ಅರ್ಚಕ ನಾರಾಯಣಾಚಾರ್ ಮೃತದೇಹ ಪತ್ತೆ| ಅರ್ಚಕರ ಮನೆಯಿದ್ದ ಸ್ಥಳದಿಂದ 2.5 ಕಿ.ಮೀ. ದೂರದಲ್ಲಿ ದೊರಕಿದ ಶವ| ಪತ್ನಿ ಸೇರಿ ಇನ್ನೂ ಮುವರಿಗಾಗಿ ಶೋಧ| ಮನೆಯಿದ್ದ ಸ್ಥಳದಲ್ಲೇ ಸಾಕುನಾಯಿ, 2 ಕಾರು, ಮತ್ತಿತರ ವಸ್ತುಗಳು ಪತ್ತೆ| ಡಸ್ಟರ್, ಓಮ್ನಿ ಕಾರು ಸಂಪೂರ್ಣ ಜಖಂ
ವಿಗ್ನೇಶ್ ಎಂ. ಭೂತನಕಾಡು
ಮಡಿಕೇರಿ(ಆ.12): ಕಾವೇರಿ ನದಿ ಉಗಮಸ್ಥಳ ಕೊಡಗಿನ ತಲಕಾವೇರಿ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಕಳೆದ ಬುಧವಾರ ರಾತ್ರಿ ಸಂಭವಿಸಿದ ಭೂಕುಸಿತದ ವೇಳೆ ಕಣ್ಮರೆಯಾಗಿದ್ದ ತಲಕಾವೇರಿ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಐದು ದಿನದ ಕಾರ್ಯಾಚರಣೆ ಬಳಿಕ ನಾರಾಯಣ ಆಚಾರ್ ಅವರ ಮನೆಯಿದ್ದ ಸ್ಥಳದಿಂದ ಎರಡೂವರೆ ಕಿ.ಮೀ. ದೂರದಲ್ಲಿ ನಾಗತೀರ್ಥ ಎಂಬ ಸ್ಥಳದಲ್ಲಿ ಅವರ ಮೃತದೇಹ ದೊರಕಿದ್ದು ಮಂಗಳವಾರವೇ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
undefined
ಬೆಟ್ಟದ ಮೇಲಿನಿಂದ ಭೂಕುಸಿತ ಉಂಟಾಗಿ ಮಳೆ ನೀರಿನ ರಭಸಕ್ಕೆ ನಾರಾಯಣಾಚಾರ್ ಅವರ ಮೃತದೇಹ ಪ್ರಪಾತಕ್ಕೆ ಉರುಳಿ ಮಣ್ಣಿನಲ್ಲಿ ಹೂತು ಹೋಗಿತ್ತು. ಹರಿಯುತ್ತಿರುವ ನೀರು, ಬಂಡೆಕಲ್ಲುಗಳ ಮೂಲಕ ಸಾಗಿದ ರಕ್ಷಣಾ ಪಡೆ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತದೇಹವನ್ನು ಪತ್ತೆಹಚ್ಚಿತು. ನಂತರ ಬೆಟ್ಟದ ಹಾದಿಯಲ್ಲೇ ಎರಡೂವರೆ ಕಿಮೀ ಏರಿ ಹಗ್ಗದ ಸಹಾಯದ ಮೂಲಕ ಶವವನ್ನು ಹರಸಾಹಸಪಟ್ಟು ಎತ್ತಿಕೊಂಡು ಬಂದರು.
ಕಣ್ಮರೆಯಾಗಿರುವ ಐವರಲ್ಲಿ ಈಗಾಗಲೇ ಆನಂದ ತೀರ್ಥ, ನಾರಾಯಣಾಚಾರ್ ಅವರ ಮೃತದೇಹ ಪತ್ತೆಯಾಗಿದೆ. ನಾರಾಯಣಾಚಾರ್ ಅವರ ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿ ಕಿರಣ್, ಶ್ರೀನಿವಾಸ್ ಪಡ್ಡಿಲಾಯ ಅವರ ಮೃತದೇಹಗಳು ಇನ್ನಷ್ಟೇ ಪತ್ತೆಯಾಗಬೇಕಿದೆ.
ಬೆಳ್ಳಂಬೆಳಗ್ಗೆ ಕಾರ್ಯಾಚರಣೆ: ಮಂಗಳವಾರ ಬೆಳಗ್ಗನಿಂದಲೇ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ, ಸ್ಥಳೀಯ ಪೊಲೀಸರು, ಹೋಂ ಗಾರ್ಡ್‌ಗಳು ಸೇರಿ ಸುಮಾರು ನೂರಕ್ಕೂ ಅಧಿಕ ಮಂದಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ನಾರಾಯಣಾಚಾರ್ ಅವರ ಮನೆಯಿದ್ದ ಸ್ಥಳದಲ್ಲಿ ಮೊದಲು ಅವರ ಸಾಕುನಾಯಿಯ ಕಳೇಬರ ಪತ್ತೆಯಾಯಿತು. ಬಳಿಕ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಓಮ್ನಿ ಕಾರುಗಳು ಸಂಪೂರ್ಣ ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾದವು. ಜೊತೆಗೆ ಅರ್ಚಕರಿಗೆ ಸೇರಿದ ಹಲವು ವಸ್ತುಗಳು ಪತ್ತೆಯಾದವು.
ಸೋಮಣ್ಣ ಪರಿಶೀಲನೆ
ತಲಕಾವೇರಿಯಲ್ಲಿ ಗಜಗಿರಿ ಬೆಟ್ಟಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಖುದ್ದು ಭೇಟಿ ನೀಡಿ ಶೋಧ ಕಾರ್ಯಾಚರಣೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಹಲವು ಸಲಹೆ, ಮಾರ್ಗದರ್ಶನ ನೀಡಿದರಲ್ಲದೆ, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುವ ರಕ್ಷಣಾ ತಂಡಗಳಿಗೆ ಊಟ ಬಡಿಸುವ ಮೂಲಕ ಪ್ರೋತ್ಸಾಹ ತುಂಬಿದರು. ಹಾಗೆಯೇ ಸಚಿವರು ಸಹ ಕಾರ್ಯಾಚರಣೆ ತಂಡದೊಂದಿಗೆ ಊಟ ಮಾಡಿದ್ದು ವಿಶೇಷವಾಗಿತ್ತು. ಬಳಿಕ ಸಚಿವರು ನಾರಾಯಣ ಆಚಾರ್ ಅವರ ಮಕ್ಕಳ ಜೊತೆ ಚರ್ಚಿಸಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಇದ್ದರು.
ನಾರಾಯಣ ಆಚಾರ್ ಆಸ್ತಿ ಬಗ್ಗೆ ತರಾವರಿಯ ಚರ್ಚೆ - ಕುತೂಹಲ ಕೆರಳಿಸಿದ ಸ್ಥಳೀಯ ವದಂತಿ
ಅರ್ಚಕ ನಾರಾಯಣ ಆಚಾರ್ ಅವರ ಆಸ್ತಿ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿದೆ. ಬ್ರಹ್ಮಗಿರಿ ಬೆಟ್ಟದಲ್ಲಿರುವ ತಲಕಾವೇರಿ ದೇವಾಲಯದಲ್ಲಿ ಸುಮಾರು 12 ತಲೆಮಾರಿನಿಂದ ಆಚಾರ್ ಕುಟುಂಬ ಪೂಜೆಯ ಉಸ್ತುವಾರಿ ವಹಿಸಿಕೊಂಡು ಬರುತ್ತಿದೆ. ಅವರಿಗೆ ಏಲಕ್ಕಿ, ಕಾಫಿ ಹಾಗೂ ಕಾಳುಮೆಣಸು ಸೇರಿ 100 ಎಕರೆ ತೋಟವಿದೆ. ಅದರಲ್ಲಿ ಬೆಳೆದ 10 ಕ್ವಿಂಟಲ್ ಕರಿಮೆಣಸು, 5 ಕ್ವಿಂಟಲ್ ಏಲಕ್ಕಿ ಫಸಲನ್ನು 3 ವರ್ಷದಿಂದ ಮಾರಾಟ ಮಾಡದೆ ಮನೆಯಲ್ಲೇ ಇಟ್ಟುಕೊಂಡಿದ್ದರು. ಜೊತೆಗೆ ಸಾಕಷ್ಟುಚಿನ್ನಾಭರಣಗಳೂ ಇದ್ದಿದ್ದರಿಂದ ಅವರು ಮನೆ ಬಿಟ್ಟು ತೆರಳಲು ನಿರಾಕರಿಸಿದ್ದರು ಎಂಬ ಊಹಾಪೋಹಗಳು ಹರಿದಾಡುತ್ತಿದೆ. ಇನ್ನೊಂದೆಡೆ ಮೂಲತಃ ಕೃಷಿಕ ಕುಟುಂಬದವರಾಗಿರುವ ಅವರು ಅರ್ಚಕ ವೃತ್ತಿಯನ್ನೂ ಮುಂದುವರಿಸಿಕೊಂಡು ಬಂದಿದ್ದರು. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಅವರ ಬಳಿ ಆಸ್ತಿ ಇದ್ದಿರಬಹುದು ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಆಚಾರ್ ಕುಟುಂಬಸ್ಥರಾಗಲಿ, ಮಕ್ಕಳಾಗಲಿ, ಆಪ್ತರಾಗಲಿ ಯಾರೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ