ಬೆಂಗಳೂರಿನಲ್ಲಿ ಹುಡುಗಾಟಿಕೆಗಾಗಿ ಯುವಕನನ್ನು ಪಟಾಕಿ ಮೇಲೆ ಕೂರಿಸಿ ಬೆಂಕಿ ಹಚ್ಚಿ ಕೊಲೆ ಮಾಡಿದ ಕಿಡಿಗೇಡಿಗಳು. ದುಡಿಮೆಗೆ ಆಟೋ ಕೊಡಿಸುವುದಾಗಿ ನಂಬಿಸಿ ಪಟಾಕಿ ಮೇಲೆ ಕೂರಿಸಿ ಸ್ಪೋಟಿಸಿದ್ದಾರೆ.
ಬೆಂಗಳೂರು (ಅ.04): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹುಡುಗಾಟಿಕೆಗಾಗಿ ಒಬ್ಬ ನಿರುದ್ಯೋಗಿ ಅಮಾಯಕ ಯುವಕನನ್ನು ಕರೆದು ನೀನು ಪಟಾಕಿ ಮೇಲೆ ಕುಳುತುಕೊಂಡರೆ ನಿನ್ನ ದುಡಿಮೆಗೆ ಅನುಕೂಲ ಆಗುವಂತೆ ಹೊಸ ಆಟೋ ಕೊಡಿಸುವುದಾಗಿ ಭರವಸೆ ನೀಡಿದ ಕಿಡಿಗೇಡಿಗಳು, ದೊಡ್ಡ ಪಟಾಕಿಯ ಮೇಲೆ ಆತನನ್ನು ಕೂಡಿಸಿ ಬೆಂಕಿ ಹಚ್ಚಿ ಸ್ಪೋಟಿಸಿ ಕೊಲೆ ಮಾಡಿದ್ದಾರೆ.
ಹೌದು, ನಮ್ಮ ಹಿರಿಯರು ಬೆಂಕಿ, ನೀರು, ಗಾಳಿ ಹಾಗೂ ವಿದ್ಯುತ್ತಿನ ಜೊತೆಗೆ ಯಾವುದೇ ಹುಡುಗಾಟಿಕೆ ಮಾಡಬಾರದು ಎಂದು ಹೇಳಿದ್ದಾರೆ. ಆದರೆ, ಈ ಕಿಡಿಗೇಡಿ ಯುವಕರು ಪಟಾಕಿ ಸಿಡಿಸಿ ಬೆಂಕಿಯೊಂದಿಗೆ ಹುಡುಗಾಟಿಕೆ ಮಾಡಲು ಮುಂದಾಗಿದ್ದಾರೆ. ದೀಪಾವಳಿ ಹಬ್ಬದ ನಿಮಿತ್ತ ದೊಡ್ಡ ದೊಡ್ಡ ಪಟಾಕಿಗಳನನು ಹೊಡೆಯುತ್ತಿದ್ದ ಯುವಕರು ಏನಾದರೂ ಮಾಡಿ ನಮ್ಮ ಏರಿಯಾದಲ್ಲಿ ಕೀಟಲೆ ಮಾಡಬೇಕು ಎಂದು ಕಾಯುತ್ತಿದ್ದರು. ಆಗ ಸಿಕ್ಕಿದ್ದೇ ಈ ಶಬರೀಶ್ ಎನ್ನುವ ಅಮಾಯಕ ನಿರುದ್ಯೋಗಿ ಯುವಕ. ಆತನನ್ನು ಹೇಗಾದರೂ ಮಾಡಿ ಪುಸಲಾಯಿಸಿ ಪಟಾಕಿ ಮೇಲೆ ಕೂರಿ ಬೆಂಕಿ ಹಚ್ಚಿ ಅದರಿಂದ ಏನಾಗುತ್ತದೆ ಎಂಬುದನ್ನು ನೋಡಬೇಕು ಎಂಬ ಕುತೂಹಲದಲ್ಲಿದ್ದರು.
ದೀಪಾವಳಿಯ ದಿನ ನ.31ರಂದು ಸಂಜೆ 6 ಜನ ಯುವಕರು ಸೇರಿಕೊಂಡು ಈ ಪಟಾಕಿಯ ಮೇಲೆ ನೀನು ಕುಳಿತುಕೊಂಡ ನಿನ್ನ ಉದ್ಯೋಗಕ್ಕೆ ಅನುಕೂಲ ಆಗುವಂತೆ ನಿನಗೆ ಒಂದು ಹೊಸ ಆಟೋವನ್ನು ಕೊಡಿಸುತ್ತೇವೆ ಎಂದು ಹುಡುಗಾಟಿಕೆಗಾಗಿ ಸವಾಲು ಹಾಕಿದ್ದಾರೆ. ಇನ್ನು ನಿರುದ್ಯೋಗ ಹಾಗೂ ದುಡಿಮೆಗೆ ಬಂಡವಾಳ ಇಲ್ಲದೇ ಪರದಾಡುತ್ತಿದ್ದ ಯುವಕ ಶಬರಿ ಅವರ ಷರತ್ತಿಗೆ ಒಪ್ಪಿಕೊಂಡಿದ್ದಾನೆ. ನೀವು ಕೊಡುವ ಪಟಾಕಿ ಮೇಲೆ ನಾನು ಕುಳುತುಕೊಳ್ಳುತ್ತೇನೆ, ಇದಾದ ನಂತರ ನನಗೆ ಹೊಸ ಆಟೋ ಕೊಡಿಸಲೇಬೇಕು ಎಂದು ಮತ್ತೊಮ್ಮೆ ಗಟ್ಟಿಯಾಗಿ ಸವಾಲಿಗೆ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್? ಎಟಿಎಂ ಕಾರ್ಡ್‌ನಂತೆ ಸ್ವೈಪ್ ಮಾಡಬೇಕು!
ಕೋಣನಕುಂಟೆ ಠಾಣಾ ವ್ಯಾಪ್ತಿಯ ವೀವರ್ಸ್ ಕಾಲೋನಿಯಲ್ಲಿ ರಾತ್ರಿ ವೇಳೆ ಪಟಾಕಿ ಹೊಡೆಯುತ್ತಿದ್ದ ಶಬರೀಶನ ಸ್ನೇಹಿತರು ಆತನನ್ನು ಭಾರಿ ಪ್ರಮಾಣದ ಸ್ಫೋಟಕ ತುಂಬಿರುವ ಪಟಾಕಿಯ ಮೇಲೆ ಕೂರಿಸಿ, ಬೆಂಕಿಯನ್ನು ಹಚ್ಚಿದ ಕಿಡಿಗೇಡಿಗಳು ಆತನಿಂದ ಸುಮಾರು ದೂರ ಓಡಿ ಹೋಗಿದ್ದಾರೆ. ಆದರೆ, ದೊಡ್ಡ ಪಟಾಕಿ ಸಿಡಿದ ರಭಸಕ್ಕೆ ಶಬರೀಶ್ ತೀವ್ರ ಗಾಯಗೊಂಡು ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆದರೆ, ನೆರೆಹೊರೆಯರೆಲ್ಲಾ ಹೊರಗೆ ಬಂದು ನೋಡಿದಾಗ ಗಾಯಾಳು ಶಬರೀಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ಗಾಯಗೊಂಡಿದ್ದ ಶಬರೀಶ್ ಮೊನ್ನೆ ಅ.2ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದರು. ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು 5 ಜನ ಯುವಕರನ್ನ ಬಂಧಿಸಿದ್ದಾರೆ.
ಕಿಡಿಗೇಡಿ ಯುವಕರ ಬಂಧನ: ಕೋಣನಕುಂಟೆ ಪೊಲೀಸರು ಪಟಾಕಿ ಸಿಡಿತದಿಂದ ಶಬರೀಶ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಮೇಲೆ ಕೇಸ್ ದಾಖಲು ಮಾಡಿ ಅವರನ್ನು ಬಂಧಿಸಿದ್ದಾರೆ. ಘಟನೆ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಾವು ಪಟಾಕಿ ಸಿಡಿಸುವ ವೇಳೆ ಮದ್ಯಪಾನ ಮಾಡಿದ್ದ ಶಬರೀಶ್ ತಾನೇ ಪಟಾಕಿ ಮೇಲೆ ಕೂರುತ್ತೇನೆ ನೀವು ಸಿಡಿಸಿ ಎಂದು ಸವಾಲು ಹಾಕಿದ್ದಾಗಿ ಹೇಳಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು; ರಾಜಕಾರಣಿಗಳಿಗೆ ಕ್ಯಾಕರಿಸಿ ಉಗಿದ ಜನರು!