99 ವರ್ಷದ ಮಹಿಳಾ ಕೊರೋನಾ ರೋಗಿ ಚೇತರಿಕೆ!| ವಿಕ್ಟೋರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಗುಣಮುಖರಾಗಿ ಬಿಡುಗಡೆ| ಇದು ರಾಜ್ಯದಲ್ಲೇ ಅತಿ ಹಿರಿಯ ರೋಗಿಯೊಬ್ಬರ ಚೇತರಿಕೆ ಪ್ರಕರಣ?
ಬೆಂಗಳೂರು(ಜೂ.27): ಕೊರೋನಾ ಸೋಂಕಿಗೆ ವಯಸ್ಕರು, ಮಧ್ಯ ವಯಸ್ಕರು ಮತ್ತು ಯುವಸಮೂಹ ಬಲಿಯಾಗುತ್ತಿರುವಾಗಲೇ, ಅಚ್ಚರಿಯ ರೀತಿಯಲ್ಲಿ 99 ವರ್ಷದ ಮಹಿಳಾ ಸೋಂಕಿತೆರೊಬ್ಬರು ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಷ್ಟುಹಿರಿಯ ವಯಸ್ಕರೊಬ್ಬರು ಕೊರೋನಾದಿಂದ ಚೇತರಿಸಿಕೊಂಡ ಕರ್ನಾಟಕದ ಮೊದಲ ಪ್ರಕರಣದ ಇದು ಎನ್ನಲಾಗುತ್ತಿದೆ.
ದಾವಣಗೆರೆಯಲ್ಲಿ 1 ಕೊರೋನಾ ಪಾಸಿಟಿವ್, 10 ಬಿಡುಗಡೆ
ಕೆಲ ದಿನಗಳ ಹಿಂದಷ್ಟೇ ಈ ವೃದ್ಧ ಮಹಿಳೆಯ ಪುತ್ರ ಮತ್ತು ಸೊಸೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೃದ್ಧ ಮಹಿಳೆಯನ್ನೂ ತಪಾಸಣೆಗೆ ಒಳಪಡಿಸಿದ ವೇಳೆ ಅವರಲ್ಲೂ ಸಣ್ಣ ಪ್ರಮಾಣದ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನೂ ಜೂ.17ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚಿನ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಚಿಕಿತ್ಸೆ ಫಲಪ್ರದವಾಗಿದ್ದು ವೃದ್ಧ ಮಹಿಳೆ ಸಂಪೂರ್ಣ ಚೇತರಿಸಿಕೊಂಡು ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರೂ, ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಕಾಲಕಾಲಕ್ಕೆ ಅವರ ಆರೋಗ್ಯ ಪರೀಕ್ಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯಲ್ಲೇ ಬೆಳೆಯಿರಿ ತರಕಾರಿ, 84ರ ಹರೆಯದ ಅಜ್ಜಿಗೆ 100 ಕುಟುಂಬದ ಸಾಥ್!
ಇದೇ ವೇಳೆ ಆಸ್ಪತ್ರೆಯಲ್ಲಿ ಇದ್ದ ಅವಧಿಯಲ್ಲಿ ವೃದ್ಧ ಮಹಿಳೆ ಸಿಬ್ಬಂದಿಗೆ ಯಾವುದೇ ತೊಂದರೆ ಕೊಡದೆ, ಉತ್ತಮ ರೀತಿಯಲ್ಲಿ ಸಹಕರಿಸಿದರು ಎಂದು ವೈದ್ಯರು ತಿಳಿಸಿದ್ದಾರೆ. ಅಚ್ಚರಿ ಎಂದರೆ ಈ ಮಹಿಳೆಯ ಪುತ್ರ ಮತ್ತು ಸೊಸೆ ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ.