* ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದ ಪ್ರೊಫೆಸರ್ ಕ್ಷಮೆಯಾಚನೆ
• ಬೆಳಗಾವಿಯ ಆರ್‌ಪಿಡಿ ವೃತ್ತಕ್ಕೆ ವೀರ ಮದಕರಿ ನಾಯಕ ಹೆಸರಿಡಲು ಆಗ್ರಹ
• 'ವೀರ ಮದಕರಿ ನಾಯಕರಿಗೂ ಬೆಳಗಾವಿಗೂ ಏನ್ ಸಂಬಂಧ' ಎಂದು ಕಮೆಂಟ್ ಮಾಡಿದ್ದ ಪ್ರೊಫೆಸರ್
• ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಭಿಯಾನ ಆರಂಭಿಸಿದ್ದ ಕನ್ನಡಿಗ ಯುವಕರು
ಬೆಳಗಾವಿ, (ಜುಲೈ.08): ರಾಜ ವೀರ ಮದಕರಿ ನಾಯಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಕಮೆಂಟ್ ಹಾಕಿದ್ದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಕ್ಷಮೆಯಾಚಿಸಿದ್ದಾರೆ. ಬೆಳಗಾವಿಯ ಆರ್‌ಪಿಡಿ ವೃತ್ತಕ್ಕೆ ರಾಜ ವೀರ ಮದಕರಿ ನಾಯಕ ಅಂತಾ ಹೆಸರಿಡಬೇಕು ಎಂದು ಹಲವು ದಿನಗಳಿಂದ ಹೋರಾಟ ನಡೆಯುತ್ತಿದೆ. ಈ ಸಂಬಂಧ ಸರ್ಕಾರಕ್ಕೂ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.
ಮಹಾರಾಷ್ಟ್ರದ ಸಾವಂತವಾಡಿಯ 'ರಾಣಿ ಪಾರ್ವತಿ ದೇವಿ' ಸುಮಾರು ನೂರು ಎಕರೆಯಷ್ಟು ಜಮೀನನ್ನು ಬೆಳಗಾವಿಯ ಶಿಕ್ಷಣ ಸಂಸ್ಥೆಗೆ ದಾನ ನೀಡಿದ್ದರು. ಹೀಗಾಗಿ ರಾಣಿ ಪಾರ್ವತಿ ದೇವಿ ಕಾಲೇಜು ಬಳಿಯ ವೃತ್ತಕ್ಕೆ ಆರ್‌ಪಿಡಿ(ರಾಣಿ ಪಾರ್ವತಿ ದೇವಿ) ವೃತ್ತ ಎಂದು ಹಲವು ವರ್ಷಗಳಿಂದ ಕರೆಯಲಾಗುತ್ತಿದೆ. ಈ ವೃತ್ತಕ್ಕೆ ರಾಜ ವೀರ ಮದಕರಿ ನಾಯಕ ಹೆಸರಿಡಬೇಕೆಂದು ಹಲವು ದಿನಗಳಿಂದ ಕನ್ನಡಪರ ಸೇರಿ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿವೆ.
Chikkodi ಶಾಲೆಗೆ ಹೋದ ಬಾಲಕಿ ಹೆಣವಾದಳು, ಮುಖ್ಯ ಶಿಕ್ಷಕ ಅಮಾನತು
ಈ ಬಗ್ಗೆ ಫೇಸ್‌ಬುಕ್ ಪೇಜ್‌ವೊಂದರಲ್ಲಿ ಬೆಳಗಾವಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಅಭಿಜಿತ್ ಬೈಕೇರಿಕರ್ ಎಂಬುವರು ಆಕ್ಷೇಪಾರ್ಹ ಕಮೆಂಟ್ ಮಾಡಿದ್ದರು. 'ಬೆಳಗಾವಿಗೂ ವೀರ ಮದಕರಿ ನಾಯಕರಿಗೂ ಏನ್ ಸಂಬಂಧ? ಬೆಳಗಾವಿಗರ ಪಾಲಿಗೆ ಇದು ಆರ್‌ಪಿಡಿ ವೃತ್ತವೇ ಆಗಿರುತ್ತೆ. ಬೆಳಗಾವಿ ಮಹಾನಗರ ಪಾಲಿಕೆಗೆ ವೃತ್ತದ ಬಳಿಯ ಚರಂಡಿ ವ್ಯವಸ್ಥೆ ಸರಿಪಡಿಸಲಾಗುತ್ತಿಲ್ಲ. ಈಗ ವೃತ್ತದ ಮರುನಾಮಕರಣ ಮಾಡ್ತಾರಂತೆ, ವಾಟ್ ಎ ಜೋಕ್' ಎಂದು ಪ್ರೊಫೆಸರ್ ಅಭಿಜಿತ್ ಬೈಕೇರಿಕರ್ ಕಮೆಂಟ್ ಮಾಡಿದ್ದರು. ಪ್ರೊಫೆಸರ್ ಅಭಿಜಿತ್ ಮಾಡಿದ್ದ ಈ ಕಮೆಂಟ್‌ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
'Remove_Abhijeet' ಅಭಿಯಾನ ಆರಂಭಿಸಿದ್ದ ಕನ್ನಡಿಗ ಯುವಕರು
ರಾಜ ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಮೆಂಟ್ ಮಾಡಿದ್ದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗ ಯುವಕರು 'Remove_Abhijeet' ಹ್ಯಾಷ್‌ಟ್ಯಾಗ್‌ನಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಕ್ಷೇಪಾರ್ಹ ಕಮೆಂಟ್ ಮಾಡಿದ್ದ ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಕೊನೆಗೂ ಖಾಸಗಿ ಪ್ರೊಫೆಸರ್ ಕ್ಷಮೆಯಾಚನೆ
ಪ್ರೊಫೆಸರ್ ಅಭಿಜಿತ್ ವಿರುದ್ಧ ಕ್ರಮಕ್ಕೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ(ರಿ) ಬೆಳಗಾವಿ ಘಟಕ ಆಗ್ರಹಿಸಿತ್ತು.ಈ ಸಂಬಂಧ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾಗಿ ಸಂಘಟನೆ ಸದಸ್ಯರು ಮನವಿ ಸಲ್ಲಿಸಿದ್ದರು. ಸಂಘಟನೆ ಒತ್ತಾಯ ಬೆನ್ನಲ್ಲೇ ಪ್ರೊಫೆಸರ್ ಅಭಿಜಿತ್ ಬೈಕೇರಿಕರ್ ತಾವು ಮಾಡಿದ ಆಕ್ಷೇಪಾರ್ಹ ಕಮೆಂಟ್‌ಗೆ ಕ್ಷಮೆಯಾಚಿಸಿದ್ದಾರೆ.