ಬಿಬಿಎಂಪಿಗೆ 500 ಕೋಟಿಗೂ ಅಧಿಕ ನಷ್ಟವನ್ನುಂಟು ಮಾಡಿದ್ದ ಅಧಿಕಾರಿಗಳಿಗೆ ಢವ ಢವ| ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲು ಮುಂದಾದ ಬಿಬಿಎಂಪಿ ಆಯುಕ್ತರು|
ಬೆಂಗಳೂರು(ಆ.12): ಟೋಟಲ್ ಸ್ಟೇಷನ್ ಸರ್ವೆ ಅವ್ಯವಹಾರದ ಕುರಿತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲು ಬಿಬಿಎಂಪಿ ಆಯುಕ್ತರು ಮುಂದಾಗಿದ್ದಾರೆ.
ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ವಂಚನೆ ಮಾಡುತ್ತಿರುವವರನ್ನು ಪತ್ತೆ ಮಾಡಲು ಬಿಬಿಎಂಪಿ 105 ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆ ಮೂಲಕ ಕಟ್ಟಡ ವಿಸ್ತೀರ್ಣ ಪತ್ತೆಗೆ ಸೂಚನೆ ನೀಡಲಾಗಿತ್ತು. ಟೋಟಲ್ ಸ್ಟೇಷನ್ ಸರ್ವೆಯ ಕಾರ್ಯದಲ್ಲಿ ತೊಡಗಿದ್ದ ಅಧಿಕಾರಿಗಳು ತಪ್ಪಾಗಿ ಮಾಹಿತಿ ನೀಡಿ ಪಾಲಿಕೆಗೆ ಸುಮಾರು 500 ಕೋಟಿ ರು.ಗೂ ಅಧಿಕ ಆದಾಯ ನಷ್ಟಕ್ಕೆ ಕಾರಣವಾಗಿದ್ದಾರೆ ಎಂಬ ವರದಿಯನ್ನು ಸೋಮವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಾಗಿತ್ತು.
ವಿಸ್ತೀರ್ಣ ಕೈಬಿಟ್ಟು ಲೆಕ್ಕಾಚಾರ:
ಪೂರ್ವ ವಲಯದ ತಾರಾ ಹೊಟೇಲ್ ರಾಯಲ್ ಆರ್ಕೆಡ್ ಹೋಟಲ್ ಅನ್ನು ಪೂರ್ವ ವಲಯದ ಆಗಿನ ಜಂಟಿ ಆಯುಕ್ತ ರವೀಂದ್ರ ಹೋಟಲ್ ಮತ್ತು ರೆಸ್ಟೋರೆಂಟ್ ಎಂದು ಪರಿಗಣಿಸಿದ್ದರಿಂದ ಪಾಲಿಕೆಗೆ 21.46 ಕೋಟಿ ರು. ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆಸ್ತಿ ತೆರಿಗೆ ಪರಿಶೀಲನೆ ವೇಳೆ ವಿವಿಧ ಮಾದರಿಯ (ಶ್ರೇಣಿ ಆಸ್ತಿಯನ್ನು) ಒಂದೇ ಮಾದರಿಯಲ್ಲಿ ಪರಿಗಣಿಸಿಸಲಾಗಿದೆ. 2008-2009ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಿಸದೇ 2015 -16ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಮಹದೇವಪುರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತಂದಿಲ್ಲ.
ಬೆಂಗಳೂರಲ್ಲಿ 'ಕಂಟೈನ್ಮೆಂಟ್'ಗೆ ಬಿಬಿಎಂಪಿ ತಿಲಾಂಜಲಿ..?
ದಾಖಲೆ ಪರಿಶೀಲಿಸಿಲ್ಲ:
ಏಟ್ರಿಯಾ ಹೋಟಲ್‌ನ ಮೇಲ್ಮನವಿ ವಿಚಾರಣೆ ವೇಳೆ ಕಟ್ಟಡ ನಿರ್ಮಾಣದ ವರ್ಷವನ್ನು ಪರಿಗಣಿಸುವ ವೇಳೆ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡದೆ ಆಸ್ತಿ ತೆರಿಗೆದಾರರ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಕಟ್ಟಡ ನಿರ್ಮಾಣ ಮಾಡಿರುವ ವರ್ಷ ಪರಿಗಣಿಸಿದ್ದಾರೆ ಹಾಗೂ ಶೇ.3ರಷ್ಟು ಕಟ್ಟಡ ಸವಕಳಿ ಹೆಚ್ಚಾಗಿ ನೀಡಲಾಗಿದೆ. ಲಲಿತ್ ಅಶೋಕ್ ಹೊಟೇಲ್‌ನ ಏಳನೇ ಹಂತಸ್ತಿನಲ್ಲಿ 4,241 ಚದರ ಅಡಿ ತೆರೆದ ಬಾರ್ ಇರುವುದನ್ನು ವರದಿ ಮಾಡಿಲ್ಲ. ‘ಇ’ ವಲಯಕ್ಕೆ ಸೇರಿದ ಆಸ್ತಿಯನ್ನು ‘ಡಿ’ ವಲಯಕ್ಕೆ ಪರಿಗಣಿಸಿ ಲೆಕ್ಕಾಚಾರ ಮಾಡಿ ಆಸ್ತಿ ತೆರಿಗೆ ಪರಿಷ್ಕರಿಸಿ ತಪ್ಪೆಸಗಲಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಯಾವ ವಲಯದಲ್ಲಿ ಎಷ್ಟು ನಷ್ಟ?
ಪೂರ್ವ ವಲಯದಲ್ಲಿ 24,33,28,244 ರು. ನಷ್ಟವಾಗಿದೆ. ಯಲಹಂಕ ವಲಯದಲ್ಲಿ 48,50,55,841 ರು. ನಷ್ಟ, ದಕ್ಷಿಣ ವಲಯದಲ್ಲಿ 2,73,63,270ರು. ನಷ್ಟ, ಬೊಮ್ಮನಹಳ್ಳಿ 3,34,89,322 ರು. ನಷ್ಟ, ಮಹದೇವಪುರ ವಲಯದಲ್ಲಿ 8,62,14,428 ರು, ನಷ್ಟ ಉಂಟಾಗಿದೆ. ಮಹದೇವ ಪುರದಲ್ಲಿ ಇನ್ನಷ್ಟುಪ್ರಕರಣ ಇತ್ಯರ್ಥವಾಗುವುದು ಬಾಕಿ ಇದೆ ಎಂದು ತಿಳಿದು ಬಂದಿದೆ.