ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?

Published : Dec 19, 2025, 07:55 AM IST
Belagavi Secret Meet Siddaramaiahs AHINDA Camp Plots Strategy to Retain CM Pos

ಸಾರಾಂಶ

ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಆಪ್ತ ಸಚಿವರು ರಹಸ್ಯ ಸಭೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡದಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದು, ಹೈಕಮಾಂಡ್ ಮೇಲೆ ಒತ್ತಡ ತರಲು 'ಪತ್ರ ಚಳುವಳಿ' ಹಾಗೂ ಬೃಹತ್ 'ಅಹಿಂದ' ಸಮಾವೇಶ ನಡೆಸಲು ನಿರ್ಧಾರ.

ಬೆಳಗಾವಿ (ಡಿ.19): ಬೆಳಗಾವಿಯ ಚಳಿಗಾಲದ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಬೆಳಗಾವಿಯ ಕುವೆಂಪು ನಗರದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಚಿವರ ದಂಡು 'ಡಿನ್ನರ್ ಮೀಟಿಂಗ್' ನಡೆಸಿದೆ. ಈ ಸಭೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರಾದ ಡಾ ಜಿ. ಪರಮೇಶ್ವರ್, ಎಚ್ ಸಿ ಮಹಾದೇವಪ್ಪ, ಜಮೀರ್ ಅಹ್ಮದ್ ಖಾನ್, ಎಂ.ಸಿ. ಸುಧಾಕರ್ ಹಾಗೂ ಶಾಸಕ ಎಎಸ್ ಪೊನ್ನಣ್ಣ ಭಾಗವಹಿಸಿದ್ದು, ಮುಂದಿನ ರಾಜಕೀಯ ನಡೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.

ಸಿಎಂ ಸ್ಥಾನ ಬಿಟ್ಟುಕೊಡದಂತೆ ಸಿದ್ದರಾಮಯ್ಯ ಮೇಲೆ ಒತ್ತಡ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಕ್ಷಣದಲ್ಲಿ ಹೈಕಮಾಂಡ್‌ನಿಂದ ಬುಲಾವ್ ಬರುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಡಿ ಎಂದು ಆಪ್ತ ಸಚಿವರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಕಾಂಗ್ರೆಸ್‌ನ ಸಾಂಪ್ರದಾಯಿಕ 'ಅಹಿಂದ' ಮತಬ್ಯಾಂಕ್ ಕೈತಪ್ಪಲಿದೆ ಎಂಬ ಆತಂಕವನ್ನು ಹೈಕಮಾಂಡ್ ಗಮನಕ್ಕೆ ತರಲು ನಿರ್ಧರಿಸಲಾಗಿದೆ. ಬಹುತೇಕ ಶಾಸಕರು ಮತ್ತು ಅಹಿಂದ ಸಚಿವರು ನಿಮ್ಮ ಪರವಾಗಿದ್ದಾರೆ ಎಂಬ ಸಂದೇಶವನ್ನು ವರಿಷ್ಠರಿಗೆ ಬಲವಾಗಿ ರವಾನಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಹುಲ್ ಗಾಂಧಿಗೆ ಕೆಎನ್ ರಾಜಣ್ಣ ಪತ್ರ

ಈಗಾಗಲೇ ಸಚಿವ ಕೆಎನ್ ರಾಜಣ್ಣ ಅವರು ರಾಹುಲ್ ಗಾಂಧಿಯವರಿಗೆ ನಾಲ್ಕು ಬಾರಿ ಪತ್ರ ಬರೆದು, ಸಿದ್ದರಾಮಯ್ಯ ಅವರನ್ನು ಬದಲಿಸಿದರೆ ಆಗುವ ನಷ್ಟಗಳ ಬಗ್ಗೆ ವಿವರಿಸಿದ್ದಾರೆ. ಇದೇ ಹಾದಿಯಲ್ಲಿ ಈಗ ಉಳಿದ ಎಲ್ಲ ಅಹಿಂದ ಸಚಿವರು ಮತ್ತು ಶಾಸಕರು ಸೇರಿ 'ಪತ್ರ ಚಳುವಳಿ' ಆರಂಭಿಸಲು ಸಜ್ಜಾಗಿದ್ದಾರೆ. ಸಾಮೂಹಿಕವಾಗಿ ಪತ್ರ ಬರೆಯುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿ, ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಭದ್ರತೆ ಒದಗಿಸುವುದು ಈ ರಣತಂತ್ರದ ಮುಖ್ಯ ಉದ್ದೇಶವಾಗಿದೆ.

ಜನವರಿಯಲ್ಲಿ ಬೃಹತ್ 'ಸಿದ್ದರಾಮೋತ್ಸವ' ಮಾದರಿ ಸಮಾವೇಶ

ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಸಾಬೀತುಪಡಿಸಲು ಜನವರಿ ತಿಂಗಳಲ್ಲಿ ದಾವಣಗೆರೆಯ 'ಸಿದ್ದರಾಮೋತ್ಸವ' ಮಾದರಿಯಲ್ಲೇ ಬೃಹತ್ ಅಹಿಂದ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಲಕ್ಷಾಂತರ ಜನರನ್ನು ಒಗ್ಗೂಡಿಸಿ, ರಾಜ್ಯದ ಜನತೆ ಇಂದಿಗೂ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ ಎಂಬ ಶಕ್ತಿ ಪ್ರದರ್ಶನ ಮಾಡುವುದು ಇದರ ಗುರಿ. ಅಹಿಂದ ಒಕ್ಕೂಟ ಆಯೋಜಿಸುವ ಈ ಸಮಾವೇಶಕ್ಕೆ ತನು-ಮನ-ಧನದಿಂದ ಬೆಂಬಲ ನೀಡಿ ಯಶಸ್ವಿಗೊಳಿಸಲು ಸಚಿವರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಡಿಕೆಶಿಗೆ ಕೌಂಟರ್: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಬೇಡಿಕೆ?

ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಅವರಿಗೆ ಕೌಂಟರ್ ನೀಡಲು ಸಿದ್ದರಾಮಯ್ಯ ಬಣ ಹೊಸ ಪ್ಲಾನ್ ರೂಪಿಸಿದೆ. ಸಿಎಂ ಹುದ್ದೆಯ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಮ್ಮ ಬಣಕ್ಕೆ ಪಡೆದುಕೊಳ್ಳಲು ಪ್ರಯತ್ನಿಸೋಣ ಎಂಬ ಚರ್ಚೆ ಸಭೆಯಲ್ಲಿ ನಡೆದಿದೆ. ಆ ಮೂಲಕ ಸರ್ಕಾರ ಮತ್ತು ಸಂಘಟನೆ ಎರಡರ ಮೇಲೂ ಹಿಡಿತ ಸಾಧಿಸಿ, ವಿರೋಧಿ ಬಣಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಅಹಿಂದ ನಾಯಕರು ರಣಕಹಳೆ ಮೊಳಗಿಸಿದ್ದಾರೆ.

ಮುಂದಿನ ನಡೆ ಏನು?

ಈ ರಹಸ್ಯ ಸಭೆಯ ಬೆನ್ನಲ್ಲೇ ಹೈಕಮಾಂಡ್ ಈ ಬೆಳವಣಿಗೆಯನ್ನು ಹೇಗೆ ಸ್ವೀಕರಿಸುತ್ತದೆ ಮತ್ತು ಡಿಕೆ ಶಿವಕುಮಾರ್ ಬಣ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂಬುದು ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸದನದಲ್ಲಿ Siddaramaiah vs Arvind Bellad ಒಳಮೀಸಲು ಹೆಚ್ಚಳ ಜಟಾಪಟಿ! ಯತ್ನಾಳ್‌ಗೆ ಸಿಎಂ ಸಂವಿಧಾನ ಪಾಠ
Glanders Disease Scare: ಮಾರಕ ರೋಗದ ಭೀತಿ, ರೇಸ್ ಕೋರ್ಸ್ ಸುತ್ತ ಕತ್ತೆ ಕುದುರೆ ಹೆಸರಗತ್ತೆ ಓಡಾಟಕ್ಕೆ ನಿರ್ಬಂಧ!