
ಬೆಂಗಳೂರು (ಮೇ.13): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಉದ್ದೇಶಿದ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ಮಾಲೀಕರಿಗೆ ಮೊದಲ ಹಂತದಲ್ಲಿ 18 ಸಾವಿರ ನಿವೇಶನಗಳನ್ನು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು 3,052 ಭೂ ಮಾಲೀಕರು ತಮ್ಮ ಆಸ್ತಿಯನ್ನು ಶಿವರಾಂ ಕಾರಂತ ಬಡಾವಣೆಗೆ ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು 18 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಲಾಗುತ್ತಿದೆ. ಮೇ 15ರಿಂದಲೇ ಮಾಲೀಕರು ನಿವೇಶನ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೇಂದ್ರಿಯ ಇ ಗವರ್ನೆನ್ಸ್ ನಿಂದ ಸಾಫ್ಟವೇರ್ ಅಭಿವೃದ್ಧಿಪಡಿಸಿ ಅದರ ಮೂಲಕ ಹಂಚಿಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಒಂದು ಇಲ್ಲವೇ 2 ಎಕರೆ ಅಥವಾ ಹೆಚ್ಚು ಭೂಮಿ ಹೊಂದಿದ್ದ ಮಾಲೀಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ. ಒಂದೇ ಜಾಗದಲ್ಲಿ ದೊಡ್ಡ ನಿವೇಶನ ಬೇಕು ಎಂದವರಿಗೂ ಅವಕಾಶ ಕೊಟ್ಟಿದ್ದು 7 ಜನರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. 1 ಎಕರೆ ಜಮೀನು ಇದ್ದರೆ ಒಂದೇ ಜಾಗದಲ್ಲಿ 9,583 ಚದರ ಅಡಿ ಜಾಗ ನೀಡಲಾಗುವುದು. ಇದರ ಮೂಲಕ ಎತ್ತರದ ಕಟ್ಟಡಗಳಿಗೆ ಅವಕಾಶ ಮಾಡಿಕೊಡಲು ಈ ರೀತಿ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಬಿಡಿಎ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡಗಳಿಗೆ ಸಕ್ರಮ ಮಾಡಿಕೊಳ್ಳಲು 2020ರಲ್ಲಿ ಬಿಜೆಪಿ ಸರ್ಕಾರ ‘38 ಡಿ’ಎನ್ನುವ ಕಾನೂನು ಜಾರಿಗೆ ತಂದಿತ್ತು. ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಬಿಡಿಎ ಲೇಔಟ್‌ಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು. ಇದರಲ್ಲಿ 570 ಜನ ಮಾತ್ರ ಅರ್ಜಿ ಸಲ್ಲಿಸಿದ್ದರು.
200 ರಿಂದ 600 ಅಡಿವರೆಗೆ ಶೇ.10 ರಷ್ಟು, 600 ರಿಂದ 900 ಅಡಿವರೆಗೆ ಶೇ.25 ರಷ್ಟು, 1200 ರಿಂದ 2400 ವರೆಗೆ ಶೇ.40 ರಷ್ಟು, 2400 ರಿಂದ 4000 ವರೆಗೂ ಶೇ.50 ರಷ್ಟು ಮಾರ್ಗಸೂಚಿ ದರದಲ್ಲಿ (ಗೈಡೆನ್ಸ್ ವ್ಯಾಲ್ಯೂ) ಶುಲ್ಕ ಕಟ್ಟಲು ಕಾನೂನಿನಲ್ಲಿ ಅವಕಾಶ ಮಾಡಲಾಗಿತ್ತು. ಆಗ 6 ತಿಂಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಶುಲ್ಕ ಹೆಚ್ಚಾಯಿತು ಎಂದು ಯೋಜನೆ ಪ್ರಯೋಜನ ಪಡೆದುಕೊಂಡಿರಲಿಲ್ಲ ಎಂದರು.
ಈಗ ಅರ್ಜಿ ಹಾಕಲು ಜೂ.15 ರಿಂದ ಒಟ್ಟು 3 ತಿಂಗಳು ಅವಕಾಶ ಕಲ್ಪಿಸಿಕೊಡಲಾಗುವುದು. ಓಟಿಎಸ್ ಜಾರಿ ಮಾಡಲಾಗುವುದು. ಮೊದಲ 100 ದಿನ ಅರ್ಜಿ ಸಲ್ಲಿಸಲು, ಮತ್ತೆ 100 ದಿನ ಅರ್ಜಿ ಪರಿಶೀಲನೆಗೆ, ನಂತರ ಪಾವತಿಗೆ ಅವಕಾಶ ನೀಡಲಾಗವುದು. 1 ವರ್ಷ ಕಾಲಮಿತಿಯೊಳಗೆ ಅಂದರೆ 2027ರ ಜೂನ್‌ಗೆ ಈ ಯೋಜನೆ ಮುಕ್ತಾಯಗೊಳಿಸಲಾಗುವುದು ಎಂದು ಹೇಳಿದರು.
3 ತಿಂಗಳ ಒಳಗೆ ಅರ್ಜಿ ಸಲ್ಲಿಸಿದವರು ಶೇ 10ರ ಬದಲು ಶೇ.5ರಷ್ಟು ಮಾತ್ರ ಪಾವತಿ ಮಾಡಬಹುದು. ಅವರಿಗೆ ಶೇ.50ರಷ್ಟು ರಿಯಾಯಿತಿ ದೊರೆಯಲಿದೆ. ಕಾನೂನಿನ ಚೌಕಟ್ಟಿನಲ್ಲಿಯೇ ರಿಯಾಯಿತಿ ನೀಡಲಾಗಿದೆ. ಗೈಡೆನ್ಸ್ ವ್ಯಾಲ್ಯೂ ಪೈಕಿ ಶೇ. 25 ಇರುವ ಕಡೆ ಶೇ 12.5, ಶೇ.40 ಇರುವ ಕಡೆ ಶೇ.20 ರಷ್ಟು, ಶೇ.50 ಇರುವ ಕಡೆ ಶೇ.25 ರಷ್ಟು ರಿಯಾಯಿತಿ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಅವರು ಸೇರಿದಂತೆ ಸಚಿವರ ಬಳಿಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ