ಇನ್ಮುಂದೆ ಬಿಬಿ​ಎಂಪಿ ಹಲವು ವ್ಯವ​ಹಾ​ರ​ ಆನ್‌​ಲೈ​ನ್‌​ನ​ಲ್ಲಿ ಮಾತ್ರ

By Kannadaprabha NewsFirst Published Oct 7, 2020, 7:32 AM IST
Highlights

ಹೊಸ ರೂಲ್ಸ್‌- ಆನ್‌​ಲೈ​ನ್‌​ನಲ್ಲೇ ಅರ್ಜಿ ಸಲ್ಲಿಕೆ ಕಡ್ಡಾ​ಯ| ಆಸ್ತಿ ನೋಂದಣಿ, ತೆರಿಗೆ, ನಿರ್ಮಾಣ ಪರ​ವಾ​ನಗಿ ಮುಂತಾ​ದ ವ್ಯವ​ಹಾ​ರಕ್ಕೆ ಆನ್‌​ಲೈ​ನ್‌​ನಲ್ಲೇ ಅರ್ಜಿ| ಇವು​ಗ​ಳಿಗೆ ಇನ್ನು ಕಚೇ​ರಿಗೆ ಭೇಟಿ ನೀಡು​ವಂತಿ​ಲ್ಲ|  

ಬೆಂಗಳೂರು(ಅ.07):  ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿ, ತೆರಿಗೆ ಸಂಗ್ರಹ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಕಟ್ಟಡ ನಿರ್ಮಾಣವಾದ ನಂತರ ಸ್ವಾಧೀನಾನುಭವ ಪತ್ರ, ಇ-ಆಸ್ತಿ ಪತ್ರ, ರಸ್ತೆ ಕತ್ತರಿಸುವಿಕೆ ಅನುಮತಿ ಸೇರಿದಂತೆ ಇನ್ನಿತರ ವ್ಯವಹಾರಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

‘ಈಸ್‌ ಆಫ್‌ ಡೂಯಿಂಗ್‌ ಬಿಜಿನೆಸ್‌’ (ಉ​ದ್ಯಮ ಸ್ನೇಹಿ ವಾತಾ​ವ​ರ​ಣ​) ಸುಧಾರಣೆ ಯಶಸ್ವಿ ಅನುಷ್ಠಾನಕ್ಕೆ, ಭೌತಿಕ ಸಂಪರ್ಕ ಇಲ್ಲದೇ ಆನ್‌ಲೈನ್‌ ಮೂಲಕ ಮಾತ್ರ ಪ್ರಕ್ರಿಯೆಗೊಳಿಸಬೇಕೆಂಬ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಮಂಗಳವಾರ ಅನುಮೋದನೆ ನೀಡಿ ಜಾರಿಗೆ ಸೂಚಿಸಿದೆ.

ವಾಣಿಜ್ಯ ಪರವಾನಗಿ ಸೇರಿದಂತೆ ನಿರ್ದಿಷ್ಟ ವಿಷಯದ ಸಂಬಂಧ ಅನುಮತಿ ಪಡೆಯಬೇಕಾದಲ್ಲಿ ಕಚೇರಿಗೆ ಭೇಟಿ ನೀಡುವ ಬದಲು ಆನ್‌ಲೈನ್‌ನ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಸೇವೆಗೂ ನಿರ್ದಿಷ್ಟ ಶುಲ್ಕವನ್ನು ನಿಗದಿ ಮಾಡಲಾಗಿದ್ದು, ಶುಲ್ಕವನ್ನೂ ಕೂಡಾ ಆನ್‌ಲೈನ್‌ನ ಮೂಲಕವೇ ಪಾವತಿಸಬೇಕಾಗುತ್ತದೆ.

‘ಕಸ ರಸ್ತೆಗೆ ಎಸೆದರೆ ಅರೆಸ್ಟ್ : ವಿಂಗಡಿಸದಿದ್ದರೆ ಭಾರೀ ದಂಡ'

ಈಗಾಗಲೇ ಕೆಲವು ವ್ಯವಸ್ಥೆಯನ್ನು ಆನ್‌ಲೈನ್‌ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. ಆಸ್ತಿ ನೋಂದಣಿ, ತೆರಿಗೆ ಸಂಗ್ರಹ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ, ಕಟ್ಟಡ ನಿರ್ಮಾಣವಾದ ನಂತರ ಸ್ವಾಧೀನಾನುಭವ ಪತ್ರ, ಇ-ಆಸ್ತಿ ಪತ್ರ ಸೇರಿದಂತೆ ಹಲವು ಸೇವೆಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲಾಗಿದ್ದು, ಇದನ್ನು ಕಡ್ಡಾಯ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಆಸ್ತಿ ತೆರಿಗೆ, ನಿವೇಶನದ ಮೇಲಿನ ತೆರಿಗೆ, ರಸ್ತೆ ಅಗೆಯುವುದು, ರಸ್ತೆ ಅಗೆದ ನಂತರ ಅದನ್ನು ಪುನರ್‌ ನಿರ್ಮಾಣದ ಬಗ್ಗೆ ಸ್ಥಳ ಪರಿಶೀಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆಹಾರಕ್ಕೆ ಸಂಬಂಧಪಟ್ಟಂತೆ ಹೋಟೆಲ್‌, ಆಹಾರ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ ಉದ್ದಿಮೆ ಸ್ಥಾಪನೆಗೆ ನಿರಾಪೇಕ್ಷಣಾ ಪತ್ರ, ಹಾಸ್ಟೆಲ್, ಪಿಜಿ, ಪ್ಲೇ ಸ್ಕೂಲ್‌ಗಳಿಗೆ ಮಂಜೂರಾತಿ, ಆಡಿಟೋರಿಯಂ, ಮನರಂಜನಾ ಕೇಂದ್ರಗಳಿಗೆ ಪರವಾನಗಿ ಸಹ ಆನ್‌ಲೈನ್‌ ಮಾಡಲು ಸೂಚಿಸಲಾಗಿದೆ. ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿ ಭರ್ತಿ ವಿಚಾರದಲ್ಲಿ ಗೊಂದಲಗಳಿದ್ದಲ್ಲಿ ಅರ್ಜಿದಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ಅಧಿಕಾರಿಗಳು ಅನಗತ್ಯವಾಗಿ ನಿರಾಕರಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
 

click me!