
ವಿಧಾನಸಭೆ (ಡಿ.13): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾಗಗಳನ್ನು ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಬಿಜೆಪಿ ಸದಸ್ಯ ಮುನಿರತ್ನ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ಸರ್ಕಾರಿ ಜಮೀನುಗಳ ಅತಿಕ್ರಮಣ ತೆರವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿವೆ. ಕಾಂಗ್ರೆಸ್ ಸರ್ಕಾರವು ಸಹ ಒತ್ತುವರಿ ತೆರವುಗೊಳಿಸುವುದನ್ನು ಸಹಿಸುವುದಿಲ್ಲ. ಒತ್ತುವರಿ ಮಾಡುವವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಈಗಾಗಲೇ ಮ್ಯಾಪಿಂಗ್ ಮಾಡುವ ಕೆಲಸ ಮಾಡಲಾಗುತ್ತಿದೆ. ಒತ್ತುವರಿಯಾದರೆ ಇದರಲ್ಲಿ ಗೊತ್ತಾಗಲಿದೆ. ಕೆಲವು ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಜನತೆಯ ಉಪಯೋಗವಾಗುವಂತಹ ಪ್ರದೇಶಗಳನ್ನು ಒತ್ತುವರಿಯಾದರೆ ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ ತೆರವು ಕೆಲಸವನ್ನು ಕೈಗೊಳ್ಳುತ್ತೇವೆ ಎಂದರು. ಮುನಿರತ್ನ ಮಾತನಾಡಿ, ತಮ್ಮ ಕ್ಷೇತ್ರದದಲ್ಲಿ ವಾರ್ಡ್ ನಂ.73 ಮತ್ತು ಪ್ರಮೋದ್ ಲೇಔಟ್‌ನಲ್ಲಿ ಒತ್ತುವರಿ ನಡೆದಿದೆ. ಇಲ್ಲಿ ತೆರವುಗೊಳಿಸಿದರೆ ಪ್ರಭಾವಿ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸಲಾಗುತ್ತದೆ ಎಂದು ಹೇಳಿದರು. ಆಗ ಡಿ.ಕೆ.ಶಿವಕುಮಾರ್, ನಿಮಗಿಂತ ಪ್ರಭಾವಿಗಳಿದ್ದಾರೆಯೇ ಎಂದು ಕಾಲೆಳೆದರು.
ವೆಂಕಟೇಶ್ವರಿ ಏತ ನೀರಾವರಿ ಶೀಘ್ರ ಪ್ರಾರಂಭ: ತೇರದಾಳ ಕ್ಷೇತ್ರದ ವೆಂಕಟೇಶ್ವರಿ ಮತ್ತು ಕುಲ್ಹಳ್ಳಿ ಹುನ್ನೂರು ಏತ ನೀರಾವರಿ ಯೋಜನೆಗಳ ವೆಚ್ಚ ₹1.10 ಲಕ್ಷ ಕೋಟಿ ಆಗಿದ್ದು, ಇಲಾಖೆಯ ಬಜೆಟ್‌ಗಿಂತ ಹೆಚ್ಚಿನ ದುಡ್ಡು ಇದಕ್ಕೆ ವಿನಿಯೋಗಿಸಲಾಗಿದೆ. ಶೀಘ್ರದಲ್ಲೇ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದರು. ಈ ಎರಡು ಯೋಜನೆಗಳ ಬಗ್ಗೆ ಬಿಜೆಪಿ ಸದಸ್ಯ ಸಿದ್ದು ಸವದಿ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಯೋಜನೆಯ ಶೇ.95ರಷ್ಟು ಕಾಮಗಾರಿ ಪೂರ್ಣವಾಗಿದೆ.
ಪ್ರಯಾಣಿಕರೇ ಗಮನಿಸಿ: ಬೆಂಗಳೂರು-ಮಂಗಳೂರು ರೈಲು ಸೇವೆ 1 ವಾರ ರದ್ದು!
ಪ್ರಾಯೋಗಿಕವಾಗಿ ಪರೀಕ್ಷಿಸುವುದಷ್ಟೇ ಬಾಕಿಯುಳಿದಿದೆ. ಶೀಘ್ರದಲ್ಲೇ ಅದನ್ನು ಮಾಡಲಾಗುವುದು ಎಂದರು. ಇದಕ್ಕೂ ಮುನ್ನ ಮಾತನಾಡಿದ ಸಿದ್ದು ಸವದಿ, ಈ ಎರಡು ಯೋಜನೆಗಳು ಪ್ರಾರಂಭವಾದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಕಳೆದ 5 ತಿಂಗಳಿಂದ ವಿದ್ಯುತ್ ಪರಿವೀಕ್ಷಣೆ ಬಾಕಿ ಉಳಿದಿದೆ. ಶೀಘ್ರವೇ ಪೂರ್ಣಗೊಳಿಸಿ ಪ್ರಾರಂಭಿಸಬೇಕೆಂದು ಗಮನ ಸೆಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ