ಶಾಲೆ ಆರಂಭಿಸಲು ಮಕ್ಕಳ ಆಯೋಗ ಶಿಫಾರಸು!

By Kannadaprabha NewsFirst Published Jun 27, 2020, 9:19 AM IST
Highlights

ಕೋವಿಡ್‌-19 ಪರಿಣಾಮದಿಂದ ಅಧಿಕ ಸಂಖ್ಯೆಯಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆ, ಮಕ್ಕಳನ್ನು ಗೃಹ ಕೆಲಸಕ್ಕೆ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶೀಘ್ರವಾಗಿ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ಶಾಲೆ ಪ್ರಾರಂಭಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ಬೆಂಗಳೂರು (ಜೂ. 27): ಕೋವಿಡ್‌-19 ಪರಿಣಾಮದಿಂದ ಅಧಿಕ ಸಂಖ್ಯೆಯಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಮಕ್ಕಳ ಮೇಲೆ ದೌರ್ಜನ್ಯ, ಶೋಷಣೆ, ಮಕ್ಕಳನ್ನು ಗೃಹ ಕೆಲಸಕ್ಕೆ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶೀಘ್ರವಾಗಿ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ಶಾಲೆ ಪ್ರಾರಂಭಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ಆನ್‌ಲೈನ್‌ ಶಿಕ್ಷಣ ಹಾಗೂ ಶಾಲೆಗಳನ್ನು ಪುನರಾರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಹಲವು ಶಿಫಾರಸುಗಳನ್ನು ಮಾಡಿರುವ ಆಯೋಗ ಶಾಲೆ ನಡೆಸದ ಸ್ಥಿತಿ ಇದೇ ರೀತಿ ಮುಂದುವರೆದರೆ ಶಾಲೆ ಬಿಡುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಸಿಇಟಿ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ

ಪೂರ್ವ ಪ್ರಾಥಮಿಕದಿಂದ ಕನಿಷ್ಠ 5ನೇ ತರಗತಿಯವರೆಗೆ ಆನ್‌ಲೈನ್‌ ಶಿಕ್ಷಣದ ಬದಲಿಗೆ ಸಮೂಹ ಮಾಧ್ಯಮಗಳಾದ ರೇಡಿಯೋ, ದೂರದರ್ಶನ ಬಳಸಿ ಕಲಿಸಬೇಕು. 6-8ನೆ ತರಗತಿ ಮಕ್ಕಳಿಗೆ ಗರಿಷ್ಠ ಒಂದೂವರೆ ಗಂಟೆ, 9 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಗರಿಷ್ಠ ಎರಡೂವರೆ ಗಂಟೆ, 11-12ನೇ ತರಗತಿ ವಿದ್ಯಾರ್ಥಿಗಳಿಗೆ ಗರಿಷ್ಠ ಮೂರು ಗಂಟೆಗಿಂತ ಹೆಚ್ಚು ಅವಧಿಗೆ ಆನ್‌ಲೈನ್‌ ತರಗತಿಗಳು ಇರದಂತೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಶಿಫಾರಸು ಮಾಡಿದೆ.

ದೀರ್ಘಕಾಲದ ಆನ್‌ಲೈನ್‌ ಶಿಕ್ಷಣ ಮಗುವಿನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಲ್ಲದೆ ನಗರ-ಗ್ರಾಮೀಣ ಪ್ರದೇಶದ ಮಕ್ಕಳ ನಡುವೆ ಕಂದಕವನ್ನು ಸೃಷ್ಟಿಸುತ್ತದೆ. ಹೀಗಾಗಿ ಆನ್‌ಲೈನ್‌ ಶಿಕ್ಷಣ ಎಂದಿಗೂ ತರಗತಿಯ ಜೀವಂತ ಕಲಿಕೆಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಹೇಳಿದೆ.

ಸ್ಥಳದ ಅಭಾವವನ್ನು ಎದುರಿಸುತ್ತಿರುವ ಶಾಲೆಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಮಾರ್ಗಸೂಚಿ ಪ್ರಕಾರ, ತರಗತಿವಾರು ಶಾಲೆಗಳನ್ನು ಆರಂಭಿಸಬಹುದು. ಶಾಲೆಗಳನ್ನು ಹಸಿರು ವಲಯದಲ್ಲಿ ಮೊದಲು ಪ್ರಾರಂಭಿಸಬೇಕು. ನಂತರ ಹಳದಿ ವಲಯಗಳಲ್ಲಿ, ಕೊನೆಯದಾಗಿ ಕೆಂಪು ವಲಯಗಳು ಹಸಿರು ಮತ್ತು ಹಳದಿ ವಲಯಗಳಾಗಿ ಬದಲಾವಣೆಯಾದಾಗ ಮಕ್ಕಳ ರಕ್ಷಣೆ ಮತ್ತು ಸುರಕ್ಷತಾ ಕ್ರಮಗಳನ್ನು ಜಾಗರೂಕತೆಯಿಂದ ನಿರ್ವಹಿಸಿ ಪ್ರಾರಂಭಿಸಬೇಕು ಎಂದು ಸೂಚಿಸಿದೆ.

click me!