
ಬೆಂಗಳೂರು (ನ.21): ಬೆಂಗಳೂರಿನಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬಂತೆ 8 ವರ್ಷದ ಬಾಲಕಿ ಹೊಟ್ಟೆಯಲ್ಲಿ ಬರೋಬ್ಬರಿ 3 ಕೆ.ಜಿ. ತೂಕದಷ್ಟು ಕೂದಲು ಪತ್ತೆಯಾಗಿದ್ದು, ವೈದ್ಯರೇ ಅಚ್ಚರಿಗೆ ಒಳಗಾಗಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಜಡೆಯಂತೆ ಗಂಟು ಕಟ್ಟಿಕೊಂಡಿದ್ದ 3 ಕೆ.ಜಿ ಕೂದಲಿನ ಗಡ್ಡೆ ತೆಗೆದಿದ್ದಾರೆ.
ಬಹು ಅಪರೂಪದ ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ ಸುಮಾರು 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ.
ಇಷ್ಟೂ ವರ್ಷ ಪೋಷಕರಿಗೆ ಈ ಬಗ್ಗೆ ಸಣ್ಣ ಅನುಮಾನವೂ ಬಂದಿಲ್ಲ. ಇತ್ತೀಚೆಗೆ ತೂಕ ಕಡಿಮೆಯಾಗುತ್ತಿತ್ತು. ತೀವ್ರ ಹೊಟ್ಟೆ ನೋವು, ವಾಂತಿ ಹಾಗೂ ಹೊಟ್ಟೆ ಭಾಗದಲ್ಲಿ ಗಡ್ಡೆ ರೀತಿಯ ಗುರುತು ಪತ್ತೆಯಾಗಿದ್ದರಿಂದ ಎಚ್ಚೆತ್ತ ಪೋಷಕರು ನೇಟಸ್ ಆಸ್ಪತ್ರೆಗೆ ಕರೆತಂದಿದ್ದಾರೆ.
ಈ ವೇಳೆ ವೈದ್ಯರು ಪರಿಶೀಲಿಸಿ, ಹೊಟ್ಟೆ ಭಾಗದಲ್ಲಿ ಗಡ್ಡೆ ಇದ್ದಿದ್ದರಿಂದ ಸಿಟಿ-ಸ್ಕ್ಯಾನ್ ಮಾಡಿದ್ದರು. ಸ್ಕ್ಯಾನ್ ವರದಿಯಲ್ಲಿ ಕೂದಲು ಇರುವುದು ಪತ್ತೆಯಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಕೂದಲು ತೆಗೆಯಲಾಗಿದೆ.
ಮಕ್ಕಳ ಕ್ರಿಟಿಕಲ್ ಕೇರ್ ತಜ್ಞರಾದ ಡಾ.ಎಚ್.ಎಸ್.ಸುರೇಂದ್ರ ನೇತೃತ್ವದಲ್ಲಿ ಡಾ.ಪ್ರದೀಪ್, ಡಾ.ಹೇಮಾ, ಡಾ. ದೀಪ್ತಿ, ಡಾ.ಕೇಶವ ಮೂರ್ತಿ, ಡಾ.ಮಂಜುನಾಥ್ ಅವರನ್ನು ಒಳಗೊಂಡ ವಿವಿಧ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಾ.ಎಚ್.ಎಸ್. ಸುರೇಂದ್ರ ಅವರು, ಸುಮಾರು 3 ಕೆ.ಜಿ. ಅಷ್ಟು ಕೂದಲು ಸುರುಳಿ ಆಕಾರದಲ್ಲಿ ಸುತ್ತಿಕೊಂಡು ಬರೋಬ್ಬರಿ 35 ಸೆ.ಮೀ. ಉದ್ದದಷ್ಟು ಜಡೆ ಸೃಷ್ಟಿಯಾಗಿತ್ತು. ಹೊಟ್ಟೆ ಭಾಗದಲ್ಲಿ ಸಣ್ಣ ಕರಳಿನವರೆಗೂ ಕೂದಲಿನ ಗಡ್ಡೆ ವ್ಯಾಪಿಸಿತ್ತು. ಮೊದಲಿಗೆ ಎರಡು ಬಯೋಪ್ಸಿ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ಪ್ರಯತ್ನಿಸಿದರೂ ಕೂದಲು ತುಂಡಾಗುತ್ತಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿ ಪೂರ್ಣ ಪ್ರಮಾಣದಲ್ಲಿ ಕೂದಲಿನ ಗಡ್ಡೆ ತೆಗೆಯಲಾಗಿದೆ ಎಂದರು.
ಟ್ರೈಕೊ ಬೆಜೋರ್ ಎಂದರೆ ಕೂದಲು ನುಂಗುವ ಕಾಯಿಲೆ. ಕೆಲ ಮಹಿಳೆಯರಲ್ಲಿ ತಮ್ಮ ಕೂದಲು ಕಡಿದು ನುಂಗುವ ಕಾಯಿಲೆ ಇರುತ್ತದೆ. ಟ್ರೈಕೊಟಿಲೊಮೇನಿಯಾ (ಕೂದಲು ಕೀಳುವುದು) ಹಾಗೂ ಟ್ರೈಕೊ ಬೆಜಿಯಾ (ಕೂದಲು ನುಂಗುವುದು) ಎಂಬ ಮಾನಸಿಕ ಅನಾರೋಗ್ಯ ಉಳ್ಳವರಲ್ಲಿ ಇದು ಚಟವಾಗಿಬಿಟ್ಟಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ