ಮತ್ತೆ ರೈತಗೆ ಎಕ್ಸಿಸ್‌ ಕೋಲ್ಕತಾ ವಾರಂಟ್‌!

By Web DeskFirst Published Feb 7, 2019, 8:40 AM IST
Highlights

ಟ್ರ್ಯಾಕ್ಟರ್‌ ಸಾಲ ಪಡೆದಿದ್ದ ಮತ್ತೊಬ್ಬ ರೈತನ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಎಕ್ಸಿಸ್‌ ಬ್ಯಾಂಕ್‌ ಕೋಲ್ಕತಾ ನ್ಯಾಯಾಲಯ (ಮೆಟ್ರೊಪಾಲಿಟಿನ್‌)ದಿಂದ ಅರೆಸ್ಟ್‌ ವಾರಂಟ್‌ ಕಳುಹಿಸಿದೆ. 

ಬೆಳಗಾವಿ :  ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದು, ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದರೂ ಎಕ್ಸಿಸ್‌ ಬ್ಯಾಂಕ್‌ ತನ್ನ ಹಳೆಯ ಚಾಳಿ ಮುಂದುವರಿಸಿದೆ. 

ಟ್ರ್ಯಾಕ್ಟರ್‌ ಸಾಲ ಪಡೆದಿದ್ದ ಮತ್ತೊಬ್ಬ ರೈತನ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ ಎಕ್ಸಿಸ್‌ ಬ್ಯಾಂಕ್‌ ಕೋಲ್ಕತಾ ನ್ಯಾಯಾಲಯ (ಮೆಟ್ರೊಪಾಲಿಟಿನ್‌)ದಿಂದ ಅರೆಸ್ಟ್‌ ವಾರಂಟ್‌ ಕಳುಹಿಸಿದೆ. ಫೆ.18ರಂದು ಹಾಜರಾಗುವಂತೆ ವಾರಂಟ್‌ನಲ್ಲಿ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಟಿಳಕವಾಡಿಯಲ್ಲಿರುವ ಶಾಖೆಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

ರಾಮದುರ್ಗ ತಾಲೂಕಿನ ಎಂ.ಚಂದರಗಿ ಗ್ರಾಮದ ಸಂಗಪ್ಪ ವೀರಭದ್ರಪ್ಪ ಅಡಗಿಮನಿ ಎಂಬುವರಿಗೆ ಈ ಬಂಧನ ವಾರಂಟ್‌ ಅನ್ನು ಎಕ್ಸಿಸ್‌ ಬ್ಯಾಂಕ್‌ ಹೊರಡಿಸಿದೆ.

ರೈತರ ಪ್ರತಿಭಟನೆ: ಮುಖ್ಯಮಂತ್ರಿ ಸೂಚನೆ, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಈ ಹಿಂದೆ ನಡೆಸಿದ ಮಾತುಕತೆ ಬಳಿಕ ನೀಡಿದ್ದ ಭರವಸೆಯ ಹೊರತಾಗಿಯೂ ಮತ್ತೆ ಎಕ್ಸಿಸ್‌ ಬ್ಯಾಂಕ್‌ ಹೊರಡಿಸಿರುವ ಈ ಅರೆಸ್ಟ್‌ ವಾರಂಟ್‌ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ನಗರದ ಟಿಳಕವಾಡಿ ಪ್ರದೇಶದಲ್ಲಿರುವ ಎಕ್ಸಿಸ್‌ ಬ್ಯಾಂಕ್‌ನ ಮುಖ್ಯಶಾಖೆಗೆ ಬುಧವಾರ ಘೇರಾವ್‌ ಹಾಕಿದ ರೈತರು ಪ್ರತಿಭಟನೆ ನಡೆಸಿದರು.

14 ವರ್ಷದ ಸಾಲ: 2005ರಲ್ಲಿ ಟ್ರ್ಯಾಕ್ಟರ್‌ ತೆಗೆದುಕೊಳ್ಳಲು ಎಕ್ಸಿಸ್‌ ಬ್ಯಾಂಕ್‌ನಿಂದ ರೈತ ಸಂಗಪ್ಪ ಅಡಗಿಮನಿ ಅವರು .4 ಲಕ್ಷ ಸಾಲ ಪಡೆದುಕೊಂಡಿದ್ದರು. ನಂತರ ನಾನಾ ಕಾರಣಗಳಿಂದಾಗಿ ಸಾಲದ ಕಂತುಗಳನ್ನು ಪಾವತಿಸುವಲ್ಲಿ ಅಡಗಿಮನಿ ವಿಫಲವಾಗಿದ್ದರು. ಈ ಹಿನ್ನೆಲೆಯಲ್ಲಿ 2009ರಲ್ಲಿ ಟ್ರ್ಯಾಕ್ಟರ್‌, ಟಿಲ್ಲರ್‌ ಸೇರಿ ಇನ್ನಿತರೆ ವಸ್ತುಗಳನ್ನು ಬ್ಯಾಂಕ್‌ನವರು ಮುಟ್ಟುಗೋಲು ಹಾಕಿ, ಟ್ರ್ಯಾಕ್ಟರ್‌ ಅನ್ನು .2.20 ಲಕ್ಷಕ್ಕೆ ಹರಾಜು ಹಾಕಿದ್ದರು.

ಇದಾದ ಬೆನ್ನಲ್ಲೇ ಬ್ಯಾಂಕ್‌ ಸಿಬ್ಬಂದಿ ಸಾಲ ಪಡೆದಿದ್ದ ರೈತ ಸಂಗಪ್ಪ ಅಡಗಿಮನಿ ವಿರುದ್ಧ .4.90 ಲಕ್ಷದ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿ ಕೆಲದಿನಗಳ ಹಿಂದೆ ಕೋಲ್ಕತಾ ನ್ಯಾಯಾಲಯದಿಂದ ಬಂಧನ ವಾರಂಟ್‌ ಹೊರಡಿಸಿದ್ದಾರೆ. ಈಗ ನ್ಯಾಯಾಲಯ ಸಾಲ ಪಡೆದ ರೈತನನ್ನು ಫೆ.18 ರೊಳಗಾಗಿ ಬಂಧಿಸಿ, ನ್ಯಾಯಾಲಯಕ್ಕೆ ಕರೆತರುವಂತೆ ಸೂಚಿಸಿದೆ.

ಬ್ಯಾಂಕ್‌ಗೆ ಬಾಗಿಲು: ಮತ್ತೆ ಅರೆಸ್ಟ್‌ ವಾರಂಟ್‌ ಹೊರಡಿಸಿದ್ದರಿಂದ ಆಕ್ರೋಶಗೊಂಡ ಸುಮಾರು 60ಕ್ಕೂ ಹೆಚ್ಚು ರೈತರು ನಗರದ ಟಿಳಕವಾಡಿ ಪ್ರದೇಶದಲ್ಲಿರುವ ಎಕ್ಸಿಸ್‌ ಬ್ಯಾಂಕ್‌ನ ಮುಖ್ಯಶಾಖೆಯ ಬಾಗಿಲನ್ನು ಸುಮಾರು ಮೂರು ಗಂಟೆಗಳ ಕಾಲ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಬ್ಯಾಂಕ್‌ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಕೆಲವರು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಬಿ.ಬೂದೇಪ್ಪ ಅವರಿಗೆ ಮುತ್ತಿಗೆ ಹಾಕಿ, ಬ್ಯಾಂಕ್‌ ಹಾಗೂ ಜಿಲ್ಲಾಡಳಿತ ನಡೆ ವಿರುದ್ಧ ಕಿಡಿಕಾರಿದರು.

ಅಧಿಕಾರಿಗಳ ತರಾಟೆ: ರೈತರು ಮುತ್ತಿಗೆ ಹಾಕುತ್ತಿದ್ದಂತೆ ಅಪರ ಜಿಲ್ಲಾಧಿಕಾರಿಗಳು ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ವಾರಂಟ್‌ಗೆ ಸಂಬಂಧಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಖಡಕ್‌ ಎಚ್ಚರಿಕೆ ನೀಡಿದರು. ಜತೆಗೆ, ರೈತರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಬೆಳಗಾವಿ ತಾಲೂಕು ತಹಸೀಲ್ದಾರರಿಗೂ ಸೂಚಿಸಿದರು.

ವಾಪಸ್‌ಪಡೀತೇವೆ: ಅಪರ ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ತಕ್ಷಣ ಬ್ಯಾಂಕ್‌ಗೆ ದೌಡಾಯಿಸಿದ ತಹಸೀಲ್ದಾರ್‌ ಅವರು ಬ್ಯಾಂಕ್‌ ಸಿಬ್ಬಂದಿಯೊಂದಿಗೆ ವಿವರ ಪಡೆದರು. ಈ ವೇಳೆ ಬ್ಯಾಂಕ್‌ ಅಧಿಕಾರಿಗಳು ಇದು ಅಚಾತುರ್ಯದಿಂದ ಆದ ಪ್ರಕರಣ. ರೈತರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ, ಈಗಾಗಲೇ ಎಲ್ಲ ರೈತರ ಮೇಲಿನ ಪ್ರಕರಣವನ್ನು ಕೋಲ್ಕತಾ ನ್ಯಾಯಾಲಯದಿಂದ ಹಿಂಪಡೆದುಕೊಳ್ಳಲಾಗಿದೆ. ಈ ವಾರಂಟ್‌ ಅನ್ನೂ ಹಿಂಪಡೆದುಕೊಳ್ಳುವುದಾಗಿ ಬ್ಯಾಂಕ್‌ ಅಧಿಕಾರಿಗಳು ಭರವಸೆ ನೀಡಿದರು.

ಒಬ್ಬ ರೈತನಿಗೆ ಅರೆಸ್ಟ್‌ ವಾರಂಟ್‌ ಬಂದಿದ್ದರಿಂದ ರೈತರು ಬ್ಯಾಂಕ್‌ಗೆ ಮುತ್ತಿಗೆ ಹಾಕಿದ್ದಾರೆ. ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಲಾಗಿದೆ.

- ಡಾ. ಎಚ್‌.ಬಿ.ಬೂದೇಪ್ಪ, ಅಪರ ಜಿಲ್ಲಾಧಿಕಾರಿ, ಬೆಳಗಾವಿ

 

ಇದು ಅಚಾತುರ್ಯದಿಂದ ಆದ ಪ್ರಕರಣ. ರೈತರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ, ಈಗಾಗಲೇ ಎಲ್ಲ ರೈತರ ಮೇಲಿನ ಪ್ರಕರಣವನ್ನು ಕೋಲ್ಕತಾ ನ್ಯಾಯಾಲಯದಿಂದ ಹಿಂಪಡೆದುಕೊಳ್ಳಲಾಗಿದೆ. ಈ ವಾರಂಟ್‌ ಅನ್ನೂ ಹಿಂಪಡೆದುಕೊಳ್ಳುತ್ತೇವೆ.

- ಎಕ್ಸಿಸ್‌ ಬ್ಯಾಂಕ್‌ ಅಧಿಕಾರಿಗಳ ಭರವಸೆ

click me!