ಕರ್ನಾಟಕದಲ್ಲಿ ಸಂಘ ಪರಿವಾರಕ್ಕೆ ಭದ್ರ ಅಡಿಪಾಯ ಹಾಕಿದ ಈ ಮಹಾನ್ ವ್ಯಕ್ತಿ ಯಾರು ಗೊತ್ತಾ?

Kannadaprabha News   | Kannada Prabha
Published : May 14, 2026, 09:59 AM IST
Who Built Karnataka s Sangh Parivar The Story of MC Jayadeva written by ct ravi

ಸಾರಾಂಶ

ಮೈ.ಚ.ಜಯದೇವ ಅವರು ಕರ್ನಾಟಕದಲ್ಲಿ ಸಂಘ ಪರಿವಾರ ಕಟ್ಟಿಬೆಳೆಸಿದ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರು. ರಾಷ್ಟ್ರೋತ್ಥಾನ ಪರಿಷತ್‌ನಂಥ ಸಂಸ್ಥೆಗಳ ಮೂಲಕ ಸಾಂಸ್ಕೃತಿಕ ಚಳವಳಿ ರೂಪಿಸಿದರು. ಸಂಘಟನಾ ಚಾತುರ್ಯ, ಸಮನ್ವಯ ಸಾಮರ್ಥ್ಯ, ಮೌನ ಕಾರ್ಯಶೈಲಿಯಿಂದ 'ಧ್ಯೇಯವೇ ದೊಡ್ಡದು' ಎಂಬ ತತ್ವಕ್ಕೆ ಸಾಕ್ಷಿಯಾಗಿದ್ದರು.

-ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯರು.

ಮೈಸೂರಿನ ಮಣ್ಣಿನಲ್ಲಿ 1932ರ ಫೆಬ್ರವರಿ 18ರಂದು ಜನಿಸಿದ ಮೈ.ಚ.ಜಯದೇವ ಅವರು ಕರ್ನಾಟಕದಲ್ಲಿ ಸಂಘ ಪರಿವಾರವನ್ನು ಕಟ್ಟಿ ಬೆಳೆಸಿದ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರು. ಅತ್ಯಂತ ಸಮರ್ಪಿತ ಭಾವ, ಸಂಘಟನಾ ಚಾತುರ್ಯ ಮತ್ತು ಮೌನದಲ್ಲಿ ಮಹತ್ತರ ಕಾರ್ಯಗಳನ್ನು ನೆರವೇರಿಸಿದ ಇವರ ಜೀವನವು ‘ವ್ಯಕ್ತಿಗಿಂತ ಧ್ಯೇಯ ದೊಡ್ಡದು’ ಎಂಬ ತತ್ವಕ್ಕೆ ಜೀವಂತ ಸಾಕ್ಷಿಯಾಗಿದೆ.

ಬಾಲ್ಯ ಮತ್ತು ಸಂಘಟನಾ ಹಾದಿ:

ಯೌವನದಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ತತ್ವಗಳಿಗೆ ಆಕರ್ಷಿತರಾದ ಜಯದೇವ ಅವರು, 1950ರ ದಶಕದಲ್ಲೇ ಸಕ್ರಿಯರಾದರು. ಬಿ.ಎಸ್ಸಿ ಮತ್ತು ಕಾನೂನು ಪದವೀಧರರಾಗಿದ್ದ ಅವರು, ಕೆಲಕಾಲ ವೃತ್ತಿ ಜೀವನದಲ್ಲಿದ್ದರೂ ಅವರ ಮನಸ್ಸು ಸದಾ ಸಮಾಜ ಸೇವೆಯತ್ತಲೇ ಇತ್ತು.

1960ರಲ್ಲಿ ಬೆಂಗಳೂರು ಮಹಾನಗರದ ಜವಾಬ್ದಾರಿ ಹೊತ್ತು ಸಂಘಟನೆಯನ್ನು ಬಲಪಡಿಸಿದ ಅವರು, ತಮ್ಮ ಶಿಸ್ತು, ಕಾರ್ಯನಿಷ್ಠೆ ಮತ್ತು ಸಮನ್ವಯ ಸಾಮರ್ಥ್ಯದ ಮೂಲಕ ಕಾರ್ಯಕರ್ತರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದರು. 1995ರಲ್ಲಿ ಪ್ರಚಾರಕರಾಗಿ ನಿಯುಕ್ತರಾದ ಅವರು, ಮುಂದೆ ಕ್ಷೇತ್ರೀಯ ಪ್ರಚಾರಕರಾಗಿ ಹಾಗೂ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿ ಸಂಘಟನೆಯನ್ನು ಅತ್ಯುನ್ನತ ಮಟ್ಟದಲ್ಲಿ ಮುನ್ನಡೆಸಿದರು.

ರಾಷ್ಟ್ರೋತ್ಥಾನ ಪರಿಷತ್:-ಒಂದು ಸಾಂಸ್ಕೃತಿಕ ಚಳವಳಿ

1965ರಲ್ಲಿ ಸ್ಥಾಪನೆಯಾದ ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆಯ ಬೆಳವಣಿಗೆಯಲ್ಲಿ ಜಯದೇವ ಅವರು ಕೇಂದ್ರಬಿಂದುವಾಗಿದ್ದರು. ಸುಮಾರು ಮೂರು ದಶಕಗಳ ಕಾಲ ಅದರ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ, ಸಂಸ್ಥೆಯನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿದರು.

‘ಭಾರತ-ಭಾರತಿ ಪುಸ್ತಕ ಮಾಲಿಕೆ’ ಎಂಬ ಸಾಹಿತ್ಯ ಪ್ರಯೋಗವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚೈತನ್ಯ ಮೂಡಿಸಿತು. ಇಂದಿಗೂ ಅದು ಮನೆಮಾತಾಗಿದೆ. ಸಾರ್ವಜನಿಕ ಹಣವನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಶಿಸ್ತಿನಿಂದ ಬಳಸಬೇಕು ಎಂಬುದಕ್ಕೆ ಅವರೇ ಮಾದರಿಯಾಗಿದ್ದರು.

ತುರ್ತು ಪರಿಸ್ಥಿತಿ, ಹೋರಾಟದ ಮನೋಭಾವ:

1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯದೇವ ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನು ಅನುಭವಿಸಿದರು. ಜೈಲಿನಲ್ಲಿದ್ದಾಗಲೂ ಅವರು ಸಹಬಂಧಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ವ್ಯವಸ್ಥಿತವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ತೋರಿದ ಧೈರ್ಯ ಮತ್ತು ನಾಯಕತ್ವ ಎಲ್ಲರಿಗೂ ಪ್ರೇರಣೆಯಾಯಿತು.

ವ್ಯಕ್ತಿತ್ವದ ವಿಶೇಷತೆಗಳು:

ಜಯದೇವ ಅವರದ್ದು ಬಹುಮುಖಿ ವ್ಯಕ್ತಿತ್ವ. ಅವರು ಹೊರನೋಟಕ್ಕೆ ಗಂಭೀರರಾಗಿದ್ದರೂ, ಅಂತರಂಗದಲ್ಲಿ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದರು.

ಕಾರ್ಯಕರ್ತರನ್ನು ಬೆಳೆಸುವಲ್ಲಿ ಅವರು ನಿಷ್ಣಾತರು. ತಪ್ಪುಗಳನ್ನು ಅತ್ಯಂತ ಸೌಮ್ಯವಾಗಿ ತಿದ್ದುತ್ತಿದ್ದರು. ಕಾರ್ಯಕರ್ತರು ಮಾತುಕತೆಯ ನಂತರ ತಮ್ಮ ಚಿಂತನೆಗಳನ್ನು ಬರವಣಿಗೆಯ ಮೂಲಕ ಸ್ಪಷ್ಟಪಡಿಸಿಕೊಳ್ಳುವ ಅಭ್ಯಾಸ ಬೆಳೆಸಬೇಕೆಂದು ಅವರು ಒತ್ತಿ ಹೇಳುತ್ತಿದ್ದರು.

ಅವರು ಸಂಪ್ರದಾಯದ ಮೌಲ್ಯಗಳನ್ನು ಕಾಪಾಡಿಕೊಳ್ಳುತ್ತಲೇ ಆಧುನಿಕ ತಂತ್ರಜ್ಞಾನ ಮತ್ತು ಆಲೋಚನೆಗಳನ್ನು ಸ್ವಾಗತಿಸುತ್ತಿದ್ದರು. ಇದೇ ಕಾರಣಕ್ಕೆ ಹಳೆಯ ತಲೆಮಾರಿನವರಿಗೂ ಹೊಸ ಪೀಳಿಗೆಯವರಿಗೂ ಅವರು ಸಮಾನವಾಗಿ ಪ್ರೇರಣೆಯಾಗಿದ್ದರು.

ಪ್ರಾಯೋಗಿಕ ಚಿಂತನೆಯ ಸಮನ್ವಯಕಾರ:

ಮೈ.ಚ.ಜಯದೇವ ಅವರ ವ್ಯಕ್ತಿತ್ವದ ಅತ್ಯಂತ ವಿಶಿಷ್ಟ ಗುಣವೆಂದರೆ, ಯಾವುದೇ ಸಮಸ್ಯೆಯನ್ನು ಭಾವನಾತ್ಮಕವಾಗಿ ಅಲ್ಲದೆ, ಪ್ರಾಯೋಗಿಕ ಮತ್ತು ವಾಸ್ತವ ನೆಲೆಯಲ್ಲಿ ವಿಶ್ಲೇಷಿಸಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ. ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯಗಳು ಉಂಟಾದಾಗಲಿ, ಪರಿವಾರದ ಸಂಘಟನೆಗಳ ನಡುವೆ ಪರಸ್ಪರ ವಿರೋಧಭರಿತ ನಿಲುವುಗಳು ವ್ಯಕ್ತವಾದಾಗಲಿ, ಅವರು ನೀಡುತ್ತಿದ್ದ ಸಲಹೆಗಳು ಸಮಷ್ಟಿ ಹಿತವನ್ನು ಗಮನದಲ್ಲಿಟ್ಟುಕೊಂಡ ಸಮತೋಲನದ ಮಾರ್ಗದರ್ಶನವಾಗಿರುತ್ತಿತ್ತು.

ಈ ಕುರಿತು ನನಗೆ ನಡೆದ ಒಂದು ಅನುಭವ ಸದಾ ಸ್ಮರಣೀಯವಾಗಿದೆ.

ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ, ಖಾಸಗಿ ವಿಶ್ವವಿದ್ಯಾಲಯ ಮಸೂದೆಗೆ ಸಂಬಂಧಿಸಿದಂತೆ ವಿಚಾರ ಪರಿವಾರದ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸಲು ಮೈ.ಚ.ಜಯದೇವ ಅವರು ನಮ್ಮನ್ನು ಕೇಶವಶಿಲ್ಪಕ್ಕೆ ಆಹ್ವಾನಿಸಿದ್ದರು. ಅಲ್ಲಿ ನಡೆದ ಚರ್ಚೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಯಾವ ರೀತಿಯ ಷರತ್ತುಗಳನ್ನು ವಿಧಿಸಬೇಕು, ಶಿಕ್ಷಣದ ಗುಣಮಟ್ಟವನ್ನು ಹೇಗೆ ಕಾಪಾಡಬೇಕು ಎಂಬುದರ ಕುರಿತು ವಿಶದವಾದ ಸಮಾಲೋಚನೆ ನಡೆಯಿತು.

ಆ ಚರ್ಚೆಯಲ್ಲಿ ಬಂದ ಬಹುತೇಕ ಎಲ್ಲಾ ಸಲಹೆಗಳನ್ನು ನಾವು ಖಾಸಗಿ ಶಿಕ್ಷಣ ಪ್ರವೇಶ ಮತ್ತು ಖಾಸಗಿ ವಿಶ್ವವಿದ್ಯಾಲಯ ಮಸೂದೆಗಳಲ್ಲಿ ಅಳವಡಿಸಿಕೊಂಡೆವು. ಆದರೆ ನಂತರ ಕೆಲವರು ಅದೇ ಮಸೂದೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮನ್ವಯ ಸಭೆ ನಡೆಯಿತು.

ಆ ಸಂದರ್ಭದಲ್ಲಿ ಮೈ.ಚ.ಜಯದೇವ ಅವರು ಎರಡೂ ಪಕ್ಷಗಳ ಮಾತುಗಳನ್ನು ಅತ್ಯಂತ ಶಾಂತವಾಗಿ ಆಲಿಸಿದರು. ಆಗ ನಾನು, ‘ಇವರು ನೀಡಿದ ಎಲ್ಲ ಸಲಹೆಗಳನ್ನು ನಾವು ಮಸೂದೆಯಲ್ಲಿ ಅಳವಡಿಸಿದ್ದೇವೆ. ಅವುಗಳನ್ನು ಜಾರಿಗೆ ತಂದ ಮೇಲೂ ಮತ್ತೆ ವಿರೋಧ ಏಕೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ,’ ಎಂದು ಹೇಳಿದೆ.

ಅದಕ್ಕೆ ಅವರು ಅತ್ಯಂತ ಸ್ಪಷ್ಟವಾಗಿ ಪ್ರತಿಕ್ರಿಯಿಸಿದರು:

‘ಈಗ ಇದರೊಳಗೆ ಯಾರಿಗೆ ಅನ್ವಯಿಸುತ್ತದೆ, ಯಾರಿಗೆ ಅನ್ವಯಿಸುವುದಿಲ್ಲ ಎಂಬ ಭೇದ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ನಿಯಮಗಳು ಅನ್ವಯಿಸಬೇಕು. ಷರತ್ತುಗಳನ್ನು ಪೂರೈಸುವವರು ಮಾತ್ರ ವಿಶ್ವವಿದ್ಯಾಲಯ ಆರಂಭಿಸಲು ಅರ್ಹರಾಗುತ್ತಾರೆ. ಇದರಲ್ಲಿ ತಪ್ಪೇನಿದೆ?’

ಅವರ ಈ ಮಾತು ಆಡಳಿತದಲ್ಲಿ ಸಮಾನತೆಯ ತತ್ವ ಎಷ್ಟು ಮುಖ್ಯವೆಂಬುದನ್ನು ಸ್ಪಷ್ಟಪಡಿಸಿತು. ನಾನು ಸಹ, ‘ಪ್ರಜಾಪ್ರಭುತ್ವದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮಾನದಂಡಗಳನ್ನು ಅನ್ವಯಿಸಲು ಸಾಧ್ಯವಿಲ್ಲ. ಎಲ್ಲರಿಗೂ ಒಂದೇ ನಿಯಮ ಅನ್ವಯಿಸಬೇಕು,’ ಎಂದು ಹೇಳಿದ್ದೆ.

ಅವರು ಸೂಚಿಸಿದ್ದ ಷರತ್ತುಗಳೂ ಅತ್ಯಂತ ಸ್ಪಷ್ಟ ಮತ್ತು ಕಾರ್ಯೋಚಿತವಾಗಿದ್ದವು - ಯುಜಿಸಿ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆಯಬೇಕು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಅಗತ್ಯವಾದ ಕನಿಷ್ಠ ಭೂಮಿಯ ಮಾನದಂಡಗಳನ್ನು ಅನುಸರಿಸಬೇಕು, ಸರ್ಕಾರದ ನೀತಿಗಳನ್ನು ಉಲ್ಲಂಘಿಸಬಾರದು, ಶೇ.40ರಷ್ಟು ಸೀಟ್‌ಗಳನ್ನು ಸರ್ಕಾರಿ ಶುಲ್ಕ ಸಂರಚನೆಯಡಿ ನೀಡಬೇಕು ಹಾಗೂ ಮೀಸಲಾತಿ ಮತ್ತು ರೋಸ್ಟರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಷರತ್ತುಗಳನ್ನು ಅವರು ಒತ್ತಿ ಹೇಳಿದರು.

ಈ ಎಲ್ಲ ವಿಚಾರಗಳನ್ನು ಆಲಿಸಿದ ಬಳಿಕ ಅವರು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದರು:

‘ಈ ಷರತ್ತುಗಳನ್ನು ಸಂಪೂರ್ಣವಾಗಿ ಪಾಲಿಸುವವರು ಮಾತ್ರ ಅರ್ಜಿ ಸಲ್ಲಿಸಬಹುದು. ನಿಯಮಗಳನ್ನು ಪೂರೈಸದವರಿಗೆ ಅವಕಾಶ ಇರಬಾರದು.’

ಈ ನಿಲುವಿನ ಪರಿಣಾಮವಾಗಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸ್ಪಷ್ಟ ನಿಯಮಾವಳಿ ರೂಪುಗೊಂಡಿತು. ಇಂದು ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ನೀಡುತ್ತಿರುವ ಮಹತ್ತರ ಕೊಡುಗೆಯ ಹಿಂದೆ ಅಂಥ ಸಮತೋಲನದ ಚಿಂತನೆಯೂ ಒಂದು ಕಾರಣವಾಗಿದೆ.

ಯಾವುದೇ ಸಮಸ್ಯೆ ಬಂದರೂ ಅದನ್ನು ಭಾವೋದ್ರೇಕದಿಂದಲ್ಲ, ವಾಸ್ತವಿಕ ನೆಲೆಯಲ್ಲಿ ನೋಡಿ ಪರಿಹಾರ ನೀಡುವುದು ಮೈ.ಚ.ಜಯದೇವ ಅವರ ವಿಶೇಷತೆ ಆಗಿತ್ತು. ಸಮಸ್ಯೆಯ ಆಳ-ಅಗಲವನ್ನು ಅರ್ಥಮಾಡಿಕೊಂಡು, ವ್ಯಕ್ತಿಗಿಂತ ಸಂಘಟನೆ ಮತ್ತು ಸಮಷ್ಟಿ ಹಿತವೇ ಮುಖ್ಯ ಎಂಬ ದೃಷ್ಟಿಯಿಂದ ಅವರು ಮಾರ್ಗದರ್ಶನ ನೀಡುತ್ತಿದ್ದರು. ಅದಕ್ಕಾಗಿಯೇ ಅವರ ಸಲಹೆಗಳು ಸಾಮಾನ್ಯವಾಗಿ ಎಲ್ಲರಿಗೂ ಸ್ವೀಕಾರಾರ್ಹವಾಗುತ್ತಿತ್ತು.

ನಮ್ಮಲ್ಲಿ ಸ್ಥಳೀಯ ಮಟ್ಟದಲ್ಲಿ ಸಮಸ್ಯೆಗಳು ಎದುರಾದಾಗ, ಚಿಕ್ಕಮಗಳೂರು ಜಿಲ್ಲೆಯ ವಿಚಾರಗಳಿಗೆ ಶಿವಮೊಗ್ಗದ ಸೆಷನ್ ಕೋರ್ಟ್ ಹೇಗೋ, ನಮಗೆ ಜಯದೇವರು ಹೈಕೋರ್ಟ್ ನ್ಯಾಯಾಧೀಶರಂತಿದ್ದರು. ಅಂತಿಮ ಸಮನ್ವಯ ಮತ್ತು ಪರಿಹಾರ ಅಲ್ಲಿ ಸಿಗುತ್ತಿತ್ತು. ಅಲ್ಲಿ ಪಕ್ಷೀಯತೆಗೂ, ವೈಯಕ್ತಿಕ ಆಸಕ್ತಿಗೂ ಅವಕಾಶ ಇರಲಿಲ್ಲ - ಧ್ಯೇಯ ಮತ್ತು ಸಮಷ್ಟಿ ಹಿತವೇ ಪ್ರಮುಖವಾಗಿತ್ತು.

ತೆರೆಯ ಮರೆಯ ‘ಚಾಣಕ್ಯ’:

ರಾಜಕೀಯ ಕ್ಷೇತ್ರದಲ್ಲಿಯೂ ಇವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಜನಸಂಘ ಮತ್ತು ಬಿಜೆಪಿಯ ಬೆಳವಣಿಗೆಗೆ ಬೇಕಾದ ನೈತಿಕ ಶಕ್ತಿ ಮತ್ತು ಕಾರ್ಯಕರ್ತರ ಪಡೆಯನ್ನು ಸಿದ್ಧಪಡಿಸುವಲ್ಲಿ ಇವರು ಅಮೂಲ್ಯ ಮಾರ್ಗದರ್ಶನ ನೀಡಿದರು. ಅನೇಕ ನಾಯಕರನ್ನು ಚುನಾವಣೆಗೆ ಸಜ್ಜುಗೊಳಿಸಿದರೂ, ಅವರು ಎಂದಿಗೂ ತಮ್ಮ ಹೆಸರನ್ನು ಮುನ್ನೆಲೆಗೆ ತರಲಿಲ್ಲ.

ಆಧುನಿಕತೆ ಮತ್ತು ತತ್ವನಿಷ್ಠೆಯ ಸಮತೋಲನ:

ಮೈ.ಚ.ಜಯದೇವ ಅವರ ಮತ್ತೊಂದು ವಿಶಿಷ್ಟ ಗುಣವೆಂದರೆ, ಕಾಲದ ಬದಲಾವಣೆಯನ್ನು ಅರ್ಥಮಾಡಿಕೊಂಡು, ತತ್ವಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಪ್ರಾಯೋಗಿಕ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ. ಅವರು ಸಂಪ್ರದಾಯದ ಮೌಲ್ಯಗಳನ್ನು ಗಟ್ಟಿಯಾಗಿ ನಂಬಿದವರಾಗಿದ್ದರೂ, ಸಮಾಜದ ಬದಲಾದ ಅಗತ್ಯಗಳಿಗೆ ಅನುಗುಣವಾಗಿ ಸಂಘಟನೆಗಳು ರೂಪಾಂತರಗೊಳ್ಳಬೇಕು ಎಂಬ ನಿಲುವು ಹೊಂದಿದ್ದರು.

ಒಮ್ಮೆ ‘ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಬೇಕೇ ಬೇಡವೇ?’ ಎಂಬ ವಿಚಾರವಾಗಿ ಸಂಘಟನಾ ವಲಯದಲ್ಲಿ ಗಂಭೀರ ಚರ್ಚೆ ನಡೆದಿತ್ತಂತೆ. ಆ ಸಮಯದಲ್ಲಿ ಸಮಾಜದಲ್ಲಿ ವೇಗವಾಗಿ ಬದಲಾಗುತ್ತಿದ್ದ ಪರಿಸ್ಥಿತಿಯ ಪರಿಣಾಮವಾಗಿ, ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಬೇಕೆಂದು ಬಯಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ, ಮೈ.ಚ.ಜಯದೇವ ಅವರು ಅತ್ಯಂತ ಪ್ರಾಯೋಗಿಕ ಮತ್ತು ದೂರದೃಷ್ಟಿಯ ನಿಲುವನ್ನು ವ್ಯಕ್ತಪಡಿಸಿದರು.

ಅವರು ಹೇಳಿದ್ದು: ‘ಬೋಧನಾ ಮಾಧ್ಯಮ ಯಾವುದಾದರೇನು? ಮಕ್ಕಳಲ್ಲಿ ಸಂಸ್ಕಾರ ಮತ್ತು ರಾಷ್ಟ್ರೀಯತೆಯ ಭಾವನೆಗಳು ಜಾಗೃತಗೊಳ್ಳುವುದು ಮುಖ್ಯ.’ ಈ ದೃಷ್ಟಿಕೋನದ ಆಧಾರದ ಮೇಲೆ, ಇಂಗ್ಲಿಷ್ ಮಾಧ್ಯಮವನ್ನು ಒಂದು ತಾತ್ಕಾಲಿಕ ತಂತ್ರವಾಗಿ (ಸ್ಟ್ರಾಟಜಿ) ಸ್ವೀಕರಿಸಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು. ಆದರೆ, ಆ ಮಾಧ್ಯಮದ ಮೂಲಕ ಮಕ್ಕಳಿಗೆ ಏನು ಕಲಿಸಬೇಕು, ಯಾವ ಮೌಲ್ಯಗಳನ್ನು ತುಂಬಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಇಂಗ್ಲಿಷ್ ಭಾಷೆಯಲ್ಲಿಯೇ ರಾಷ್ಟ್ರೀಯ ವಿಚಾರಗಳು, ಭಾರತೀಯ ಸಂಸ್ಕೃತಿ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿ ಶಿಕ್ಷಣ ನೀಡುವ ದಿಕ್ಕಿನಲ್ಲಿ ಚಿಂತನೆ ನಡೆಯಿತು. ಅದರ ಪರಿಣಾಮವಾಗಿ ರಾಷ್ಟ್ರೋತ್ಥಾನ ಸಂಸ್ಥೆಯು ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸಿಕೊಂಡಿತು. ಕಾಲದ ಅಗತ್ಯವನ್ನು ಅರ್ಥಮಾಡಿಕೊಂಡು, ತತ್ವ ಮತ್ತು ಪ್ರಾಯೋಗಿಕತೆಯ ನಡುವಿನ ಸಮತೋಲನವನ್ನು ಕಾಪಾಡಿಕೊಂಡು ಅವರು ತೆಗೆದುಕೊಂಡ ಈ ನಿರ್ಧಾರವು ದೂರದೃಷ್ಟಿಯ ನಾಯಕತ್ವಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ವಿಚಾರವನ್ನು ನಾನು ಇತರರಿಂದ ಕೇಳಿ ತಿಳಿದುಕೊಂಡಿದ್ದೇನೆ. ಈ ಘಟನೆಯೂ ಮೈ.ಚ.ಜಯದೇವ ಅವರ ಚಿಂತನೆ ಎಷ್ಟು ವಾಸ್ತವಾಧಾರಿತವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅವರು ಯಾವುದೇ ವಿಷಯವನ್ನು ಕೇವಲ ಭಾವನಾತ್ಮಕ ದೃಷ್ಟಿಯಿಂದ ನೋಡದೆ, ‘ಸಮಾಜದ ಮೇಲೆ ಅದರ ಪರಿಣಾಮ ಏನು?’ ಮತ್ತು ‘ಭವಿಷ್ಯದಲ್ಲಿ ಅದು ಹೇಗೆ ಉಪಯೋಗವಾಗಬಹುದು?’ ಎಂಬ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುತ್ತಿದ್ದರು.

ವನವಾಸಿ ಕಲ್ಯಾಣ ಆಶ್ರಮ, ಅಬಲಾಶ್ರಮ, ಮಿಥಿಕ್ ಸೊಸೈಟಿ ಮತ್ತು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗಳಂತಹ ಅನೇಕ ಸಂಸ್ಥೆಗಳು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಜಯದೇವ ಅವರ ಮಾರ್ಗದರ್ಶನ ಅತ್ಯಮೂಲ್ಯವಾಗಿತ್ತು. ನಿಸ್ವಾರ್ಥ ಸೇವೆ, ದೃಢ ತತ್ವನಿಷ್ಠೆ ಮತ್ತು ಸರಳ ಜೀವನದ ಮೂಲಕ ಮೈ.ಚ.ಜಯದೇವ ಅವರು ಲಕ್ಷಾಂತರ ಜನರಲ್ಲಿ ರಾಷ್ಟ್ರಪ್ರೇಮದ ಕಿಚ್ಚು ಹಚ್ಚಿದ್ದಾರೆ. ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ಒಂದು ಶಕ್ತಿಯಾಗಿ, ಮಾರ್ಗದರ್ಶಕರಾಗಿ ಇಂದಿಗೂ ನಮ್ಮ ನಡುವೆ ಸ್ಮರಣೀಯರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಿಜಾಬ್ ನಿಷೇಧ ವಿರುದ್ಧದ ಹೋರಾಟ ಕಥೆ: ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಮನದಾಳದ ಮಾತು
ಸರ್ಕಾರಿ ನೌಕರಿ ಕನಸು ಕಂಡವರಿಗೆ ಬಂಪರ್ ನ್ಯೂಸ್: 56 ಸಾವಿರ ಸರ್ಕಾರಿ ನೇಮಕಾತಿಗೆ ಗ್ರೀನ್‌ ಸಿಗ್ನಲ್‌!