* ಬೆಳಗಾವಿಯಲ್ಲಿ ಅಟ್ಟಹಾಸ ಮೆರೆದಿರುವ ಎಂಇಎಸ್
* ಕೆರಳಿ ಕೆಂಡವಾದ ಕನ್ನಡಿಗರು
* ಸರ್ಕಾರಕ್ಕೆ ಗಡುವು ನೀಡಿದ ವಾಟಾಳ್
ಬೆಂಗಳೂರು, (ಡಿ.19): ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಪ್ರತಿಮೆ(Sangolli Rayanna Statue) ವಿರೂಪಗೊಳಿಸಿ ಸರ್ಕಾರಿ ವಾಹನಗಳನ್ನು ಜಖಂಗೊಳಿಸಿ ಅಟ್ಟಹಾಸ ಮೆರೆದಿರುವ ಎಂಇಎಸ್ (MES) ಮತ್ತು ಶಿವಸೇನೆಯ ಕಿಡಿಗೇಡಿ ಕೃತ್ಯಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡ ಧ್ವಜಕ್ಕೆ(Kannada Flag) ಬೆಂಕಿ ಇಟ್ಟಿದ್ದಲ್ಲದೇ ರಾಯಣ್ಣ ಪ್ರತಿಮೆ ಭಗ್ನಗೊಳಿಸಿರುವುದು ಕನ್ನಡಿಗರು ಕೆರಳಿ ಕೆಂಡವಾಗಿದ್ದು, ರಾಜ್ಯದಲ್ಲಿ ಎಂಇಎಸ್ ನಿಷಧಿಸುವಂತೆ ಒತ್ತಾಯಗಳು ಕೇಳಿಬರುತ್ತಿವೆ.
ಸರ್ಕಾರಕ್ಕೆ ಗಡುವು ನೀಡಿದ ವಾಟಾಳ್
ಎಂಇಎಸ್ ಸಂಘಟನೆಯನ್ನು ಎರಡು ದಿನದೊಳಗೆ ನಿಷೇಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ರಾಯಣ್ಣ ಪ್ರತಿಮೆ ಭಗ್ನ ಗೊಳಿ ಸಿರುವುದು ಸೇರಿದಂತೆ ನಿರಂತರ ನಾಡದ್ರೋಹಿ ಕೃತ್ಯ ವೆಸಗುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ಪ್ರವೀಣ್‍ಕುಮಾರ್ ಶೆಟ್ಟಿ ಮುಂತಾದವರ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿದ ಮುಖಂಡರು ಎರಡು ದಿನದೊಳಗೆ ಎಂಇಎಸ್ ಸಂಘಟನೆಯನ್ನು ನಿಷೇಸಬೇಕು ಇಲ್ಲದಿದ್ದರೆ ಕನ್ನಡಪರ ಸಂಘಟನೆಗಳೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.
ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮೈಸೂರು ಬ್ಯಾಂಕ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರ. ನಮ್ಮ ದೇಶದ ಆಸ್ತಿ, ಅವರ ಪ್ರತಿಮೆಯನ್ನು ವಿರೂಪಗೊಳಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಎಂಇಎಸ್‍ನವರು ಧಕ್ಕೆ ತಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನದೊಳಗೆ ಈ ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು. ಪ್ರವೀಣ್‍ಕುಮಾರ್ ಶೆಟ್ಟಿ, ಸಾ.ರಾ.ಗೋವಿಂದು, ಮಂಜುನಾಥ್ ದೇವು, ಗಿರೀಶ್ ಗೌಡ ಸೇರಿದಂತೆ ವಿವಿಧ ಮುಖಂಡರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ನಾವೆಲ್ಲರೂ ನಾಡದ್ರೋಹಿಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಎಂಇಎಸ್ ನಿಷೇಧಕ್ಕೆ ಚಿಂತನೆ ನಡೆದಿದೆ ಎಂದ ಪ್ರಭು ಚವ್ಹಾಣ್
ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದು, ಎಂಇಎಸ್ ನಿಷೇಧ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಹುಬ್ಬಳ್ಳಿಯ ಸಿದ್ದಾರೂಢ ಮಠದ ಉಭಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠದ ಗೋ ಶಾಲೆಗೂ ಭೇಟಿ ನೀಡಿ ಪೂಜೆ ನಡೆಸಿದ ನಂತರ ಮಾತನಾಡಿದ ಅವರು, ಕರ್ನಾಟಕ ನಮ್ಮ ತಾಯಿ, ತಾಯಿಯ ರಕ್ಷಣೆ ಎಲ್ಲ ಮಕ್ಕಳ ಜವಾಬ್ದಾರಿ, ಗಡಿನಾಡಿನಲ್ಲಿ ಕನ್ನಡ ಉಳಿಸುವ ಕೆಲಸ ಮಾಡಲಾಗುತ್ತಿದೆ. ಆದರೆ ಎಂಇಎಸ್ ಪುಂಡಾಟ ಹೆಚ್ಚಾಗುತ್ತಿದೆ. ಈಗಾಗಲೇ ಸದನದಲ್ಲಿ ಈ ವಿಷಯ ಚರ್ಚೆಯಾಗಿದೆ. ಅವರ ಆಟಕ್ಕೆ ಸರ್ಕಾರ ಬ್ರೇಕ್ ಹಾಕಲಿದೆ. ಈಗಾಗಲೇ ಎಂಇಎಸ್ ನಿಷೇಧ ಮಾಡುವ ವಿಚಾರ ಚರ್ಚೆ ನಡೆಯುತ್ತಿದೆ ಎಂದರು.