
ಬೆಂಗಳೂರು : ಹಿಂದಿ-ಇಂಗ್ಲಿಷ್‌ನಲ್ಲೇ ನಡೆಸಲುದ್ದೇಶಿಸಿದ್ದ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಗೂಡ್ಸ್ ಟ್ರೈನ್ ವ್ಯವಸ್ಥಾಪಕ ಹುದ್ದೆಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ವಿಭಾಗದಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ-ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯುವಂತೆ ಇಲಾಖೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿತ್ತು. ಇದೀಗ ವಿರೋಧದ ಹಿನ್ನೆಲೆಯಲ್ಲಿ ಕನ್ನಡವನ್ನೂ ಸೇರ್ಪಡೆ ಮಾಡಿ ಹೊಸದಾಗಿ ಅಧಿಸೂಚನೆ ಹೊರಡಿಸಲು ಸಚಿವರು ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
‘ಕನ್ನಡಪ್ರಭ’ ಗುರುವಾರ ದಾಖಲೆ ಸಮೇತ ಈ ಕುರಿತು ವರದಿ ಪ್ರಕಟಿಸಿತ್ತು. ‘ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್’ ವರದಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಧೋರಣೆಗೆ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಅಧಿಸೂಚನೆ ರದ್ದುಪಡಿಸದಿದ್ದರೆ ಪರೀಕ್ಷೆ ನಡೆಸಲು ಬಿಡದೆ ಹೋರಾಟ ನಡೆಸುವುದಾಗಿ ಕೆಲ ಸಂಘಟನೆಗಳು ಎಚ್ಚರಿಕೆಯನ್ನೂ ನೀಡಿದ್ದವು.
ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗೆ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ 101, ಮೈಸೂರು 56 ಹುದ್ದೆಗಳಿಗೆ ಹೊರಡಿಸಲಾಗಿರುವ ಪರೀಕ್ಷಾ ಅಧಿಸೂಚನೆಯಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ ಹೀಗೆ ತ್ರಿಭಾಷೆಗೆ ಅವಕಾಶ ನೀಡಲಾಗಿದೆ. ಆದರೆ, ಬೆಂಗಳೂರು ವಿಭಾಗದಲ್ಲಿ 317 ಹುದ್ದೆ ಪರೀಕ್ಷೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.
ಈ ಸಂಬಂಧ ಬುಧವಾರ ರೈಲ್ವೆ ಇಲಾಖೆ ಮೇಲಧಿಕಾರಿಗಳ ಜತೆಗೆ ಸಭೆ ನಡೆಸಿರುವ ಸಚಿವ ವಿ.ಸೋಮಣ್ಣ, ಗೂಡ್ಸ್ ಟ್ರೈನ್ ವ್ಯವಸ್ಥಾಪಕ ಹುದ್ದೆಗೆ ಹೊರಡಿಸಲಾಗಿರುವ ಪರೀಕ್ಷೆ ಅಧಿಸೂಚನೆ ರದ್ದುಪಡಿಸಿ, ಕನ್ನಡ ಸೇರ್ಪಡೆ ಮಾಡಿ ಹೊಸದಾಗಿ ಅಧಿಸೂಚನೆ ಹೊರಡಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ವಿಭಾಗದ ಗೂಡ್ಸ್ ರೈಲು ವ್ಯವಸ್ಥಾಪಕ ಹುದ್ದೆಗೆ ಹಿಂದಿ- ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಯುತ್ತಿರುವ ಕುರಿತು ‘ಕನ್ನಡಪ್ರಭ’ ನಿನ್ನೆ ವರದಿ ಮಾಡಿತ್ತು. ರೈಲ್ವೆ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ