರ್ಟ್ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ವಿವಾಹಿತ ಮಹಿಳೆಗೆ ಪೋಷಕರ ಜಾತಿಯೇ ಆಧಾರ ಹೊರತು ಗಂಡನದಲ್ಲ: ಹೈಕೋರ್ಟ್
ಪ್ರಕರಣದ ವಿವರ:
ಹಲವು ತಿಂಗಳಿಂದ ಕಾಣೆಯಾಗಿರುವ ತನ್ನ ಮಗ ಆನಂದ ಶೆಟ್ಟಿಯನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಉಡುಪಿಯ ರಾಜು ಶೆಟ್ಟಿ2023ರ ಜ.16ರಂದು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಾಗಲಕೋಟೆಯ ಹುನಗುಂದ ಠಾಣಾ ಪೊಲೀಸರು ಆನಂದ ಶೆಟ್ಟಿ, ಆತನ ಪತ್ನಿ ವಿದ್ಯಾ ಹಾಗೂ ಅವರ ಇಬ್ಬರು ಅಪ್ರಾಪ್ತ ಪುತ್ರರನ್ನು (ಎಲ್ಲರ ಹೆಸರು ಬದಲಿಸಲಾಗಿದೆ) ಹೈಕೋರ್ಟ್ ಮುಂದೆ ಇತ್ತೀಚೆಗೆ ಹಾಜರುಪಡಿಸಿದ್ದರು. ವಿಚಾರಣೆಗೆ ಅರ್ಜಿದಾರರು, ಅವರ ಪತ್ನಿ ಮತ್ತು ಪುತ್ರಿ ಸಹ ಖುದ್ದು ಹಾಜರಾಗಿದ್ದರು. ನ್ಯಾಯಾಲಯವು ಸ್ವಲ್ಪ ಕಾಲ ಆನಂದ ಶೆಟ್ಟಿಯೊಂದಿಗೆ ಸಮಾಲೋಚನೆ ನಡೆಸಿತು. ಈ ವೇಳೆ ‘ನಾನು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಲು ಬಯಸಿದ್ದೇನೆ’ ಎಂದು ಆನಂದ ಶೆಟ್ಟಿ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.
ಪತ್ನಿಗೆ ಜೀವನಾಂಶ ನೀಡೋದು ಪತಿಗೆ ಶಿಕ್ಷೆಯಲ್ಲ: ಹೈಕೋರ್ಟ್ ಅಭಿಪ್ರಾಯ
ಇದೇ ವೇಳೆ ಪೊಲೀಸರ ಪರ ಹಾಜರಾದ ಸರ್ಕಾರಿ ವಕೀಲರು, ಆನಂದ ಶೆಟ್ಟಿ ಅವರು ಪತ್ನಿ ಮತ್ತವರ ಮಕ್ಕಳೊಂದಿಗೆ ಕಳೆದ 20 ತಿಂಗಳಿಂದ ಬೆಂಗಳೂರಿನ ಕೋರಮಂಗಲದಲ್ಲಿ ವಾಸವಾಗಿದ್ದಾರೆ. ಆನಂದ ಶೆಟ್ಟಿಯ ವಿವಾಹ ಪೂರ್ವದಲ್ಲೇ ಪತ್ನಿ ವಿದ್ಯಾಗೆ ಇಬ್ಬರು ಪತಿಯರಿದ್ದರು. ಆ ಇಬ್ಬರು ಪತಿಯಿಂದ ತಲಾ ಒಂದು ಗಂಡು ಮಗುವಿಗೆ ವಿದ್ಯಾ ಜನ್ಮ ನೀಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಆನಂದ ಶೆಟ್ಟಿಯ ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರ ಪುತ್ರನನ್ನು ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ತನ್ನ ಪತ್ನಿ ಮತ್ತು ಇಬ್ಬರ ಮಕ್ಕಳೊಂದಿಗೆ ಬದುಕುವುದಾಗಿಯೂ ತಿಳಿಸಿದ್ದಾರೆ. ಆದ್ದರಿಂದ ಅರ್ಜಿಯ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ತಿಳಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ