
ಬೆಂಗಳೂರು : ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಗುರುವಾರವೂ ರಾಜ್ಯದ ವಿವಿಧೆಡೆ 6 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕಬಾಗೇವಾಡಿಯಲ್ಲಿ ವೃದ್ಧನೊಬ್ಬನ ಮೇಲೆ, ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿಯಲ್ಲಿ 6 ವರ್ಷದ ಬಾಲಕಿ ಮೇಲೆ, ಕಲಬುರಗಿ ಜಿಲ್ಲೆಯ ಲಾಡ್ಲಾಪುರದಲ್ಲಿ ನಾಲ್ವರು ಬಾಲಕಿಯರ ಮೇಲೆ ನಾಯಿಗಳು ದಾಳಿ ನಡೆಸಿ, ಗಾಯಗೊಳಿಸಿವೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯಲ್ಲಿ ಗ್ರಾಮದ ನಾಗಪ್ಪಾ ಕೆಳಗೇರಿ ಎಂಬ ವೃದ್ಧನ ಮೇಲೆ ನಾಯಿ ದಾಳಿ ನಡೆಸಿದೆ. ಸ್ನೇಹಿತರೊಬ್ಬರ ಮನೆಗೆ ಭೇಟಿ ನೀಡಿ, ಮನೆಗೆ ವಾಪಸ್ಸಾಗುವಾಗ ಅವರ ಮೇಲೆ ನಾಯಿಯೊಂದು ದಾಳಿ ನಡೆಸಿದೆ. ಗಾಯಗೊಂಡ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಮಧ್ಯೆ, ಬೆಂಗಳೂರು ದಕ್ಷಿಣ ಜಿಲ್ಲೆ ಹಾರೋಹಳ್ಳಿ ಪಟ್ಟಣದ ಜನತಾ ಕಾಲೋನಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳ ಮೇಲೆ ಮೂರ್ನಾಲ್ಕು ಬೀದಿ ನಾಯಿಗಳು ದಾಳಿ ನಡೆಸಿದ್ದು, ಸುತ್ತಮುತ್ತಲಿನವರು ಆಗಮಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ, ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಶಾಲೆಯಿಂದ ಮರಳುತ್ತಿದ್ದ ನಾಲ್ವರು ಬಾಲಕಿಯರ ಮೇಲೆ ನಾಯಿಗಳು ದಾಳಿ ನಡೆಸಿವೆ. ಬಾಲಕಿಯರ ಕೈ, ತೋಳು, ಮುಖ ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಬೀದಿನಾಯಿ, ಹುಚ್ಚುನಾಯಿಗಳ ದಾಳಿ ಬಗ್ಗೆ ಕನ್ನಡಪ್ರಭ ವರದಿ ಬೆನ್ನಲ್ಲೇ ಎಚ್ಚೆತ್ತ ಬಾಗಲಕೋಟೆ ನಗರಸಭೆಯ ಅಧಿಕಾರಿಗಳು, ನಗರದ ತೆಂಗಿನಮಠ ಓಣಿ, ಚರಂತಿಮಠ ಓಣಿಯಲ್ಲಿ ನಾಯಿಗಳನ್ನು ಸೆರೆ ಹಿಡಿದು, ಅವುಗಳಿಗೆ ಎಬಿಎಸ್ ಇಂಜೆಕ್ಷನ್ ಹಾಕುತ್ತಿದ್ದಾರೆ. ಮತ್ತೊಂದೆಡೆ ಬೈಲಹೊಂಗಲದಲ್ಲೂ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ