
ಬೆಂಗಳೂರು (ಅ.11): ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕೈಗೊಳ್ಳಬಾರದು, ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಬಾರದು ಎಂಬ ಒಕ್ಕೊರಲ ಆಗ್ರಹ ಶನಿವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾರ್ದನಿಸಿತು.
ಯೋಜನೆ ವಿರೋಧಿಸಿ ‘ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿಗಳು, ಪರಿಸರ ತಜ್ಞರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯ ನಾಗರಿಕರು, ‘ಪಶ್ಚಿಮ ಘಟ್ಟ ಉಳಿಯಬೇಕು.‘ಬೇಡ್ತಿ(ಗಂಗಾವಳಿ)-ವರದಾ’ ಹಾಗೂ ‘ಅಘನಾಶಿನಿ-ವೇದಾವತಿ’ ನದಿ ಜೋಡಣೆ ಯೋಜನೆಗಳನ್ನು ಕೈಬಿಡಬೇಕು. ಎಂತಹ ಸನ್ನಿವೇಶ ಸೃಷ್ಟಿಯಾದರೂ ಡಿಪಿಆರ್ ಕೈಗೊಳ್ಳಬಾರದು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ ಗಣ್ಯರು, ಯೋಜನೆಯಿಂದ ಜನ-ಜಾನುವಾರು, ಮೀನುಗಾರಿಕೆ ಸೇರಿ ಪ್ರಕೃತಿ ಮೇಲೆ ಉಂಟಾಗುವ ಅಪಾರ ದುಷ್ಪರಿಣಾಮಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದು, ಶತಾಯಗತಾಯ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿ, ಚಿತ್ರದುರ್ಗ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದವರೂ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಧರಣಿಗೆ ಬೆಂಬಲ ನೀಡಿದರು.
ಗುಲಾಬಿ ಬಣ್ಣದ ಶಲ್ಯಗಳನ್ನು ಹಾಕಿಕೊಂಡಿದ್ದ ಧರಣಿ ನಿರತರು, ‘ನದಿ ತಿರುವು ಬೇಡವೇ ಬೇಡ’, ‘ನೀರಿಲ್ಲದ ನದಿಯ ತಿರುವು ಏತಕೆ?‘, ‘ಬೇಡ್ತಿ ಬಿಡೆವು-ಅಘನಾಶಿನಿ ಕೊಡೆವು’, ‘ಉಳಿಸಿ ಉಳಿಸಿ ಉತ್ತರ ಕನ್ನಡ ಉಳಿಸಿ’, ‘ಪಶ್ಚಿಮಘಟ್ಟ ಉಳಿಸಿ’, ‘ನದಿ ಉಳಿಸಿ ಬದುಕು ಉಳಿಸಿ’, ‘ಹಸಿರೇ ಉಸಿರು-ನದಿಯೇ ಹಸಿರು’ ಸೇರಿ ಹಲವು ಘೋಷಣೆಗಳಿದ್ದ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿದರು.
ಪ್ರತಿಭಟನಾ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಶಾಸಕರಾದ ಭೀಮಣ್ಣ ನಾಯ್ಕ್, ಪರಿಸರ ಹೋರಾಟಗಾರ ಯಲ್ಲಪ್ಪ ರೆಡ್ಡಿ, ವಿಜ್ಞಾನಿ ಟಿ.ವಿ. ರಾಮಚಂದ್ರ, ಕಡಲಜೀವಿ ಶಾಸ್ತ್ರಜ್ಞ ಎ.ಎನ್, ನಾಯಕ್, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಗಿರಿಧರ ಕಜೆ, ಸಾಹಿತಿ ಜಯಂತ್ ಕಾಯ್ಕಿಣಿ, ಹಿರಿಯರಾದ ತೇಜಸ್ವಿನಿ ಅನಂತ್‌ಕುಮಾರ್, ಶಾಂತಾರಾಮ ಸಿದ್ಧಿ, ನಟರಾದ ನೀರ್ನಳ್ಳಿ ರಾಮಕೃಷ್ಣ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಸತೀಶ ಹೆಗಡೆ ಹುಳಗೋಳ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಡಿಪಿಆರ್ ಸ್ಥಗಿತಗೊಳಿಸುವುದು ಸೇರಿ 11 ನಿರ್ಣಯಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಯಿತು. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ 22 ಪ್ರಮುಖ ನದಿ ಕಣಿವೆಗಳ ಸಂರಕ್ಷಣೆಗೆ ಸರ್ಕಾರ ವಿಶೇಷ ಸುಸ್ಥಿರ ಯೋಜನೆ ರೂಪಿಸಬೇಕು. ಬೇಡ್ತಿ ಮತ್ತು ಅಘನಾಶಿನಿ ನದಿ ಕಣಿವೆಗಳ ನಾಲ್ಕು ಸ್ಥಳದಲ್ಲಿ ಅಣೆಕಟ್ಟು ಕಟ್ಟಿ ನೀರನ್ನು ಬೇರೆಡೆ ಸಾಗಿಸುವ ವಿನಾಶಕಾರಿ ಯೋಜನೆಯಿಂದ ಕಣಿವೆಗಳ ರೈತರು, ಮೀನುಗಾರರು, ವನವಾಸಿಗಳು ಸೇರಿ ಲಕ್ಷಾಂತರ ಜನರ ಬದುಕು ನಾಶವಾಗಲಿದೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ಎತ್ತಿನಹೊಳೆ ನದಿ ತಿರುವು ಯೋಜನೆಯಂತೆ ಬೇಡ್ತಿ-ಅಘನಾಶಿನಿ ನದಿಗಳ ದಿಕ್ಕು ತಿರುಗಿಸುವ ಯೋಜನೆಗಳು ವ್ಯರ್ಥವಾಗಲಿವೆ.
ಬೇಡ್ತಿ ನದಿಯಲ್ಲಿ ಹೆಚ್ಚುವರಿ ನೀರಿಲ್ಲ. ನದಿಗಳನ್ನು ತಿರುಗಿಸುವ ಹುಚ್ಚುಸಾಹಸ ನಡೆಸಿದರೆ ಬೇಡ್ತಿ-ಅಘನಾಶಿನಿ ಜೀವ ನದಿಗಳು ಸಾಯುತ್ತವೆ. ಪಶ್ಚಿಮಘಟ್ಟ ಈಗಾಗಲೇ ಭೂಕುಸಿತದ ಭಾರಿ ಅಪಾಯಗಳಿಗೆ ಸಿಲುಕಿದೆ. ಬೇಡ್ತಿ-ಅಘನಾಶಿನಿ ಕಣಿವೆಗಳು ಭೂಕುಸಿತ ಸೂಕ್ಷ್ಮ ವಲಯದಲ್ಲಿವೆ. ಇಲ್ಲಿ ನದಿ ಜೋಡಣೆಯಂತಹ ಬೃಹತ್ ಯೋಜನೆಯಿಂದ ಇಂತಹ ಅಪಾಯಗಳು ಇನ್ನಷ್ಟು ಹೆಚ್ಚಲಿವೆ. ಕರಾವಳಿ ಪ್ರದೇಶವಾದ ಕುಮಟಾ–ಅಂಕೋಲಾ ಪ್ರದೇಶದಲ್ಲಿ ನದಿ ತಿರುವು ಯೋಜನೆ ಜಾರಿಯಾದರೆ ಉಪ್ಪುನೀರು ಒಳನುಗ್ಗಲಿದೆ. ಮೀನುಗಾರಿಕೆ ಮತ್ತು ಕೃಷಿ ಬದುಕು ನಾಶವಾಗಲಿದೆ.
ಲಕ್ಷಾಂತರ ಗಿಡಮರಗಳ ನಾಶದಿಂದ ಬೃಹತ್ ಯೋಜನೆಗಳು ಪಶ್ಚಿಮ ಘಟ್ಟದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಲು ಕಾರಣವಾಗುತ್ತವೆ. ಅಮೂಲ್ಯ ಸಸ್ಯ–ವನ್ಯ ಸಂಪತ್ತು ಕಣ್ಮರೆಯಾಗಲಿದೆ. ಬೇಡ್ತಿ, ಅಘನಾಶಿನಿ ಮತ್ತು ಶಾಲ್ಮಲಾ ನದಿ ಕಣಿವೆಗಳನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ರಾಜ್ಯ ವನ್ಯಜೀವಿ ಇಲಾಖೆ 2012ರಲ್ಲಿ ಘೋಷಿಸಿದೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ರಾಜ್ಯ ಸರ್ಕಾರ ಕೈಗೊಂಡ ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣಾ ಸಾಮರ್ಥ್ಯ ಅಧ್ಯಯನವು ಬೃಹತ್ ಯೋಜನೆಗಳಿಗೆ ಸರಿಯಾಗುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಸುಸ್ಥಿರ ನೀರಾವರಿ ಯೋಜನೆಯನ್ನು ವಿನಾಶರಹಿತವಾಗಿ ರೂಪಿಸಬೇಕು.
ವಿಜ್ಞಾನಿಗಳು, ಸ್ಥಳೀಯ 120 ಗ್ರಾಪಂ, 160 ಗ್ರಾಮೀಣ ಸಹಕಾರ ಸಂಘಗಳು, ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆ ಹಾಗೂ ಎಲ್ಲ ಧಾರ್ಮಿಕ ಮುಖಂಡರು ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆಗಳನ್ನು ಕೈಬಿಡಬೇಕು ಮತ್ತು ಬೇಡ್ತಿ-ವರದಾ ಡಿಪಿಆರ್ ಕೆಲಸವನ್ನು ಸ್ಥಗಿತಗೊಳಿಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ