
ಬೆಂಗಳೂರು (ನ.21): ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ಆರೋಪಿಗಳು ಕೆಲ ತಿಂಗಳ ಅವಧಿಯಲ್ಲಿ 127 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಸಾಟಗಾಟ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಗುರುವಾರ ಡಿಆರ್‌ಐ ಅಧಿಕಾರಿಗಳು ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ 350 ಪುಟಗಳ ದೂರಿನ ಪ್ರತಿ ಜತೆಗೆ 2,200 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಕಳ್ಳಸಾಗಣೆ ಮಾಡಿದ ಚಿನ್ನದ ಮೌಲ್ಯ 104 ಕೋಟಿ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ.
ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 14 ಕೆ.ಜಿ. ಚಿನ್ನದ ಗಟ್ಟಿಗಳನ್ನು ಸಾಗಿಸುವಾಗ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲ ಮಗಳು ರನ್ಯಾರನ್ನು ಡಿಆರ್‌ಐ ಅಧಿಕಾರಿಗಳು ಮಾ.3 ರಂದು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ನಂತರ ಈಕೆಯ ಸಹಚರರಾದ ತರುಣ್ ಕೆ ರಾಜು, ಸಾಹಿಲ್ ಸಕಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಬಂಧಿಸಲಾಗಿತ್ತು. ಇದೀಗ ತನಿಖೆ ಪೂರ್ಣಗೊಳಿಸಿರುವ ಡಿಆರ್‌ಐ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ನಟಿ ರನ್ಯಾರಾವ್ ತಮ್ಮ ಸಹಚರನಾದ ತರುಣ್ ಕೆ. ರಾಜು ಅವರ ಸಹಾಯದಿಂದ ದುಬೈನಿಂದ ಭಾರತಕ್ಕೆ ಚಿನ್ನ ಸಾಗಾಟ ಮಾಡಿದ್ದಾರೆ. ಸಾಹಿಲ್ ಸಕಾರಿಯಾ ಜೈನ್ ಮತ್ತು ಭರತ್ ಕುಮಾರ್ ಜೈನ್ ಅವರು ಆ ಚಿನ್ನ ಮಾರಾಟ ಮಾಡಿದ್ದಾರೆ ಎಂದು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ರನ್ಯಾ ರಾವ್ ಸೇರಿ ಇತರೆ ಆರೋಪಿಗಳು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಭರತ್ ಕುಮಾರ್ ಜೈನ್ ಹೊರತುಪಡಿಸಿ, ಆರೋಪಿಗಳಾದ ರನ್ಯಾ, ತರುಣ್ ಮತ್ತು ಸಾಹಿಲ್ ವಿರುದ್ಧ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ (ಕಾಫಿಪೋಸಾ) ಕಾಯ್ದೆ ಜಾರಿಗೊಳಿಸಲಾಗಿದೆ.
ರನ್ಯಾ ಮತ್ತು ತರುಣ್ ದುಬೈನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದಾರೆಂದು ಹೇಳಲಾದ ಚಿನ್ನವನ್ನು ದುಬೈ ಕಸ್ಟಮ್ಸ್‌ನಲ್ಲಿ ತರುಣ್ ಹೆಸರಿನಲ್ಲಿ ಜಿನೀವಾ ಅಥವಾ ಬ್ಯಾಂಕಾಕ್‌ಗೆ ಸಾಗಿಸಲಾಗಿತ್ತು. ದುಬೈ ಕಸ್ಟಮ್ಸ್‌ನಲ್ಲಿ ಪಾಸ್ ಆದ ನಂತರ, ತರುಣ್ ಚಿನ್ನವನ್ನು ರನ್ಯಾಗೆ ಹಸ್ತಾಂತರಿಸುತ್ತಿದ್ದ. ರನ್ಯಾ ರಾವ್ ಅದೇ ದಿನ ಪ್ರಯಾಣಿಸುತ್ತಿದ್ದರು. ದೇಶಕ್ಕೆ ಬಂದಿಳಿದ ನಂತರ, ರಾವ್ ಇತರ ಇಬ್ಬರು ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಿದ್ದಾರೆ. ಅಲ್ಲದೆ, ರನ್ಯಾ ರಾವ್ ದುಬೈನಲ್ಲಿ ‘ವೀರಾ ಡೈಮಂಡ್ಸ್’ ಎಂಬ ಕಂಪನಿ ನಡೆಸುತ್ತಿದ್ದರು. ಆ ಕಂಪನಿ ದುಬೈಗೆ ಚಿನ್ನ ಆಮದು ಮಾಡಿಕೊಂಡು ಭಾರತಕ್ಕೆ ಕಳ್ಳಸಾಗಣೆ ಮಾಡಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
102 ಕೋಟಿ ರು.ದಂಡ: 127 ಕೆ.ಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ಹವಾಲಾ ದಂಧೆ ನಡೆಸಿದ್ದಕ್ಕಾಗಿ ರನ್ಯಾಗೆ 102 ಕೋಟಿ ರು, ತರುಣ್ ರಾಜುಗೆ 62 ಕೋಟಿ ರು. ಮತ್ತು ಸಾಹಿಲ್ ಸಕಾರಿಯಾ ಮತ್ತು ಭರತ್ ಕುಮಾರ್‌ಗೆ ತಲಾ 53 ಕೋಟಿ ರು. ದಂಡ ವಿಧಿಸಲಾಗಿದೆ ಎಂದು ಡಿಆರ್‌ಐ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ