ಬೆಳಗಾವಿಯಲ್ಲಿ ಸೈಬರ್ ವಂಚಕರ ಬೆದರಿಕೆಗೆ ಹೆದರಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ 6 ಲಕ್ಷ ರೂ. ಪಡೆದರೂ ಮತ್ತೆ ಹಣಕ್ಕಾಗಿ ಪೀಡಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ (ಮಾ.28): ಜೀವಮಾನವಿಡೀ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಜೀವನ ನಡೆಸುತ್ತಿದ್ದ ವೃದ್ಧ ದಂಪತಿಗೆ ಕರೆ ಮಾಡಿ ನಿಮ್ಮ ನಗ್ನ ಚಿತ್ರಗಳಿವೆ ಎಂದು ಸೈಬರ್ ವಂಚಕರು ಬೆದರಿಕೆ ಹಾಕಿದ್ದಾರೆ. ಸೈಬರ್ ವಂಚಕರ ಬೆದರಿಕೆಯಿಂದ ಮರ್ಯಾದೆಗೆ ಅಂಜಿದ ವೃದ್ಧ ದಂಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ವಿಡಿಯೋ ಕಾಲ್ ಮಾಡಿ ನಗ್ನ ಚಿತ್ರಗಳಿವೆ ಎಂದು ಬೆದರಿಕೆ ಹಾಕಿದ್ದರಿಂದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83), ಪಾವಿಯಾ ನಜರತ್ (79) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಕಳೆದೊಂದು ತಿಂಗಳಿಂದ ವೃದ್ಧ ದಂಪತಿ ಬೆನ್ನು ಬಿದ್ದಿದ್ದ ಸೈಬರ್ ಖದೀಮರು. ತಾವು ಪೊಲೀಸರು ಎಂದು ಹೇಳಿಕೊಂಡು ನಿಮ್ಮ ನಗ್ನ ಚಿತ್ರಗಳಿವೆ ಎಂದು ವೃದ್ಧ ದಂಪತಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು 2025ರ ಬೆಸ್ಟ್ ಇಡ್ಲಿ, ದೋಸೆ, ಫಿಲ್ಟರ್ ಕಾಫಿ ಪ್ರಶಸ್ತಿ ಪ್ರದಾನ! ಯಾರಿಗೆ ಯಾವ ಅವಾರ್ಡ್ ಸಿಕ್ತು ನೋಡಿ!
ನಾವು ಕೇಳಿದಷ್ಟು ಹಣ ಕೊಡದಿದ್ದರೆ ನಿಮ್ಮ ನಗ್ನ ಚಿತ್ರಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದರು. ಮಾನ, ಮರ್ಯಾದೆಗೆ ಹೆದರಿದ್ದ ವೃದ್ಧ ದಂಪತಿ ತಮಗೆ ಬಂದಿದ್ದ ಪಿಂಚಣಿ ಹಣವನ್ನೆಲ್ಲಾ ಸಂಗ್ರಹಿಸಿ ಈಗಾಗಲೇ ಖದೀಮರ ಅಕೌಂಟ್‌ಗೆ 6 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದರು. ಹೀಗಿದ್ದರೂ ಮತ್ತಷ್ಟು ಹಣ ನೀಡುವಂತೆ ಪೀಡಿಸಲು ಶುರು ಮಾಡಿದ್ದರು. ಖದೀಮರ ಕಿರಿಕಿರಿಗೆ ಬೇಸತ್ತು ಅಜ್ಜಿ ಪಾವಿಯಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೃದ್ಧ ದಂಪತಿ ಒಬ್ಬರಿಗೊಬ್ಬರು ಆಸರೆಯಾಗಿದ್ದವರ ಪೈಕಿ ಪತ್ನಿ ಸಾವಿನ ಬೆನ್ನಲ್ಲಿಯೇ ಆಕೆತ ಗಂಡನೂ ಕೂಡ ಹತಾಶೆಯಿಂದ ಡೆತ್ ನೋಟ್ ಬರೆದಿಟ್ಟು ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಸಾವಿಗೆ ಶರಣಾಗಿದ್ದಾರೆ.
ಇನ್ನು ವೃದ್ಧ ದಂಪತಿ ಮನೆಗೆ ಬರುತ್ತಿದ್ದ ಸ್ವಸಹಾಯ ಸಂಘದ ಮಹಿಳೆ, ಎಷ್ಟು ಮಾತನಾಡಿಸಿದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮನೆಯ ಕಿಟಕಿಯಿಂದ ನೋಡಿದಾಗ ವೃದ್ಧ ದಂಪತಿ ಮೃತದೇಹ ಕಂಡುಬಂದಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ನಂದಗಡ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ವೃದ್ಧ ದಂಪತಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡೆತ್ ನೋಟ್‌ನಲ್ಲಿ ದಂಪತಿ ತಮ್ಮ ದೇಹವನ್ನು ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಗೆ ದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 110 ಗ್ರಾಂ ಬಂಗಾರದ ಜೊತೆಗೆ ಚಿನ್ನದಂಥ ಹೆಣ್ಣು ಕೊಟ್ಟರೂ ತೀರಲಿಲ್ಲ ವರದಕ್ಷಿಣೆ ದಾಹ! ಮಲೆನಾಡ ಮಹಿಳೆ ಸಾವು!